ನೆರೆಯ ಮಹಾರಾಷ್ಟ್ರದಲ್ಲಿ ಒಂದೇ ದಿನ 16,620 ಕೊರೊನಾ ಸೋಂಕಿತರು ಪತ್ತೆ; ಒಂದು ವರ್ಷ ಪೂರೈಸುವ ಹೊತ್ತಲ್ಲಿ ಮತ್ತೆ ಹಬ್ಬಲಿದೆಯಾ ಕೊರೊನಾ?
ಸದ್ಯ ದೇಶದಲ್ಲಿ ಒಟ್ಟು 26,291 ಕೊರೊನಾ ಪ್ರಕರಣಗಳು ಒಂದೇ ದಿನದಲ್ಲಿ ದಾಖಲಾಗಿರುವುದು ಮತ್ತೆ ಸೋಂಕು ಏರುವ ಮುನ್ಸೂಚನೆಯಾ ಎಂಬ ಸಂದೇಹ ಕಾಡಲಾರಂಭಿಸಿದೆ. ಈ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 16,620 ಸೋಂಕಿತರು ಪತ್ತೆಯಾಗಿರುವುದು ನೆರೆಹೊರೆಯ ರಾಜ್ಯಗಳಿಗೆ ಭಯ ಹುಟ್ಟಿಸಿದೆ.
ದೆಹಲಿ: ಕಳೆದ ವರ್ಷ ಇದೇ ಹೊತ್ತಿನಲ್ಲಿ ಆರಂಭವಾಗಿ ಹೆಮ್ಮಾರಿಯಾಗಿ ಕಾಡಿದ್ದ ಕೊರೊನಾ ಅಂತೂ ಇಂತೂ ನಿಯಂತ್ರಣವಾಯಿತು ಎನ್ನುವಷ್ಟರಲ್ಲಿ ಮತ್ತೆ ಭಯದ ಅಲೆ ಎಬ್ಬಿಸಲು ಶುರು ಮಾಡಿದೆ. ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್, ತಮಿಳುನಾಡು, ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮೇಲ್ಮುಖವಾಗಿ ಸಾಗಲಾರಂಭಿಸಿದೆ. ಕೇಂದ್ರ ಆರೋಗ್ಯ ಇಲಾಖೆಯ ಲೆಕ್ಕಾಚಾರದ ಪ್ರಕಾರ ಶೇ.78.41ರಷ್ಟು ಹೊಸ ಪ್ರಕರಣ ದಾಖಲಾಗಿದ್ದು ಮತ್ತೆ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹಬ್ಬಲಿದೆಯಾ ಎಂಬ ಆತಂಕ ಮೂಡಿಸಿದೆ. ಇತ್ತ ಕೇರಳದಲ್ಲಿ ಮಾತ್ರ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂಗೆ ಕಡಿಮೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಸದ್ಯ ದೇಶದಲ್ಲಿ ಒಟ್ಟು 26,291 ಕೊರೊನಾ ಪ್ರಕರಣಗಳು ಒಂದೇ ದಿನದಲ್ಲಿ ದಾಖಲಾಗಿರುವುದು ಮತ್ತೆ ಸೋಂಕು ಏರುವ ಮುನ್ಸೂಚನೆಯಾ ಎಂಬ ಸಂದೇಹ ಕಾಡಲಾರಂಭಿಸಿದೆ. ಈ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 16,620 ಸೋಂಕಿತರು ಪತ್ತೆಯಾಗಿರುವುದು ನೆರೆಹೊರೆಯ ರಾಜ್ಯಗಳಿಗೆ ಭಯ ಹುಟ್ಟಿಸಿದೆ. ಇತ್ತ ಕೇರಳದಲ್ಲಿ 1,792 ಹಾಗೂ ಪಂಜಾಬ್ನಲ್ಲಿ 1,492 ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,19,262ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮಹಾರಾಷ್ಟ್ರ, ಕೇರಳ ಹಾಗೂ ಪಂಜಾಬ್ ರಾಜ್ಯಗಳೇ ಒಟ್ಟು ಸಕ್ರಿಯ ಪ್ರಕರಣಗಳ ಶೇ.77ರಷ್ಟು ಪಾಲು ಹೊಂದಿವೆ. ಅದಕ್ಕೂ ಮೇಲಾಗಿ ನೆರೆಯ ಮಹಾರಾಷ್ಟ್ರವನ್ನಷ್ಟೇ ಪ್ರತ್ಯೇಕವಾಗಿ ನೋಡಿದರೆ ಶೇ.58 ಎನ್ನುವುದು ಗಮನಾರ್ಹ.
ಮೂರು ಕೋಟಿ ಕೊರೊನಾ ಡೋಸ್ ಖಾಲಿ! ಕೊರೊನಾ ಲಸಿಕೆ ವಿತರಣೆ ಆರಂಭವಾಗಿ ಎರಡು ತಿಂಗಳು ಭರ್ತಿಯಾಗುತ್ತಿದ್ದು, ಇದುವರೆಗೆ ಒಟ್ಟು ಸುಮಾರು ಮೂರು ಕೋಟಿ ಡೋಸ್ ಕೊರೊನಾ ಲಸಿಕೆ ವಿತರಣೆ ಆಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 5,13,065 ಬಾರಿ ಆಯೋಜಿಸಲಾದ ಲಸಿಕಾ ವಿತರಣೆ ಶಿಬಿರಗಳಿಂದ 2,99,08,038 ಡೋಸ್ ಕೊರೊನಾ ಲಸಿಕೆ ಹಂಚಿಕೆಯಾಗಿದ್ದು ಇದೀಗ ಇನ್ನೂ ಹೆಚ್ಚಿನ ವೇಗದಲ್ಲಿ ಲಸಿಕೆ ವಿತರಿಸಲು ಇಲಾಖೆ ಚಿಂತಿಸುತ್ತಿದೆ. ಕೊರೊನಾ ಲಸಿಕೆ ವಿತರಣೆಯ 58ನೇ ದಿನವಾದ ಮಾರ್ಚ್ 14ರಂದು 1,40,880 ಡೋಸ್ ಲಸಿಕೆ ಖರ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ಇದಲ್ಲದೇ ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 17,455 ಜನ ಕೊರೊನಾದಿಂದ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 1,10,07,352 ಜನ ಸೋಂಕಿತರು ಗುಣ ಹೊಂದಿದ್ದಾರೆ. ಸದ್ಯ ಕೊರೊನಾ ಎರಡನೇ ಅಲೆಯ ಭೀತಿ ಒಂದಷ್ಟು ರಾಜ್ಯಗಳಲ್ಲಿ ಆರಂಭವಾಗಿದೆಯಾದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮತ್ತೆ ಅನಾಹುತಕ್ಕೆ ಆಸ್ಪದ ನೀಡದೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಚಿಂತಿಸಿವೆ.
ಇದನ್ನೂ ಓದಿ: ಸರ್ಕಾರದ ಕೊವಿಡ್ ಮಾರ್ಗಸೂಚಿಗೆ ಕ್ಯಾರೇ ಅನ್ನದ ಜನ: ಸಾವಿರದ ಸನಿಹಕ್ಕೆ ತಲುಪಿದ ಕೊರೊನಾ ಕೇಸ್!
ಕೊರೊನಾ ಪಾಸಿಟಿವ್ ಆಗಿದ್ದರೂ ಊರೆಲ್ಲ ಸುತ್ತಾಡಿದ ಬಿಗ್ ಬಾಸ್ ಸ್ಪರ್ಧಿ! ಕೇಸ್ ಜಡಿದು ಬುದ್ಧಿ ಕಲಿಸಿದ ಅಧಿಕಾರಿಗಳು