Margaret Alva ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್​​ ಆಳ್ವ ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿಪಕ್ಷ ನಾಯಕರು ಹಾಜರಿದ್ದರು.

Margaret Alva ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್​​ ಆಳ್ವ ನಾಮಪತ್ರ ಸಲ್ಲಿಕೆ
ಮಾರ್ಗರೇಟ್ ಆಳ್ವ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 19, 2022 | 12:52 PM

ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ(vice-presidential election) ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ (Margaret Alva) ಸಂಸತ್​​ನಲ್ಲಿ ಇಂದು (ಮಂಗಳವಾರ) ನಾಮಪತ್ರ (nomination) ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿಪಕ್ಷ ನಾಯಕರು ಹಾಜರಿದ್ದರು.ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಎನ್​​ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್​​ಖರ್ ಕಣದಲ್ಲಿದ್ದಾರೆ. ಈಗಿರುವ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. ತಮ್ಮನ್ನು ವಿಪಕ್ಷಗಳ ಅಭ್ಯರ್ಥಿಯಾಗಿ ಘೋಷಿಸಿದಾಗ ನಾಯಕರಿಗೆ ಧನ್ಯವಾದ ಹೇಳಿದ ಆಳ್ವ, ಇದು ತುಂಬಾ ಜಿದ್ದಾಜಿದ್ದಿನ ಚುನಾವಣೆ, ಆದರೆ ನಾನು ಸವಾಲನ್ನು ಎದುರಿಸಲು ಹೆದರುವುದಿಲ್ಲ ಎಂದು ಹೇಳಿದ್ದಾರೆ. ರಾಜಸ್ಥಾನದ ಮಾಜಿ ಗವರ್ನರ್ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಆಗಿರುವ ಆಳಅವ ಅವರನ್ನು ಭಾನುವಾರ ವಿಪಕ್ಷಗಳ ಅಭ್ಯರ್ಥಿಯಾಗಿ ಅವಿರೋಧ ಆಯ್ಕೆ ಮಾಡಲಾಗಿದೆ.

ಏಪ್ರಿಲ್ 14, 1942ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮಾರ್ಗರೇಟ್ ಆಳ್ವ ಬಿಎ ಪದವಿ ನಂತರ ಬೆಂಗಳೂರಿನ ಮೌಂಟ್ ಕ್ಯಾರಮೆಲ್ ಕಾಲೇಜು ಮತ್ತು ಸರ್ಕಾರಿ ಲಾ ಕಾಲೇಜಿನಿಂದ ಎಲ್ಎಲ್ ಬಿ ಪದವಿ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಿ ಸಕ್ರಿಯರಾಗಿದ್ದ ಆಳ್ವ, ವಿದ್ಯಾರ್ಥಿ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1964ರಲ್ಲಿ ನಿರಂಜನ್ ಆಳ್ವ ಅವರನ್ನು ಮದುವೆಯಾದರು.  ಈ ದಾಂಪತ್ಯದಲ್ಲಿ ಒಬ್ಬ ಮಗಳು ಮತ್ತು ಮೂವರು ಪುತ್ರರಿದ್ದಾರೆ. ಅನಾರೋಗ್ಯದಿಂದಾಗಿ 2018ರಲ್ಲಿ ಅವರ ಪತಿ ಮೃತಪಟ್ಟಿದ್ದಾರೆ. ಮಾರ್ಗರೇಟ್ ಆಳ್ವ ಅವರು ನಾಲ್ಕು ಬಾರಿ ರಾಜ್ಯಸಭೆ ಮತ್ತು ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 1974ರಲ್ಲಿ ಕಾಂಗ್ರೆಸ್​​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜೀವ್ ಗಾಂಧಿ ಮತ್ತು ಪಿವಿ ನರಸಿಂಹ ರಾವ್ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಗೋವಾ, ರಾಜಸ್ಥಾನ, ಗುಜರಾತ್ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿಯೂ ಆಳ್ವ ಸೇವೆ ಸಲ್ಲಿಸಿದ್ದಾರೆ.

Published On - 12:24 pm, Tue, 19 July 22