ದೆಹಲಿ: ಸಾಮಾಜಿಕ ಅಂತರ ಪಾಲನೆ ಮತ್ತು ಇತರ ಮಾರ್ಗಸೂಚಿಗಳನ್ನು ಜನರು ನಿರ್ಲಕ್ಷಿಸುತ್ತಿರುವುದರಿಂದ ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು. ಕೇವಲ 6 ರಾಜ್ಯಗಳಲ್ಲಿ ಶೇ 85ರಷ್ಟು ಸೋಂಕು ಪ್ರಕರಣಗಳು ಕಂಡುಬಂದಿವೆ. ಕೋವಿಡ್-19 ನಿಯಮಾವಳಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಕಷ್ಟ ಎಂದು ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
‘ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಇತರ ದೇಶಗಳಿಗೆ ಹೋಲಿಸಿದರೆ ಹಲವು ಮಾನದಂಡಗಳಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ’ ಎಂದು ಕಳೆದ ಶನಿವಾರಷ್ಟೇ ಹರ್ಷವರ್ಧನ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ಅದರ ಬೆನ್ನಿಗೇ ಇದೀಗ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಘೋಷಿಸಿದ್ದಾಗ ಜನರು ಎಷ್ಟು ಎಚ್ಚರದಲ್ಲಿದ್ದರೋ ಈಗಲೂ ಅಷ್ಟೇ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಸೋಮವಾರ ಭಾರತದಲ್ಲಿ ಒಟ್ಟು 26,291 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕು ಸಂಬಂಧಿತ ಕಾರಣಗಳಿಂದ 118 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.13 ಕೋಟಿ ದಾಟಿದ್ದರೆ, ಈವರೆಗೆ 1,58,725 ಮಂದಿ ಮೃತಪಟ್ಟಿದ್ದಾರೆ. ಚೇತರಿಕೆ ಪ್ರಮಾಣ ಶೇ 97 ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 2,19,262 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
2021ರಲ್ಲಿ ಈವರೆಗಿನ ದತ್ತಾಂಶಗಳ ಪ್ರಕಾರ ಸೋಮವಾರ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಟ್ಟು 7ನೇ ಬಾರಿಗೆ 20 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ ಡಿಸೆಂಬರ್ 20ರಂದು ಒಂದೇ ದಿನ 26,624 ಪ್ರಕರಣಗಳು ದಾಖಲಾಗಿತ್ತು. ಈಚಿನ ದಿನಗಳಲ್ಲಿ ಗರಿಷ್ಠ ಮಟ್ಟದ ಪ್ರಕರಣಗಳು ದಾಖಲಾದ ದಿನವೆಂದು ಅದನ್ನು ಪರಿಗಣಿಸಲಾಗಿತ್ತು. ಇಂದು ಪತ್ತೆಯಾಗಿರುವ ಪ್ರಕರಣಗಳ ಈ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 16,620 (ಶೇ 63.21) ಸೋಂಕಿತರು ಪತ್ತೆಯಾಗಿದ್ದಾರೆ. ಕೇರಳದಲ್ಲಿ 1,792 ಹಾಗೂ ಪಂಜಾಬ್ನಲ್ಲಿ 1,492 ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,19,262ಕ್ಕೆ ಏರಿಕೆಯಾಗಿದೆ.
ವಿಶ್ವದ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 3 ಕೋಟಿಗೂ ಹೆಚ್ಚು ಸೋಂಕಿತರಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 1.14 ಕೋಟಿಗೂ ಹೆಚ್ಚು ಸೋಂಕಿತರಿರುವ ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ಕಳೆದ ಶನಿವಾರವಷ್ಟೇ ಬ್ರೆಜಿಲ್ನ ಒಟ್ಟು ಸೋಂಕಿತರ ಸಂಖ್ಯೆಯೂ ಭಾರತದ ಸೋಂಕಿತರ ಸಂಖ್ಯೆಗಿಂತ ಹೆಚ್ಚಾಗಿ, ಬ್ರೆಜಿಲ್ 2ನೇ ಸ್ಥಾನಕ್ಕೆ ಬಂದಿತ್ತು.