‘ಹಂತಕ’ ಆರೋಪ; ಅಮೆರಿಕಾ ಅಧ್ಯಕ್ಷ ಜೋ ಬೈಡನ್ಗೆ ನೇರಾನೇರ ಚರ್ಚೆಗೆ ಆಹ್ವಾನವಿತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾ ಅಧ್ಯಕ್ಷರ ಪ್ರಮುಖ ಟೀಕಾಕಾರ ಎನಿಸಿಕೊಂಡಿರುವ ಅಲೆಕ್ಸಿ ನವಾಲ್ನಿ ಅವರ ಹೆಸರು ಈ ವಿವಾದ ಹೊತ್ತಿಕೊಳ್ಳಲು ಕಾರಣ. ಅಲೆಕ್ಸಿ ನವಾಲ್ನಿ ಅವರನ್ನು ಹತ್ಯೆಗೈಯಲು ಪುಟಿನ್ ವಿಷಪ್ರಾಶನ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ವಾಷಿಂಗ್ಟನ್ ಡಿಸಿ: ಅಮೆರಿಕಾ-ರಷ್ಯಾ ನಡುವಿನ ಸಂಬಂಧ ಇನ್ನೊಮ್ಮೆ ತೀವ್ರ ಪ್ರಮಾಣದಲ್ಲಿ ಹದಗೆಡುವ ಸಾಧ್ಯತೆಗಳು ಹೆಚ್ಚಾಗಿವೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ‘ಹಂತಕ’ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸಂಬೋಧಿಸಿದ್ದಾರೆ. ಇದು ಒಳಗೊಳಗೇ ನಡೆಯುತ್ತಿದ್ದ ಶೀತಲ ಸಮರ ಸ್ಫೋಟಗೊಳ್ಳಲು ದಾರಿಮಾಡಿಕೊಟ್ಟಿದೆ. ಜೋ ಬೈಡನ್ ಆರೋಪವನ್ನು ಪುಟಿನ್ ‘ನಾವು ನಮ್ಮದೇ ಗುಣವನ್ನೇ ಇತರರಲ್ಲಿ ಕಾಣುತ್ತೇವೆ’ ಎಂದು ಅಪಹಾಸ್ಯ ಮಾಡಿದ್ದಾರೆ. ಈ ಮೂಲಕ ಅಮೆರಿಕಾ ಅಧ್ಯಕ್ಷರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೇ ನಿಲ್ಲದ ವ್ಲಾಡಿಮಿರ್ ಪುಟಿನ್ ನೇರಾನೇರ ಚರ್ಚೆಗೆ ಜೋ ಬೈಡನ್ರನ್ನು ಆಹ್ವಾನಿಸಿದ್ದಾರೆ. ‘ಹಂತಕ’ ಎಂದು ಆರೋಪಿಸುವುದು ಸುಲಭ. ಆದರೆ, ಸಾಬೀತುಪಡಿಸುವುದು ಸುಲಭವಲ್ಲ ಎಂಬರ್ಥದಲ್ಲಿ ಅವರು ಬೈಡನ್ರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
ರಷ್ಯಾ ಅಧ್ಯಕ್ಷರ ಪ್ರಮುಖ ಟೀಕಾಕಾರ ಎನಿಸಿಕೊಂಡಿರುವ ಅಲೆಕ್ಸಿ ನವಾಲ್ನಿ ಅವರ ಹೆಸರು ಈ ವಿವಾದ ಹೊತ್ತಿಕೊಳ್ಳಲು ಕಾರಣ. ಅಲೆಕ್ಸಿ ನವಾಲ್ನಿ ಅವರನ್ನು ಹತ್ಯೆಗೈಯಲು ಪುಟಿನ್ ವಿಷಪ್ರಾಶನ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕಳೆದ ವರ್ಷ ಅಮೆರಿಕಾ ಮಾಡಿದ್ದ ಈ ಆರೋಪವನ್ನು ರಷ್ಯಾ ನಿರಾಕರಿಸಿತ್ತು. ಇದೀಗ ಸಂದರ್ಶನವೊಂದರಲ್ಲಿ ಜೋ ಬೈಡನ್ ಮತ್ತೊಮ್ಮೆ ಈ ಆರೋಪ ಮಾಡಿದ್ದು ತಣ್ಣಗಾಗಿದ್ದ ವಿವಾದ ಭುಗಿಲೇಳಲು ಕಾರಣವಾಗಿದೆ.
ಅಮೆರಿಕದ ನೂತನ ಮತ್ತು 46ನೇ ಅಧ್ಯಕ್ಷ ಜೊ ಬೈಡನ್ಗೆ ರಷ್ಯಾದ ಮೇಲೆ ಕೋಪ ಉಕ್ಕಿ ಬರಲು ಇನ್ನೊಂದು ಕಾರಣವೂ ಇದೆ. ವ್ಲಾಡಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಸಂಬಂದ ಉತ್ತಮವಾಗಿತ್ತು. ಇಬ್ಬರೂ ಪರಸ್ಪರ ಗೆಳೆತನ ಇಟ್ಟುಕೊಂಡಿದ್ದರು. ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅದ್ಯಕ್ಷರಾಗಿ ಆಯ್ಕೆಯಾಗುವಲ್ಲಿ ರಷ್ಯಾ, ರಷ್ಯಾದ ಗುಪ್ತಚರ ಸಂಸ್ಥೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈವಾಡ ಕೆಲಸ ಮಾಡಿದೆ ಎಂಬ ಆರೋಪಗಳಿವೆ. ಇದನ್ನು ಯಾವುದೇ ಅಧಿಕೃತ ಸಂಸ್ಥೆಯೂ ಸಂಪೂರ್ಣವಾಗಿ ಅಲ್ಲಗಳೆದಿಲ್ಲ. ಹೀಗಾಗಿ ಜೋ ಬೈಡನ್ಗೆ ರಷ್ಯಾದ ಅಧ್ಯಕ್ಷರ ಮೇಲೆ ಸಹಜವಾಗಿಯೇ ಕೋಪ ಉಕ್ಕಿಬಂದಿದೆ.
ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗಬೇಕೆಂದು ರಷ್ಯಾ ಮತ್ತು ಪುಟಿನ್ ಬಯಸಿದ್ದರು ಎಂದು ಗುಪ್ತಚರ ವರದಿಗಳು ಹೇಳಿವೆ. ಒಂದೊಮ್ಮೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗಿದ್ದರೆ ಪುಟಿನ್ಗೂ ಸಹಾಯಕವಾಗುತ್ತಿತ್ತು. 2020ರಲ್ಲೂ ಸಾಮಾಜಿಕ ಮಾಧ್ಯಮಗಳ ಪ್ರಭಾವದ ಮೂಲದ ಡೊನಾಲ್ಡ್ ಟ್ರಂಪ್ ಅವರನ್ನು ಆರಿಸಲು ಪುಟಿನ್ ಮತ್ತು ರಷ್ಯಾ ಗುಪ್ತಚರ ಸಂಸ್ಥೆ ಪ್ರಯತ್ನ ನಡೆಸಿತ್ತು ಎಂಬ ವಾದಗಳಿವೆ. ಇದೀಗ ಜೋ ಬೈಡನ್ ಆಯ್ಕೆ ವ್ಯಾದಿಮಿರ್ ಪುಟಿನ್ಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ ಎಂಬ ವಿಶ್ಲೇಷಣೆಗಳು ಜಾಗತಿಕ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ.
ಇದೇ ವಾರ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಏಷ್ಯಾದ ಕೆಲ ದೇಶಗಳೂ ಸೇರಿದಂತೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇಂಡೋ-ಫೆಸಿಫಿಕ್ ಕಡಲ ಪ್ರದೇಶಕ್ಕೆ ಸಂಬಂಧಿಸಿ ಭಾರತ ಮತ್ತು ಜಪಾನ್ ಜತೆಗೆ ಅವರು ಸಂವಾದ ನಡೆಸುವ ಸಾಧ್ಯತೆಗಳಿವೆ. ಇದೇ ಹೊತ್ತಲ್ಲಿ ರಷ್ಯಾದ ಜತೆಗಿನ ಅಮೆರಿಕ ಸಂಬಂಧ ಹದಗೆಟ್ಟಿದೆ. ಚೀನಾದ ಪರ ಒಲವು ಹೊಂದಿರುವ ರಷ್ಯಾ, ಈಗ ಅಮೇರಿಕಾ ಮತ್ತು ಭಾರತ ದೇಶಗಳ ರಾಜತಾಂತ್ರಿಕ ಸಂಬಂಧದ ಮೇಲೆ ಗಾಢ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ