Bipin Rawat: ಬಿಪಿನ್ ರಾವತ್ಗೆ ಚಾಲಕರಾಗಿದ್ದರು ಮೈಸೂರಿನ ಯೋಧ; ಹಳೆಯ ದಿನಗಳನ್ನು ಮೆಲುಕು ಹಾಕಿದ ವೇಣು
Helicopter Crash: ದೇಶ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ನಿಮಗೆ ಸಿಕ್ಕಿದೆ. ಸರಿಯಾಗಿ ಕೆಲಸ ಮಾಡಿ ಎನ್ನುತ್ತಿದ್ದರು ಎಂದು ಮೈಸೂರಿನ ಯೋಧ ವೇಣು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮೈಸೂರು: ತಮಿಳುನಾಡಿನ ಕೂನೂರಿನ ಬಳಿ ಭಾರತೀಯ ಸೇನೆಯ (Indian Army) ಹೆಲಿಕಾಪ್ಟರ್ ಪತನವಾಗಿ, ಸಿಡಿಎಸ್ (CDS) ಬಿಪಿನ್ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಬಿಪಿನ್ ರಾವತ್ (Bipin Rawat) ಅವರ ಮೃತದೇಹದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನೆರವೇರಲಿದೆ. ಅಂದಹಾಗೆ, ಬಿಪಿನ್ ರಾವತ್ ಅವರಿಗೂ ಕರ್ನಾಟಕಕ್ಕೂ ಬಹಳ ನಂಟಿದೆ. ಬಿಪಿನ್ ರಾವತ್ ಬೆಂಗಳೂರು ಹಾಗೂ ಕೊಡಗಿಗೆ ಆಗಮಿಸಿದ್ದರು. ಹಾಗೇ, ಬಿಪಿನ್ ರಾವತ್ ಅವರ ಚಾಲಕರಾಗಿ ಕೆಲಸ ಮಾಡಿದ್ದ ಮೈಸೂರು ಯೋಧನ ಹೆಸರು ವೇಣು. 2007-08ರ ಸಂಧರ್ಭದಲ್ಲಿ ವೇಣು ಬಿಪಿನ್ ರಾವತ್ ಅವರ ಜೊತೆ ಕೆಲಸ ಮಾಡಿದ್ದರು. ಬಿಪಿನ್ ರಾವತ್ ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿರುವ ವೇಣು, ಬಿಪಿನ್ ರಾವತ್ ತುಂಬ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದರು. ಒಂದು ವರ್ಷ ಅವರ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ. ಸೂಪೂರ್ನಲ್ಲಿ ನಾನು ಅವರ ಜೊತೆ ಕೆಲಸ ಮಾಡಿದ್ದೆ. ಅವರಿಗೆ ಡ್ರೈವರ್ ಆಗಿ ಕೆಲಸ ಮಾಡಿದ್ದೆ ಎಂದಿದ್ದಾರೆ.
ನಾನು ಮತ್ತು ಬಿಪಿನ್ ರಾವತ್ ಪ್ರತಿದಿನ 70 ಕಿ.ಮೀ ಹೋಗುತ್ತಿದ್ದೆವು. ಈ ವೇಳೆ ವೈಯುಕ್ತಿವಾಗಿಯೂ ನನ್ನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಕೆಳ ಹಂತದ ಅಧಿಕಾರಿಗಳ ಜೊತೆಯೂ ಬಿಪಿನ್ ರಾವತ್ ತುಂಬ ಆತ್ಮೀಯವಾಗಿ ಇರುತ್ತಿದ್ದರು. ಅವರ ಕೆಲಸ ನೋಡಿ ತುಂಬಾ ಖುಷಿಯಾಗ್ತಾ ಇತ್ತು. ಕೆಲಸದ ವಿಚಾರವಾಗಿ ಅವರು ಸಾಕಷ್ಟು ಕಟ್ಟುನಿಟ್ಟಿನವರಾಗಿದ್ದರು. ದೇಶ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ನಿಮಗೆ ಸಿಕ್ಕಿದೆ. ಸರಿಯಾಗಿ ಕೆಲಸ ಮಾಡಿ ಎನ್ನುತ್ತಿದ್ದರು ಎಂದು ವೇಣು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬಿಪಿನ್ ರಾವತ್ ಬೆಂಗಳೂರಿನ ಏರ್ ಶೋನಲ್ಲೂ ಪಾಲ್ಗೊಂಡಿದ್ದರು. ಹಾಗೇ, ಕೊಡಗಿಗೆ 2 ಬಾರಿ ಭೇಟಿ ನೀಡಿದ್ದರು. ಬಿಪಿನ್ ರಾವತ್ 2020ರಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಆಗಮಿಸಿದ್ದರು. 2017ರಲ್ಲಿ ಜನರಲ್ ಕಾರ್ಯಪ್ಪ ಹಾಗೂ ತಿಮ್ಮಯ್ಯ ಪುತ್ಥಳಿ ಉದ್ಘಾಟನೆಗೂ ಬಿಪಿನ್ ರಾವತ್ ಕೊಡಗಿನ ವಿರಾಜಪೇಟೆಗೆ ಬಂದಿದ್ದರು. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿಗೂ ಭೇಟಿ ನೀಡಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ವಾಯುಪಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಡಿಎಸ್ ಬಿಪಿನ್ ರಾವತ್ ನಿನ್ನೆ ಉಪನ್ಯಾಸ ನೀಡಲು ವೆಲ್ಲಿಂಗ್ಟನ್‍ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತಮ್ಮ ಪತ್ನಿ ಮಧುಲಿಕಾ ರಾವತ್, ತಮ್ಮ ಸಿಬ್ಬಂದಿಯೊಂದಿಗೆ ತೆರಳುತ್ತಿದ್ದರು. ಆಗ ಹೆಲಿಪ್ಯಾಡ್‍ನಿಂದ ಲ್ಯಾಂಡ್ ಆಗಬೇಕಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡಿತ್ತು. ಹೆಲಿಕಾಪ್ಟರ್ಗೆ ಬೆಂಕಿ ಹೊತ್ತಿಕೊಂಡು ಒಳಗಿದ್ದ 14 ಜನರೂ ಕೆಳಗೆ ಬಿದ್ದಿದ್ದರು. ಅವರಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿ 13 ಜನರು ಸಾವನ್ನಪ್ಪಿದ್ದು, ಈ ವರ್ಷದ ಸ್ವಾತಂತ್ರ್ಯ ದಿನದಂದು ಶೌರ್ಯ ಚಕ್ರ ಪಡೆದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರೇ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ದುರಂತ ಹೇಗೆ ಸಂಭವಿಸಿತು ಎಂಬ ಬಗ್ಗೆ ಅವರು ನೀಡುವ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಎಕ್ಸ್ಕ್ಲೂಸಿವ್ ಫೋಟೋಗಳು ಇಲ್ಲಿವೆ
CDS Bipin Rawat: ಬಿಪಿನ್ ರಾವತ್ ಅವರಿಗಿತ್ತು ಕೊಡಗಿನ ನಂಟು; ಬೆಂಗಳೂರಿಗೂ ಭೇಟಿ ನೀಡಿದ್ದ ಸಿಡಿಎಸ್
Published On - 3:54 pm, Thu, 9 December 21