ನವದೆಹಲಿ: ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳು (Social Media Influencers) ತಾವು ಸ್ವೀಕರಿಸಿದ ವಸ್ತುಗಳ ವಿವರ ಬಹಿರಂಗಪಡಿಸುವುದನ್ನು ಕೇಂದ್ರ ಸರ್ಕಾರ ಶುಕ್ರವಾರ ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ 50 ಲಕ್ಷ ರೂ. ವರೆಗೆ ದಂಡ ಮತ್ತು ಸಾಮಾಜಿಕ ಮಾಧ್ಯಮ ಅನುಮೋದನೆಗಳ ಮೇಲೆ ನಿಷೇಧ ಶಿಕ್ಷೆಯನ್ನೂ ಎದುರಿಸಬೇಕಾಗಲಿದೆ. ಹೊಸ ನಿಯಮದ ಪ್ರಕಾರ, ತಾವು ಸ್ವೀಕರಿಸಿದ ಉಡುಗೊರೆ, ಪಡೆದ ಹೋಟೆಲ್ ವಸತಿ ವ್ಯವಸ್ಥೆ, ಷೇರು, ರಿಯಾಯಿತಿ ಕೊಡುಗೆ, ಯಾವುದೇ ಉತ್ಪನ್ನ, ಸೇವೆ ಅಥವಾ ಯೋಜನೆಗಳ ಬಗ್ಗೆ ಪ್ರಭಾವ ಬೀರಿದ್ದಕ್ಕಾಗಿ ಪಡೆಯುವ ಬಹುಮಾನ ಇತ್ಯಾದಿಗಳ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿವರವನ್ನು ಸರಳ ಮತ್ತು ಸ್ಪಷ್ಟವಾದ ಭಾಷೆಯಲ್ಲಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಪ್ರಭಾವ ಉದ್ಯಮ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದರ ನಡುವೆ, ಜನರ ಹಾದಿ ತಪ್ಪಿಸುವ ಜಾಹೀರಾತುಗಳನ್ನು ಕಡಿಮೆ ಮಾಡುವುದು ಮತ್ತು ಗ್ರಾಹಕರ ಹಿತ ಕಾಯುವ ದೃಷ್ಟಿಯಿಂದ ಹೊಸ ನಿಯಮ ರೂಪಿಸಲಾಗಿದೆ. ಸಾಮಾಜಿಕ ಮಾಧ್ಯಮ ಪ್ರಭಾವ ಉದ್ಯಮ ವಾರ್ಷಿಕ ಶೇ 20ರ ಬೆಳವಣಿಗೆ ಕಾಣುತ್ತಿದ್ದು, 2025ರ ವೇಳೆಗೆ ವಾರ್ಷಿಕ 2,800 ಕೋಟಿ ರೂ. ವಹಿವಾಟು ನಡೆಸುವ ನಿರೀಕ್ಷೆ ಇದೆ.
ಹೊಸ ಕಾನೂನಿಗೆ ‘ಎಂಡೋರ್ಸ್ಮೆಂಟ್ ನೋ ಹೌ’ಸ್ – ಫಾರ್ ಸೆಲೆಬ್ರಿಟೀಸ್, ಇನ್ಫ್ಲುಯೆನ್ಸರ್ಸ್ ಆ್ಯಂಡ್ ವರ್ಚುವಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ (ಅವತಾರ್ ಆರ್ ಕಂಪ್ಯೂಟರ್ ಜನರೇಟೆಡ್ ಕ್ಯಾರಕ್ಟರ್) ಆನ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಸ್’ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ನಾಮಕರಣ ಮಾಡಿದೆ. ಒಂದು ವೇಳೆ ಕಾನೂನನ್ನು ಉಲ್ಲಂಘಿಸಿದಲ್ಲಿ, 2019ರ ಗ್ರಾಹಕ ರಕ್ಷಣಾ ಕಾಯ್ದೆಯಲ್ಲಿ ಉಲ್ಲೇಖಿಸಿರುವಂತೆ ಹಾದಿತಪ್ಪಿಸುವ ಜಾಹೀರಾತಿಗೆ ಸೂಚಿಸಲಾಗಿರುವ ದಂಡವನ್ನೇ ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಕಾನೂನಿನ ಅಡಿ, ಉತ್ಪಾದಕರು, ಜಾಹೀರಾತುದಾರರು ಮತ್ತು ಪ್ರಭಾವಿಗಳಿಗೆ 10 ಲಕ್ಷ ರೂ. ವರೆಗೆ ದಂಡ ವಿಧಿಸುವ ಅಧಿಕಾರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ (CCPA) ಇದೆ. ಮರುಕಳಿಸಿದ ಅಪರಾಧಕ್ಕೆ 50 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಹಾದಿತಪ್ಪಿಸುವ ಜಾಹೀರಾತನ್ನು ಅನುಮೋದಿಸುವವರ ಮೇಲೆ 1 ವರ್ಷದವರೆಗೆ ನಿಷೇಧ ಹೇರಲು ಮತ್ತು ಮರುಕಳಿಸಿದ ತಪ್ಪುಗಳಿಗಾಗಿ ನಿಷೇಧವನ್ನು 3 ವರ್ಷಗಳವರೆಗೆ ವಿಸ್ತರಿಸಬಹಲು ಸಿಸಿಪಿಎಗೆ ಅಧಿಕಾರವಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ