Operation Octopus: ಪಿಎಫ್​ಐ ವಿರುದ್ಧ ಎನ್​ಐಎ 2ನೇ ಹಂತದ ದಾಳಿ, 8 ರಾಜ್ಯಗಳಲ್ಲಿ 170ಕ್ಕೂ ಹೆಚ್ಚು ಮಂದಿಯ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 27, 2022 | 1:24 PM

ಭಾರತದ 8 ರಾಜ್ಯಗಳಲ್ಲಿ 170ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸ್ಥಳೀಯ ಪೊಲೀಸರನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

Operation Octopus: ಪಿಎಫ್​ಐ ವಿರುದ್ಧ ಎನ್​ಐಎ 2ನೇ ಹಂತದ ದಾಳಿ, 8 ರಾಜ್ಯಗಳಲ್ಲಿ 170ಕ್ಕೂ ಹೆಚ್ಚು ಮಂದಿಯ ಬಂಧನ
ಪಿಎಫ್​ಐ ಸಂಘಟನೆಯ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ದೆಹಲಿ: ‘ಆಪರೇಷನ್ ಆಕ್ಟೋಪಸ್​’ (Operation Octopus) ಹೆಸರಿನಲ್ಲಿ ರಾಷ್ಟ್ರೀಯ ತನಿಖಾ ದಳವು (National Investigation Agency – NIA) ಪಿಎಫ್​ಐ (Popular Front of India – PFI) ವಿರುದ್ಧ 2ನೇ ಹಂತದ ದಾಳಿ ಆರಂಭಿಸಿದೆ. ಭಾರತದ 8 ರಾಜ್ಯಗಳಲ್ಲಿ 170ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸ್ಥಳೀಯ ಪೊಲೀಸರನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು 21 ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ದೆಹಲಿಯ ಶಾಹೀನ್​ಬಾಗ್ ಪ್ರದೇಶದಲ್ಲಿಯೂ 30 ಮಂದಿಯನ್ನು ಬಂಧಿಸಲಾಗಿದ್ದು, ದೆಹಲಿಯ ಜಾಮಿಯಾ ನಗರದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪಿಎಫ್​ಐ ನಾಯಕ ಮೊಹಮದ್ ಅಶ್ರಫ್​​ ಬಂಧನ‌‌

ಮಂಗಳೂರು ಮೂಲದ ಪಿಎಫ್​ಐ ನಾಯಕ ಮೊಹಮದ್ ಅಶ್ರಫ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಪಿಎಫ್​ಐನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಅಶ್ರಫ್, ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿ. ಮಂಗಳೂರು ನಗರದ ಕಂಕಣವಾಗಿಯಲ್ಲಿ ಅಶ್ರಫ್ ವಾಸವಿದ್ದ. ಸ್ಥಳೀಯ ಮಟ್ಟದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಆದರೆ ದೆಹಲಿ ಮಟ್ಟದಲ್ಲಿ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ. ಜಾರ್ಖಂಡ್, ಒರಿಸ್ಸಾ ಸೇರಿ ಮೂರು ರಾಜ್ಯಗಳಿಗೆ ಮಹಮ್ಮದ್ ಅಶ್ರಫ್ ಸಂಚಾಲಕನಾಗಿದ್ದ. ಮೂರು ರಾಜ್ಯಗಳಲ್ಲಿ ಪ್ರತಿಯೊಂದು ಚಟುವಟಿಕೆಯು ಅಶ್ರಫ್ ನಿರ್ದೇಶನದಂತೆ ನಡೆಯುತ್ತಿರೋದು ಪತ್ತೆಯಾಗಿದೆ. ಇಂಟರ್ ಸ್ಟೇಟ್ ಕೋಆರ್ಡಿನೇಟ್ಸ್ ಬಗ್ಗೆ ಅಶ್ರಫ್​ಗೆ ಸಾಕಷ್ಟು ಮಾಹಿತಿ ಇರುವ ಸಾಧ್ಯತೆಯಿದೆ. ಹೀಗಾಗಿಯೇ ಅಶ್ರಫ್ ವಿಚಾರಣೆಗೆ ಸಿಸಿಬಿ ಹಾಗೂ ಕೆಜಿ ಹಳ್ಳಿ ಪೊಲೀಸರು ಕಾಯುತ್ತಿದ್ದಾರೆ. ಅಶ್ರಪ್ ವಿಚಾರಣೆ ಬಳಿಕ ಸಾಕಷ್ಟು ಮಹತ್ತ್ವದ ವಿಚಾರಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೀಗಾಗಿ ಬಂಧಿತರು‌ ಕೊಟ್ಟ ಮಾಹಿತಿ ಮೇರೆ ಇಂದು ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಪೊಲೀಸರು ಕಸ್ಟಡಿಗೆ ಪಡೆದರು. ಅದೇ ರೀತಿಯಾಗಿ ತಮಿಳುನಾಡಿನಲ್ಲಿ 14 ಪಿಎಫ್​ಐ ಕಾರ್ಯಕರ್ತರ ಬಂಧನ ಮಾಡಿದ್ದು, ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ದ ಕೇಸ್​ನಲ್ಲಿ ಅರೆಸ್ಟ್ ಮಾಡಲಾಗಿದೆ. ಇತ್ತೀಚೆಗೆ PFI ಕಾರ್ಯಕರ್ತರು ಪೆಟ್ರೋಲ್ ಬಾಂಬ್​ ನಡೆಸಿದ್ದರು.

Published On - 12:52 pm, Tue, 27 September 22