ಕೊಲ್ಲಂ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಬರೆಯಲು ಬಂದಿದ್ದ ಯುವತಿಯರಿಗೆ ತಮ್ಮ ಬ್ರಾ ತೆಗೆದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿರುವ ಘಟನೆ ಕೇರಳದ ಕೊಲ್ಲಂ (Kollam) ಜಿಲ್ಲೆಯಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಇಂದು ಕೇಸ್ ದಾಖಲಿಸಿಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354, 509 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೊಲ್ಲಂ ಪೊಲೀಸರು ತಿಳಿಸಿದ್ದಾರೆ. ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವ ವೇಳೆ ಪರೀಕ್ಷಾ ಕೇಂದ್ರದ ಹೊರಗೆ ಯುವತಿಯರಿಗೆ ಒಳಉಡುಪು ಕಳಚಲು ಒತ್ತಾಯಿಸಿ ಅವಮಾನ ಮಾಡಲಾಗಿತ್ತು. ಕೊನೆಗೆ ಯುವತಿಯರು ಒಳಉಡುಪು ಕಳಚಿಟ್ಟು ಪರೀಕ್ಷೆ ಬರೆದಿದ್ದರು. ಇದರಿಂದ ತೀವ್ರ ಮುಜುಗರಗೊಂಡಿದ್ದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.
Kollam, Kerala | Police have registered a case under IPC sections 354 & section 509 after a girl student filed a police complaint stating that she was asked to remove her innerwear before entering the examination hall to write the NEET exam on 18th July.
— ANI (@ANI) July 19, 2022
ಮಹಿಳಾ ಪೊಲೀಸ್ ಅಧಿಕಾರಿಗಳ ತಂಡವು ಆ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಇಂದು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: NEET 2022: ಹಿಜಾಬ್ ಧರಿಸಿದ್ದಕ್ಕೆ ನೀಟ್ ಪರೀಕ್ಷೆ ವೇಳೆ ಹಲವೆಡೆ ತೊಂದರೆ ಅನುಭವಿಸಿದ ಮುಸ್ಲಿಂ ಯುವತಿಯರು
ಮೊಟ್ಟಮೊದಲ ಬಾರಿಗೆ ನೀಟ್ ಪರೀಕ್ಷೆಗೆ ಕುಳಿತಿದ್ದ ನನ್ನ ಮಗಳು ತನಗಾದ ಆಘಾತಕಾರಿ ಅನುಭವದಿಂದ ಇನ್ನೂ ಹೊರಬಂದಿಲ್ಲ ಎಂದು 17 ವರ್ಷದ ಯುವತಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು. ಬ್ರಾ ಇಲ್ಲದೆಯೇ 3 ಗಂಟೆಗೂ ಹೆಚ್ಚು ಕಾಲ ಎಕ್ಸಾಂ ಹಾಲ್ನಲ್ಲಿ ಕುಳಿತು ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಬಂದೊದಗಿದ್ದು, ಆಕೆಯನ್ನು ಮಾನಸಿಕವಾಗಿ ಬಹಳ ಕುಗ್ಗಿಸಿದೆ. ಈ ಘಟನೆಯಿಂದ ಆಕೆ ತೀವ್ರ ಅವಮಾನಕ್ಕೊಳಗಾಗಿದ್ದಾಳೆ ಎಂದು ಅವರು ಆರೋಪಿಸಿದ್ದರು.
ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ಸೂಚಿಸಿದೆ. 10 ಸಾವಿರ ವೈದ್ಯಕೀಯ ಆಕಾಂಕ್ಷಿಗಳಿಗೆ, NEET ಭದ್ರತಾ ತಪಾಸಣೆಯನ್ನು ತೆರವುಗೊಳಿಸುವುದು ದೊಡ್ಡ ಸವಾಲಾಗಿದೆ. ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ನೀಡಲಾಗಿದೆ. ವ್ಯಾಲೆಟ್‌ಗಳು, ಕೈಚೀಲಗಳು, ಬೆಲ್ಟ್‌ಗಳು, ಕ್ಯಾಪ್‌ಗಳು, ಆಭರಣಗಳು, ಶೂಗಳು ಮತ್ತು ಹೀಲ್ಸ್ ಅನ್ನು ನಿಷೇಧಿಸಲಾಗಿದೆ.
Published On - 12:10 pm, Tue, 19 July 22