ಬಾಲ್ಯದಿಂದಲೂ ಸುಭಾಷ್‌ಚಂದ್ರ ಬೋಸ್​ ನನಗೆ ಸ್ಫೂರ್ತಿ; ನೇತಾಜಿ ಚಿಂತನೆಯಂತೆ ದೇಶ ಮುನ್ನಡೆಯುತ್ತಿದೆ-ಪ್ರಧಾನಿ ಮೋದಿ

|

Updated on: Jan 23, 2021 | 6:18 PM

ಹಿಂದೆ ನೇತಾಜಿಯವರು ಪರಿಕಲ್ಪನೆ ಮಾಡಿಕೊಂಡಂಥ ಬಲಿಷ್ಠ ಭಾರತದ ಅವತಾರ ಇಡೀ ಜಗತ್ತಿಗೇ ಗೋಚರಿಸುತ್ತಿದೆ. ಎಲ್​ಎಸಿಯಿಂದ ಎಲ್​ಒಸಿಯವರೆಗೂ ನಾವು ಪ್ರಾಬಲ್ಯ ಮೆರೆದಿದ್ದೇವೆ ಎಂದು ಪ್ರಧಾನಿ ಹೇಳಿದರು.

ಬಾಲ್ಯದಿಂದಲೂ ಸುಭಾಷ್‌ಚಂದ್ರ ಬೋಸ್​ ನನಗೆ ಸ್ಫೂರ್ತಿ; ನೇತಾಜಿ ಚಿಂತನೆಯಂತೆ ದೇಶ ಮುನ್ನಡೆಯುತ್ತಿದೆ-ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಕೋಲ್ಕತ್ತಾ: ನೇತಾಜಿ ಸುಭಾಷ್​ ಚಂದ್ರ ಬೋಸ್ ​125ನೇ ಜನ್ಮದಿನದ ನಿಮಿತ್ತ ಇಂದು ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾಕ್ಕೆ ಭೇಟಿ ನೀಡಿದರು. ವಿಕ್ಟೋರಿಯಾ ಮೆಮೋರಿಯಲ್​ಗೆ ತೆರಳಿದ ಮೋದಿಯವರಿಗೆ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ದಂಖರ್ ಸಾಥ್​ ನೀಡಿದರು. ಇಲ್ಲಿ ಮಕ್ಕಳು ಮತ್ತು ಇತರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಹಿರಿಯ ಗಾಯಕಿ ಉಷಾ ಉತ್ತಪ್, ರವೀಂದ್ರನಾಥ್​ ಟ್ಯಾಗೋರ್​ ಅವರ ಏಕಲಾ ಚಲೋ ರೆ ಹಾಡನ್ನು ಪ್ರಸ್ತುತಪಡಿಸಿದರು.

ನಂತರ ಮಾತನಾಡಿದ ಮೋದಿ, ಬಾಲ್ಯದಿಂದಲೂ ನನಗೆ ಸುಭಾಷ್​ಚಂದ್ರ ಬೋಸ್ ಸ್ಫೂರ್ತಿ. ಅವರನ್ನು ಪ್ರಶಂಸೆ ಮಾಡಲು ಮಾತುಗಳಲ್ಲಿ ಸಾಧ್ಯವಿಲ್ಲ. ನೇತಾಜಿಯವರು ಆಗಲೇ ಸೇನೆಯ ಬಗ್ಗೆ ದೂರದೃಷ್ಟಿ ಹೊಂದಿದ್ದರು. ನೇತಾಜಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲಿಲ್ಲ.. ಕಸಿದರು. ಅವರ ಜನ್ಮದಿನವನ್ನು ಪರಾಕ್ರಮ್​ ದಿವಸ್​ ಎಂದು ಆಚರಿಸುವ ಬಗ್ಗೆ ನನಗೆ ಹೆಮ್ಮೆಯಿದೆ. ಅವರು ಪರಾಕ್ರಮದ ಸಂಕೇತ. ಹಾಗೇ ಈ ದೇಶದ ಪ್ರತಿಯೊಬ್ಬನಿಗೂ ಸ್ಫೂರ್ತಿಯಾಗಿದ್ದಾರೆ. ದೇಶಕ್ಕೆ ನೇತಾಜಿ ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದು ಪ್ರಧಾನಿ ಹೇಳಿದರು.

ನೇತಾಜಿಯವರ ಹೆಸರೇ ಜನರಿಗೆ ಸ್ಫೂರ್ತಿ. ಅವರ ಚಿಂತನೆಯಂತೆ ದೇಶ ಮುನ್ನಡೆಯುತ್ತಿದೆ. ಸುಭಾಷ್​ ಚಂದ್ರ ಬೋಸ್​ರು ವಿದೇಶದಲ್ಲೂ ಹೆಸರುವಾಸಿ. ಅವರು ನಮ್ಮ ದೇಶದ ವೀರಪುತ್ರ. ಬ್ರಿಟೀಷರ ವಿರುದ್ಧ ಆಜಾದ್​ ಘೋಷಣೆ ಮೊಳಗಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ನಾನು ಎಂದಿಗೂ ನೇತಾಜಿಯವರಿಗೆ ಚಿರಋಣಿ ಎಂದು ತಿಳಿಸಿದರು. ಪಶ್ಚಿಮ ಬಂಗಾಳ ಹಲವು ಸಮಾಜ ಸುಧಾರಕರನ್ನು ನೀಡಿದೆ. ಈ ರಾಜ್ಯ ರಾಷ್ಟ್ರಗೀತೆಯನ್ನು ಕೊಡುಗೆ ನೀಡಿದೆ. ಪಶ್ಚಿಮ ಬಂಗಾಳದ ಎಲ್ಲ ಮಹಾತ್ಮರಿಗೂ ನಾನೀಗ ಗೌರವ ಸಲ್ಲಿಸುತ್ತಿದ್ದೇನೆ ಎಂದರು.

ಇಡೀ ಜಗತ್ತು ಮಹಿಳೆಯರ ಮೂಲಭೂತ ಹಕ್ಕಿನ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ, ನೇತಾಜಿಯವರು ರಾಣಿ ಝಾನ್ಸಿ ರೆಜಿಮೆಂಟ್​ನ್ನು ರಚಿಸಿದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಮಹಿಳೆಯರನ್ನೂ ಸಂಪರ್ಕಿಸಿದರು. ಅವರಿಗೆ ತರಬೇತಿ ನೀಡಿ, ದೇಶದ ಬಗ್ಗೆ ಪ್ರೀತಿ, ಹೋರಾಡುವ ಉತ್ಸಾಹ ಬೆಳೆಸಿದರು. ಧೀಮಂತ ನಾಯಕ ನೇತಾಜಿಯವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಶೀಘ್ರದಲ್ಲಿಯೇ ಸಾರ್ವಜನಿಕಗೊಳಿಸುತ್ತೇವೆ ಎಂದೂ ಪ್ರಧಾನಿ ಹೇಳಿದರು.

ದೇಶದ ಅತಿದೊಡ್ಡ ಸಮಸ್ಯೆಗಳಾದ ಬಡತನ, ಅನಕ್ಷರತೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು. ಈಗಲೂ ಸಹ ಸಮಾಜದಲ್ಲಿ ಒಗ್ಗಟ್ಟಿದ್ದರೆ ಈ ಸಮಸ್ಯೆಗಳನ್ನು ಪರಿಹರಿಸಬಹುದು. ಹಿಂದೆ ನೇತಾಜಿಯವರು ಪರಿಕಲ್ಪನೆ ಮಾಡಿಕೊಂಡಂಥ ಬಲಿಷ್ಠ ಭಾರತದ ಅವತಾರ ಇಡೀ ಜಗತ್ತಿಗೇ ಗೋಚರಿಸುತ್ತಿದೆ. ಎಲ್​ಎಸಿಯಿಂದ ಎಲ್​ಒಸಿಯವರೆಗೂ ನಾವು ಪ್ರಾಬಲ್ಯ ಮೆರೆದಿದ್ದೇವೆ. ಇಂದು ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ನಾವು ಸಿಡಿದೇಳುತ್ತಿದ್ದೇವೆ. ತಕ್ಕ ತಿರುಗೇಟು ನೀಡುತ್ತಿದ್ದೇವೆ ಎಂದರು.

ಸಿಎಂ ಮಮತಾ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ; ಸಿಟ್ಟಿಗೆದ್ದ ದೀದಿಯಿಂದ ಭಾಷಣ ಮೊಟಕು

Published On - 6:11 pm, Sat, 23 January 21