Saryu Canal National Project: ಡಿ.11ಕ್ಕೆ ಮತ್ತೆ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ; 9802 ಕೋಟಿ ರೂ.ವೆಚ್ಚದ ಯೋಜನೆ ಉದ್ಘಾಟನೆ
ಈ ಯೋಜನೆಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ 1978ರಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭ ಮಾಡಿತ್ತು. ಎರಡು ಜಿಲ್ಲೆಗಳಿಗೆ ಅನುಕೂಲವಾಗುವಂತೆ 78.68 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿತ್ತು.
ಲಖನೌ: ಬರುವ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದಾದರ ಮೇಲೆ ಇನ್ನೊಂದರಂತೆ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಗೋರಖ್ಪುರ್ನಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸೇರಿ ಮೂರು ಬೃಹತ್ ಯೋಜನೆಗಳನ್ನು ಲೋಕಾಪರ್ಣೆ ಮಾಡಿದ್ದ ಪ್ರಧಾನಿ ಮೋದಿ ಡಿ.11ಕ್ಕೆ ಮತ್ತೆ ಉತ್ತರಪ್ರದೇಶಕ್ಕೆ ತೆರಳಲಿದ್ದಾರೆ. ಅಂದು ಬಲರಾಂಪುರ ಜಿಲ್ಲೆಯಲ್ಲಿ 9802 ಕೋಟಿ ರೂಪಾಯಿ ವೆಚ್ಚದ ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ಇದು ಉತ್ತರಪ್ರದೇಶದಲ್ಲಿಯೇ ಅತ್ಯಂತ ದೊಡ್ಡ ನಾಲಾ ಯೋಜನೆ ಎನಿಸಲಿದ್ದು, ಇಲ್ಲಿನ 9 ಜಿಲ್ಲೆಗಳಾದ ಬಹ್ರೈಚ್, ಗೊಂಡಾ, ಶ್ರಾವಸ್ತಿ, ಬಲರಾಮ್‌ಪುರ, ಬಸ್ತಿ, ಸಿದ್ಧಾರ್ಥನಗರ, ಸಂತ ಕಬೀರ್ ನಗರ, ಗೋರಖ್‌ಪುರ ಮತ್ತು ಮಹಾರಾಜ್ಗಂಜ್ಗಳ ಸುಮಾರು 25-30 ಲಕ್ಷ ರೈತರಿಗೆ ನೀರಾವರಿ ಅನುಕೂಲ ಮಾಡಿಕೊಡಲಿದೆ ಎಂದು ಜಲಶಕ್ತಿ ಸಚಿವ ಮಹೇಂದ್ರ ಸಿಂಗ್ ತಿಳಿಸಿದ್ದಾರೆ. ಈ ಯೋಜನೆಯಡಿ ಘಾರ್ಗಾ, ಸರಯೂ, ರಾಫ್ತಿ, ಬಂಗಂಗಾ ಮತ್ತು ರೋಹಿನ್ ನದಿಗಳನ್ನು ಸಂಪರ್ಕಿಸಲಾಗಿದೆ. ಹಾಗೇ, 6600 ಕಿಮೀ ದೂರದ ಹಲವು ಉಪಕಾಲುವೆಗಳು 318 ಕಿಮೀ ಉದ್ದದ ಮುಖ್ಯ ನಾಲೆಯನ್ನು ಸಂಪರ್ಕಿಸುತ್ತವೆ. ಒಟ್ಟಾರೆ 14.04 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಹಾಗೇ ಮಳೆಗಾಲದಲ್ಲಿ ನೇಪಾಳದಿಂದ ಬರುವ ನೀರಿನ ಮಟ್ಟವನ್ನು ಕುಗ್ಗಿಸುವ ಮೂಲಕ, ಪ್ರವಾಹ ಭೀತಿಯನ್ನು ಕಡಿಮೆ ಮಾಡಲಿದೆ.
ಈ ಯೋಜನೆಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ 1978ರಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭ ಮಾಡಿತ್ತು. ಎರಡು ಜಿಲ್ಲೆಗಳಿಗೆ ಅನುಕೂಲವಾಗುವಂತೆ 78.68 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿತ್ತು. ಅದಾದ ನಾಲ್ಕು ವರ್ಷಗಳ ನಂತರ ಅಂದರೆ 1982ರಲ್ಲಿ 9 ಜಿಲ್ಲೆಗಳಿಗೆ ವಿಸ್ತರಿಸಲಾಯಿತು ಮತ್ತು ಯೋಜನೆಯ ಹೆಸರನ್ನು ಸರಯೂ ಕಾಲುವೆ ಯೋಜನೆಯೆಂದು ಹೆಸರಿಡಲಾಯಿತು. ಹಾಗೇ. 2021ರ ಹೊತ್ತಿಗೆ ಯೋಜನೆಗೆ 9802 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಲಾಯಿತು.
ಇದನ್ನೂ ಓದಿ: Bipin Rawat: ಬಿಪಿನ್ ರಾವತ್ಗೆ ಚಾಲಕರಾಗಿದ್ದರು ಮೈಸೂರಿನ ಯೋಧ; ಹಳೆಯ ದಿನಗಳನ್ನು ಮೆಲುಕು ಹಾಕಿದ ವೇಣು