
ನೀಲಗಿರಿ, ತಮಿಳುನಾಡು ಜನವರಿ 18: ತಮಿಳುನಾಡಿನ (Tamil Nadu) ನೀಲಗಿರಿ (Nilgiris) ಜಿಲ್ಲೆಯಲ್ಲಿ ತಾಪಮಾನ ಕುಸಿಯುತ್ತಿದ್ದು ಜನರು ಕೊರೆಯುವ ಚಳಿಯಿಂದ (Cold) ತತ್ತರಿಸುತ್ತಿದ್ದಾರೆ. ಇದು ಅಕಾಲಿಕ ಹವಾಮಾನದ ವಿದ್ಯಮಾನವಾಗಿದ್ದು, ಕೃಷಿಯ ಮೇಲೂ ಪರಿಣಾಮ ಬೀರಿದೆ. ಹಚ್ಚ ಹಸಿರಿನ ಹುಲ್ಲುಹಾಸುಗಳು ಹಿಮದಿಂದ ಆವೃತವಾಗಿವೆ. ದಟ್ಟವಾದ ಮಂಜು ಗೋಚರತೆಯ ಮೇಲೆ ಪರಿಣಾಮ ಬೀರಿದೆ. ಹೀಗೆ ಕುಸಿಯುತ್ತಿರುವ ತಾಪಮಾನದಿಂದಾಗಿ ಸ್ಥಳೀಯರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಂತಹ ಚಳಿ, ಶುಷ್ಕ ವಾತಾವರಣ ಅಸಾಮಾನ್ಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಲವೆಡೆ ಜನರು ಬೆಂಕಿಯ ಸುತ್ತ ಕುಳಿತು ಬೆಚ್ಚಗಾಗಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.
ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ಉದಕಮಂಡಲದ ಕಾಂತಲ್ ಮತ್ತು ತಲೈಕುಂಠದಲ್ಲಿ ತಾಪಮಾನವು 1 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದರೆ, ಬೊಟಾನಿಕಲ್ ಗಾರ್ಡನ್‌ನಲ್ಲಿ 2 ಡಿಗ್ರಿ ಸೆಲ್ಸಿಯಸ್. ಸ್ಯಾಂಡಿನಲ್ಲಾ 3 ಡಿಗ್ರಿ ಸೆಲ್ಸಿಯಸ್ ಇತ್ತು. ಈ ‘ಅಕಾಲಿಕ’ ಚಳಿಯ ಬಗ್ಗೆ ನಿವಾಸಿಗಳು ಮತ್ತು ಪರಿಸರ ಕಾರ್ಯಕರ್ತರು ಚಿಂತಿತರಾಗಿದ್ದಾರೆ.
ನೀಲಗಿರಿ ಎನ್ವಿರೋಮೆಂಟ್ ಸೋಶಿಯಲ್ ಟ್ರಸ್ಟ್ (NEST) ನ ವಿ ಶಿವದಾಸ್ ಅವರು ಜಾಗತಿಕ ತಾಪಮಾನ ಮತ್ತು ಎಲ್-ನಿನೊ ಪರಿಣಾಮವೇ ಈ ಬದಲಾವಣೆಗೆ ಕಾರಣವೆಂದು ನಂಬುತ್ತಾರೆ. ಚಳಿ ಆರಂಭವಾಗುವುದು ತಡವಾಗಿದ್ದು, ಇಂತಹ ಹವಾಮಾನ ಬದಲಾವಣೆ ನೀಲಗಿರಿಗೆ ದೊಡ್ಡ ಸವಾಲಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಬೇಕು ಎಂದರು.ಇಲ್ಲಿ ದೊಡ್ಡ ಪ್ರಮಾಣದಲ್ಲಿರುವ ಚಹಾ ತೋಟದ ಮೇಲೂ ಇದು ಪರಿಣಾಮ ಬೀರಿದೆ.
ಡಿಸೆಂಬರ್‌ನಲ್ಲಿ ಸುರಿದ ಭಾರೀ ಮಳೆ ಮತ್ತು ನಂತರದ ಶೀತದ ಅವಧಿಯು ಚಹಾ ತೋಟದ ಮೇಲೆ ಪರಿಣಾಮ ಬೀರಿದೆ ಎಂದು ಸ್ಥಳೀಯ ಚಹಾ ಕಾರ್ಮಿಕರ ಸಂಘದ ಕಾರ್ಯದರ್ಶಿ ಆರ್ ಸುಕುಮಾರನ್ ಹೇಳಿದ್ದಾರೆ.
ಇದನ್ನೂ ಓದಿ:ನಿರ್ಮಲಾ ಸೀತಾರಾಮನ್ರನ್ನು ವಜಾಗೊಳಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ತಮಿಳುನಾಡು IRS ಅಧಿಕಾರಿ
ಇದು ಮುಂಬರುವ ತಿಂಗಳುಗಳಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹವಾಮಾನವು ವಿಶೇಷವಾಗಿ ಎಲೆಕೋಸುಗಳ ಮೇಲೆ ಪರಿಣಾಮ ಬೀರಿದೆ ಎಂದು ತರಕಾರಿ ಬೆಳೆಯುವ ರೈತರು ಹೇಳಿದರು. ಚಳಿಯಿಂದಾಗಿ ಬೇಗ ಕೆಲಸ ನಿಮಿತ್ತ ಮನೆಯಿಂದ ಹೊರಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಸರ್ಕಾರಿ ನೌಕರ ಎನ್ ರವಿಚಂದ್ರನ್. ಬೆಚ್ಚಗಾಗಲು ಬೇಕಾದ ಉಡುಪನ್ನು ಧರಿಸಿದರೂ, ದ್ವಿಚಕ್ರ ವಾಹನಗಳನ್ನು ಓಡಿಸುವುದು ಇನ್ನೂ ಕಷ್ಟಕರವಾಗಿತ್ತು, ಇದು ಉಸಿರಾಟದ ತೊಂದರೆ, ತೀವ್ರ ತಲೆನೋವು ಮತ್ತು ಜ್ವರದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಅಂತಾರೆ ಅವರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ