ಅಂದು ಪಾಕ್​ ಸೇನಾ ಮುಖ್ಯಸ್ಥ ಬಜ್ವಾರನ್ನು ತಬ್ಬಿದ್ದ ನವಜೋತ್​ ಸಿಂಗ್ ಸಿಧು, ಇಂದು ಬಿಪಿನ್​ ರಾವತ್​ ನಿಧನಕ್ಕೆ ಸಂತಾಪ ಸೂಚಿಸಿಲ್ಲ-ಬಿಜೆಪಿ ಆಕ್ಷೇಪ

| Updated By: Lakshmi Hegde

Updated on: Dec 09, 2021 | 3:50 PM

ನವಜೋತ್​ ಸಿಂಗ್​ ಸಿಧು ಹೆಚ್ಚಾಗಿ ಸುದ್ದಿಯಾಗಿದ್ದು ಅವರ ವಿವಾದಗಳಿಂದ. ಅದರಲ್ಲೂ ಪಾಕಿಸ್ತಾನವನ್ನು ಹೊಗಳುವ ಮೂಲಕವೇ ಜಾಸ್ತಿ ಸುದ್ದಿಯಾಗುತ್ತಿದ್ದಾರೆ.  ಅದರಲ್ಲೂ 2018ರಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾರನ್ನು ಅಪ್ಪಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು

ಅಂದು ಪಾಕ್​ ಸೇನಾ ಮುಖ್ಯಸ್ಥ ಬಜ್ವಾರನ್ನು ತಬ್ಬಿದ್ದ ನವಜೋತ್​ ಸಿಂಗ್ ಸಿಧು, ಇಂದು ಬಿಪಿನ್​ ರಾವತ್​ ನಿಧನಕ್ಕೆ ಸಂತಾಪ ಸೂಚಿಸಿಲ್ಲ-ಬಿಜೆಪಿ ಆಕ್ಷೇಪ
ನವಜೋತ್​ ಸಿಂಗ್ ಸಿಧು
Follow us on

ದೆಹಲಿ: ತಮಿಳುನಾಡಿನ ಕೂನೂರ್​ ಬಳಿ ನಡೆದ ಹೆಲಿಕಾಪ್ಟರ್​ ಪತನ ದುರಂತದಲ್ಲಿ ಮೃತಪಟ್ಟ ಸಿಡಿಎಸ್​ ಬಿಪಿನ್​ ರಾವತ್​ ಮತ್ತು ಇತರ ಸೇನಾಧಿಕಾರಿಗಳಿಗೆ ಇಡೀ ದೇಶವೇ ಸಂತಾಪ ಸೂಚಿಸುತ್ತಿದೆ. ಅದರಲ್ಲೂ ಎಲ್ಲ ಪಕ್ಷಗಳ ರಾಜಕೀಯ ಗಣ್ಯರೂ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಯುಎಸ್​, ರಷ್ಯಾ, ಚೀನಾ, ಪಾಕಿಸ್ತಾನ ದೇಶಗಳ ರಕ್ಷಣಾ ಅಧಿಕಾರಿಗಳೂ ಸಂತಾಪ ಸೂಚಿಸಿದ್ದಾರೆ. ಅಷ್ಟೆಲ್ಲ ಆದರೂ ಪಂಜಾಬ್​ ಕಾಂಗ್ರೆಸ್​​ನ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಒಂದೇ ಒಂದು ಶಬ್ದವನ್ನೂ ಈ ಬಗ್ಗೆ ಮಾತನಾಡಿಲ್ಲ. ಬಿಪಿನ್​ ರಾವತ್​ ಸೇರಿ ಉಳಿದ ಸೇನಾಧಿಕಾರಿಗಳ ನಿಧನಕ್ಕೆ ಸಂತಾಪ ಸೂಚಿಸಿಲ್ಲ.  ಇಂದು ಕೂಡ ಸೋನಿಯಾ ಗಾಂಧಿಯವರೊಂದಿಗೆ ಇರುವ ಫೋಟೋ ಶೇರ್ ಮಾಡಿಕೊಂಡು, ಅವರಿಗೆ ಜನ್ಮ ದಿನದ ಶುಭ ಕೋರಿದ್ದಾರೆ ಬಿಟ್ಟರೆ ಬಿಪಿನ್​ ರಾವತ್​ ನಿಧನದ ಬಗ್ಗೆ ಟ್ವೀಟ್​ ಆಗಲಿ, ಸಂತಾಪದ ಪೋಸ್ಟ್ ಆಗಲೀ ಹಾಕಿಲ್ಲ.  

ಭಾರತದ ಮೊದಲ ಸಿಡಿಎಸ್​, ದಕ್ಷ ಸೇನಾ ನಾಯಕ ಬಿಪಿನ್ ರಾವತ್​ ಸೇರಿ 11 ಮಂದಿ ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ.  ಹೀಗಿದ್ದಾಗ್ಯೂ ನವಜೋತ್​ ಸಿಂಗ್ ಸಿಧು ಒಂದು ಸಂತಾಪ ಸೂಚಿಸಲಿಲ್ಲ ಎಂದು ಬಿಜೆಪಿಯ ವಕ್ತಾರ ನೂಪುರ್​ ಶರ್ಮಾ ವ್ಯಂಗ್ಯವಾಡಿದ್ದಾರೆ. ನವಜೋತ್​ ಸಿಂಗ್​ ಸಿಧು ತಾವು ಸೋನಿಯಾ ಗಾಂಧಿಯವರೊಂದಿಗೆ ಇರುವ ಫೋಟೋ ಶೇರ್​ ಮಾಡಿಕೊಂಡಿದ್ದನ್ನೇ ರೀಟ್ವೀಟ್ ಮಾಡಿರುವ ನೂಪುರ್ ಶರ್ಮಾ, ಜನರಲ್​ ಬಿಪಿನ್ ರಾವತ್ ಅಕಾಲಿಕ ಮರಣದ ಬಗ್ಗೆ ಒಂದು ಮಾತನಾಡಲಿಲ್ಲ, ರಾವತ್​ ಪತ್ನಿ ಮತ್ತು 11 ಸೇನಾಧಿಕಾರಿಗಳು ಮೃತಪಟ್ಟಿದ್ದರ ಬಗ್ಗೆ ಒಂದು ಶಬ್ದ ಇಲ್ಲ, ಅವಘಡದಲ್ಲಿ ಬದುಕುಳಿದ ಏಕೈಕ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಆರೋಗ್ಯ ಚೇತರಿಕೆಗೆ ಹಾರೈಕೆಯಿಲ್ಲ ಎಂದಿದ್ದಾರೆ.

ನವಜೋತ್​ ಸಿಂಗ್​ ಸಿಧು ಹೆಚ್ಚಾಗಿ ಸುದ್ದಿಯಾಗಿದ್ದು ಅವರ ವಿವಾದಗಳಿಂದ. ಅದರಲ್ಲೂ ಪಾಕಿಸ್ತಾನವನ್ನು ಹೊಗಳುವ ಮೂಲಕವೇ ಜಾಸ್ತಿ ಸುದ್ದಿಯಾಗುತ್ತಿದ್ದಾರೆ.  ಅದರಲ್ಲೂ 2018ರಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾರನ್ನು ಅಪ್ಪಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೇ ವಿಚಾರವಾಗಿಯೇ ಪಂಜಾಬ್​ನ ಅಂದಿನ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​  ಕೂಡ ಸಿಧು ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ನಮ್ಮ ದೇಶದ ಸಿಡಿಎಸ್​ ಮತ್ತು ಇತರ ಪ್ರಮುಖ ಸೇನಾಧಿಕಾರಿಗಳು ಮೃತಪಟ್ಟರೆ ಒಂದೂ ಸಂತಾಪದ ನುಡಿಗಳಿಲ್ಲ ಎಂಬುದು ಬಿಜೆಪಿ ಆಕ್ರೋಶವಾಗಿದೆ.

ಇದನ್ನೂ ಓದಿ: Farmers Protest ಶನಿವಾರ ಅಂತ್ಯವಾಗಲಿದೆ 15 ತಿಂಗಳ ಸುದೀರ್ಘ ಪ್ರತಿಭಟನೆ; ದೆಹಲಿ ಗಡಿಯಿಂದ ತೆರಳುತ್ತಿರುವ ಪ್ರತಿಭಟನಾ ನಿರತ ರೈತರು