ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಅಪರಿಚಿತ ಕಾರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಮುಂಬೈನ ಪೊಲೀಸ್ ಸಿಬ್ಬಂದಿ ಸುನಿಲ್ ಮಾನೆಯನ್ನು ಬಂಧಿಸಿದೆ. ಸ್ಫೋಟಕ ತುಂಬಿದ್ದ ಕಾರಿನ ನಿರ್ವಹಣೆ ಮಾಡುತ್ತಿದ್ದ ಮನ್ಸುಖ್ ಹಿರೇನ್ ಮೃತದೇಹ ಪತ್ತೆಯಾಗುವ ಎರಡು ದಿನ ಮೊದಲು ಬಂಧಿತ ಮುಂಬೈ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಮಾನೆ ಈಗಾಗಲೇ ಅಮಾನತಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಭೇಟಿಯಾಗಿದ್ದರು ಎಂದು ಎನ್ಐಎ ತಿಳಿಸಿದೆ.
ಬಂಧಿತ ಸುನಿಲ್ ಮಾನೆ ಅಮಾನತಾಗಿರುವ ಸಚಿನ್ ವಾಜೆಯನ್ನು ಮಾರ್ಚ್ ಮೊದಲ ವಾರದಲ್ಲಿ ಭೇಟಿ ಮಾಡಿದ್ದ ಎಂದು ಹಲವು ಸಾಕ್ಷ್ಯಗಳಿವೆ. ಈ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಎನ್ಐಎ ತಂಡ ತಿಳಿಸಿದೆ. ಸುನಿಲ್ ಮಾನೆಯನ್ನು ಮುಂದಿನ ಶುಕ್ರವಾರ ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಸಹ ತನಿಖಾ ತಂಡ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಹೊತ್ತಿದ್ದ ಕಾರು ಸಿಕ್ಕ ಪ್ರಕರಣದಲ್ಲಿ ಎನ್ಐಎ ದಳದಿಂದ ಬಂಧಿಸಲ್ಪಟ್ಟಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬೈ ಸ್ಪೆಷಲ್ ಬ್ರ್ಯಾಂಚ್ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ವಾಜೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ಫೋಟಕ ಇಟ್ಟಿದ್ದ ತಂಡದಲ್ಲಿ ಸಚಿನ್ ವಾಜೆ ಕೂಡ ಭಾಗಿಯಾಗಿದ್ದು ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.
ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಸಚಿನ್ ವಾಜೆ, ಅಂಬಾನಿ ಮನೆ ಬಳಿ ಪತ್ತೆಯಾದ ವಾಹನದಲ್ಲಿ ಸ್ಫೋಟಕ ಇರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಫೆಬ್ರವರಿ 25ರಂದು ದಕ್ಷಿಣ ಮುಂಬೈನ ಕಾರ್ಮಿಚೇಲ್ ರಸ್ತೆಯಲ್ಲಿರುವ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿರುವ ಕಾರೊಂದು ಪತ್ತೆಯಾಗಿತ್ತು. ಈ ಕಾರಿನೊಳಗೆ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಡಲಾಗಿತ್ತು. ಅದೃಷ್ಟವಶಾತ್ ಜಿಲೆಟಿನ್ ಸ್ಫೋಟಗೊಳ್ಳದ ಕಾರಣ ಭಾರಿ ಅನಾಹುತ ತಪ್ಪಿತ್ತು.
ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ; ಎನ್ಐಎಯಿಂದ ಸಚಿನ್ ವಾಜೆ ಸಹಚರ ರಿಯಾಜ್ ಕಾಜಿ ಬಂಧನ
(NIA arrests one more Mumbai police cop in Mukesh Ambani bomb scare case)
Published On - 11:55 pm, Fri, 23 April 21