ಆಮ್ ಆದ್ಮಿ ಪಕ್ಷದವರೇ ದೆಹಲಿಯ ಮುಂದಿನ ಮೇಯರ್; ಯೂ ಟರ್ನ್ ಹೊಡೆದ ಬಿಜೆಪಿ

| Updated By: ಸುಷ್ಮಾ ಚಕ್ರೆ

Updated on: Dec 09, 2022 | 7:03 PM

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಪಡೆದಿರುವ ಆಮ್ ಆದ್ಮಿ ಪಕ್ಷದವರು ಮುಂದಿನ ದೆಹಲಿ ಮೇಯರ್ ಆಗಲಿದ್ದಾರೆ ಎಂದು ಬಿಜೆಪಿ ಹೇಳಿದೆ.

ಆಮ್ ಆದ್ಮಿ ಪಕ್ಷದವರೇ ದೆಹಲಿಯ ಮುಂದಿನ ಮೇಯರ್; ಯೂ ಟರ್ನ್ ಹೊಡೆದ ಬಿಜೆಪಿ
ಆಮ್ ಆದ್ಮಿ ಪಕ್ಷದ ನಾಯಕರು
Follow us on

ನವದೆಹಲಿ: ಎಂಸಿಡಿ ಚುನಾವಣೆಯಲ್ಲಿ (MCD Election) ಸೋಲನ್ನು ಅನುಭವಿಸಿದ ಬಳಿಕ ದೆಹಲಿ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಮುಂದಿನ ಮೇಯರ್ ಆಮ್ ಆದ್ಮಿ ಪಕ್ಷದವರೇ (Aam Aadmi Party) ಆಗಲಿದ್ದಾರೆ ಎಂದು ಹೇಳಿದೆ. ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷ 134 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಪಡೆದಿತ್ತು. ಬಿಜೆಪಿ 104 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗೆದ್ದಿತ್ತು.

“ಎಂಸಿಡಿಯಲ್ಲಿ ಬಿಜೆಪಿ ಪ್ರಬಲ ಪ್ರತಿಪಕ್ಷದ ಪಾತ್ರವನ್ನು ವಹಿಸುತ್ತದೆ” ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಇಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಬಿಜೆಪಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ “ಕಾವಲು ನಾಯಿ”ಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: MCD Election 2022 Results ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತದ ಗೆಲುವು; ಮಹಿಳೆಗೆ ಮೇಯರ್ ಸ್ಥಾನ:ಎಎಪಿ

“ದೆಹಲಿ ಸ್ವಚ್ಛವಾಗಿರಬೇಕು ಮತ್ತು ಎಂಸಿಡಿ ಉತ್ತಮ ಕೆಲಸ ಮಾಡಬೇಕು. ಅದೇ ನಮ್ಮ ಆದ್ಯತೆಯಾಗಿದೆ” ಎಂದು ಅವರು ಹೇಳಿದ್ದಾರೆ. ಈ ಹಿಂದೆ, ಎಂಸಿಡಿ ಚುನಾವಣೆಯಲ್ಲಿ ಎಎಪಿ ಬಹುಮತ ಪಡೆದಿರಬಹುದು, ಆದರೆ ಮೇಯರ್ ಆಯ್ಕೆಗೆ ಇನ್ನೂ ಅವಕಾಶವಿದೆ ಎಂದು ಬಿಜೆಪಿ ಹೇಳಿತ್ತು. ಇದೀಗ ಬಿಜೆಪಿ ಯೂಟರ್ನ್ ಹೊಡೆದಿದೆ.

ಚಂಡೀಗಢ ಪುರಸಭೆಯ 35 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅದು ಬಹುಮತವನ್ನು ಗಳಿಸಲಿಲ್ಲ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯಲ್ಲಿ 134 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಎಎಪಿ ಬಿಜೆಪಿಯನ್ನು ಹಿಂದಿಕ್ಕಿತ್ತು. ಪ್ರತಿಷ್ಠಿತ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಆಪ್ ಕೊನೆಗೊಳಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Fri, 9 December 22