
ನವದೆಹಲಿ, ಸೆಪ್ಟೆಂಬರ್ 3: ಪಹಲ್ಗಾಂ ಉಗ್ರ ದಾಳಿ ಕೃತ್ಯದ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಉಗ್ರ ಸಂಘಟನೆಗೆ ಯಾರಿಂದ ನೆರವು ಹರಿದುಬರುತ್ತಿದೆ ಎನ್ನುವುದಕ್ಕೆ ಹೊಸ ಪುರಾವೆ ಸಿಕ್ಕಿದೆ. ಮಲೇಷ್ಯಾದಿಂದ ಹವಾಲಾ ಮೂಲಕ ಟಿಆರ್ಎಫ್ಗೆ (TRF- The Resistance Front) ಹಣ ಹರಿದುಹೋಗುತ್ತಿರಬಹುದು ಎಂಬುದಕ್ಕೆ ಎನ್ಐಎ ತನಿಖೆ ವೇಳೆ ಅನುಮಾನ ಮೂಡಿಸುವ ಸಾಕ್ಷ್ಯಾಧಾರಗಳು ಸಿಕ್ಕಿರುವುದು ಗೊತ್ತಾಗಿದೆ.
ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬುದು ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಉಗ್ರ ಸಂಘಟನೆ. 2024ರ ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ಸಂಭವಿಸಿದ್ದ ಉಗ್ರ ದಾಳಿ ಘಟನೆಯ ಹೊಣೆಯನ್ನು ಈ ಸಂಘಟನೆ ಮೊದಲು ಹೊತ್ತಿತ್ತು. ನಂತರ ಅದನ್ನು ನಿರಾಕರಿಸಿತು. ಇದು ಲಷ್ಕರೆ ತೊಯ್ಯಬಾದ ಇನ್ನೊಂದು ಮುಖ ಎಂದು ಹೇಳಲಾಗುತ್ತಿದೆ. ಭಾರತದ ತನಿಖಾ ಸಂಸ್ಥೆಯಾದ ಎನ್ಐಎ ಈ ಟಿಆರ್ಎಫ್ ಸಂಘಟನೆಯ ಜಾಲವನ್ನು ಬೇದಿಸುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಕಿಮ್, ಪುಟಿನ್ ಜೊತೆ ಜಿನ್ಪಿಂಗ್; ಚೀನಾದಲ್ಲಿ ಬೃಹತ್ ಮಿಲಿಟರಿ ಪೆರೇಡ್; ಪಾಶ್ಚಿಮಾತ್ಯ ಶಕ್ತಿಗೆ ಖಡಕ್ ಸಂದೇಶ
ಟಿಆರ್ಎಫ್ನೊಂದಿಗೆ ಶಾಮೀಲಾಗಿದ್ದಾರೆನ್ನಲಾದ ಶ್ರೀನಗರದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ನಲ್ಲಿ 450ಕ್ಕೂ ಹೆಚ್ಚು ಸಂಪರ್ಕಗಳ ಜಾಡು ಹಿಡಿದಾಗ ಎನ್ಐಎಗೆ ಕೆಲ ಪ್ರಬಲ ಸುಳಿವುಗಳು ಸಿಕ್ಕಿವೆ. ಈ ಕೆಲ ಕಾಂಟ್ಯಾಕ್ಟ್ಗಳು ಹಿಂದಿನ ಕೆಲ ಭಯೋತ್ಪಾದನಾ ಕೃತ್ಯಗಳಲ್ಲಿ ಆರೋಪಿಗಳಾಗಿದ್ದಾರೆ. ಹಾಗೆಯೇ, ಮಲೇಷ್ಯಾ ಮೂಲಕ ಹವಾಲ ರೂಪದಲ್ಲಿ ಹಣ ಹರಿದುಬರುತ್ತಿರುವುದು, ಮತ್ತು ಈ ಹಣವನ್ನು ಟಿಆರ್ಎಫ್ಗೆ ಫಂಡಿಂಗ್ ಆಗಿ ಬಳಕೆ ಆಗುತ್ತಿರುವುದಕ್ಕೆ ಸಾಕ್ಷಿಗಳನ್ನು ಎನ್ಐಎ ಪತ್ತೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಈ ಹವಾಲಾ ಜಾಲದಲ್ಲಿ ಮಲೇಷ್ಯಾದ ನಿವಾಸಿ ಸಾಜದ್ ಅಹ್ಮದ್ ಮಿರ್ ಮತ್ತು ಯಾಸಿರ್ ಹಾಯತ್ ಅವರ ಹೆಸರು ಪ್ರಧಾನವಾಗಿ ಶಂಕೆ ಮೂಡಿಸಿವೆ. ಶ್ರೀನಗರದ ಹಯತ್ ಅವರು ಮಲೇಷ್ಯಾಗೆ ಹಲವು ಬಾರಿ ಹೋಗ ಬಂದಿದ್ದಾರೆ. ಮಲೇಷ್ಯಾ ನಿವಾಸಿ ಮಿರ್ನ ನೆರವಿನಿಂದ ಹಯಾತ್ ಟಿಆರ್ಎಫ್ಗೆ ಶಫತ್ ವಾನಿ ಎಂಬಾತನ ಮೂಲಕ 9 ಲಕ್ಷ ರೂ ಫಂಡಿಂಗ್ ರವಾನಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನ 1 ಲಕ್ಷ ನಕಲಿ ಮತದಾರರಿಗೇಕೆ ನೋಟಿಸ್ ನೀಡಿಲ್ಲ? ಚುನಾವಣಾ ಆಯೋಗಕ್ಕೆ ಪವನ್ ಖೇರಾ ಪ್ರಶ್ನೆ
ಟಿಆರ್ಎಫ್ನ ಪ್ರಮುಖ ಆಪರೇಟಿವ್ ಆಗಿರುವ ಶಫತ್ ವಾನಿ ಯಾವುದೂ ಯೂನಿವರ್ಸಿಟಿ ಕಾನ್ಫರೆನ್ಸಲ್ಲಿ ಪಾಲ್ಗೊಳ್ಳಲು ಮಲೇಷ್ಯಾಗೆ ಭೇಟಿ ನೀಡಿದ್ದ ಎನ್ನಲಾಗಿದೆ.
ದಿ ರೆಸಿಸ್ಟೆನ್ಸ್ ಫ್ರಂಟ್ 2019ರಲ್ಲಿ ರಚನೆಯಾಗಿದ್ದು. ಜಮ್ಮು ಕಾಶ್ಮೀರದ ಸಂಘಟನೆ ಎಂದು ಬಿಂಬಿಸುವ ಕೆಲಸ ನಡೆದಿದೆ. ಇದು ಪಾಕಿಸ್ತಾನ ಮೂಲದ ಲಷ್ಕರೆ ತೈಯಬಾದ ಪ್ರಾಕ್ಸಿ ಸಂಘಟನೆ ಎನ್ನಲಾಗಿದೆ. ಪಹಲ್ಗಾಂ ಘಟನೆ ಬಳಿಕ ಟಿಆರ್ಎಸ್ ಅನ್ನು ಅಮೆರಿಕ ಕೂಡ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ