CDS Bipin Rawat: ಬಿಪಿನ್ ರಾವತ್ ಅವರಿಗಿತ್ತು ಕೊಡಗಿನ ನಂಟು; ಬೆಂಗಳೂರಿಗೂ ಭೇಟಿ ನೀಡಿದ್ದ ಸಿಡಿಎಸ್

ಉನ್ನತ ಹುದ್ದೆಯಲ್ಲಿದ್ದ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಕರ್ನಾಟಕದ ಜೊತೆಗೂ ನಂಟು ಹೊಂದಿದ್ದರು. ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮಡಿಕೇರಿಗೆ ಈ ಮೊದಲು ಬಂದಿದ್ದರು.

CDS Bipin Rawat: ಬಿಪಿನ್ ರಾವತ್ ಅವರಿಗಿತ್ತು ಕೊಡಗಿನ ನಂಟು; ಬೆಂಗಳೂರಿಗೂ ಭೇಟಿ ನೀಡಿದ್ದ ಸಿಡಿಎಸ್
ಸಿಡಿಎಸ್ ಬಿಪಿನ್ ರಾವತ್

ಬೆಂಗಳೂರು: ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ನಿಧನ ಹೊಂದಿರುವ ವಿಷಾದನೀಯ ಘಟನೆ ಬುಧವಾರ ನಡೆದಿದೆ. ತಮಿಳುನಾಡಿನ ಕುನೂರ್​​ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್​ ರಾವತ್ (Bipin Rawat) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವಿನ ಹೋರಾಟದಲ್ಲಿ ಇದ್ದ ಬಿಪಿನ್​ ರಾವತ್ ಮರಣವನ್ನು ಭಾರತೀಯ ವಾಯುಸೇನೆ ದೃಢಪಡಿಸಿದೆ. ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್​​ನಲ್ಲಿದ್ದ ಇತರ 11 ಮಂದಿ ಇಂದಿನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ತಿಳಿಸಲಾಗಿದೆ.

ಉನ್ನತ ಹುದ್ದೆಯಲ್ಲಿದ್ದ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಕರ್ನಾಟಕದ ಜೊತೆಗೂ ನಂಟು ಹೊಂದಿದ್ದರು. ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮಡಿಕೇರಿಗೆ ಈ ಮೊದಲು ಬಂದಿದ್ದರು. ಬಿಪಿನ್ ರಾವತ್​ ಕೊಡಗು ಜಿಲ್ಲೆಗೆ 2 ಬಾರಿ ಭೇಟಿ ನೀಡಿದ್ದರು. 2020 ರಲ್ಲಿ ಜ. ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಅವರು ಆಗಮಿಸಿದ್ದರು. ಪತ್ನಿ ಮಧುಲಿಕಾ ಜತೆ ಆಗಮಿಸಿದ್ದರು. 2017 ರಲ್ಲಿ ಕಾರ್ಯಪ್ಪ, ತಿಮ್ಮಯ್ಯ ಪುತ್ಥಳಿ ಉದ್ಘಾಟನೆಗೆ ಬಂದಿದ್ದರು. ಸಿಡಿಎಸ್ ಬಿಪಿನ್ ರಾವತ್, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ಪುತ್ಥಳಿ ಅನಾವರಣಗೊಳಿಸಿದ್ದರು.

ಕೊನೆಯದಾಗಿ ಈ ವರ್ಷದ ಅಕ್ಟೋಬರ್ 22 ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ವಾಯುಪಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ‌ರು. ಯಲಹಂಕದ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಕಾರ್ಯಕ್ರಮದಲ್ಲಿ ಅವರು ಹಾಜರಿದ್ದರು. IAF ಕಾನ್‌ಕ್ಲೇವ್, ಸ್ವರ್ಣಿಮ್ ವಿಜಯ ವರ್ಷ್ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಜೊತೆ ಭಾಗಿಯಾಗಿದ್ದರು. ಅಂದೇ ಸಿ.ವಿ.ರಾಮನ್ ನಗರಕ್ಕೂ ಭೇಟಿ ನೀಡಿದ್ದರು.

ಯಾರು ಈ ಬಿಪಿನ್ ರಾವತ್​? ಬಿಪಿನ್ ರಾವತ್​ ಪೂರ್ತಿ ಹೆಸರು ಬಿಪಿನ್​ ಲಕ್ಷ್ಮಣ್​ ಸಿಂಗ್​ ರಾವತ್​. ಇವರಿಗೆ 63 ವರ್ಷ ವಯಸ್ಸಾಗಿತ್ತು. ಮೂಲತಃ ಉತ್ತರಾಖಂಡ್​​ನವಾರಗಿದ್ದು, 2019ರಲ್ಲಿ ಈ ಸಿಡಿಎಸ್​ ಹುದ್ದೆಗೆ ಏರಿದ್ದರು. 2015ರಲ್ಲಿ ನಾಗಾಲ್ಯಾಂಡ್​ ಬಳಿ ನಡೆದಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ ಬಿಪಿನ್ ರಾವತ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಇಂದು ಬಿಪಿನ್​ ರಾವತ್ ಸಾವಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಗಡ್ವಾಲಿ ರಜಪೂತ ಕುಟುಂಬದವರು ಮಾರ್ಚ್ 16, 1958 ರಂದು ಉತ್ತರಾಖಂಡದ ಪೌರಿಯಲ್ಲಿ ಗಡ್ವಾಲಿ ರಜಪೂತ ಕುಟುಂಬದಲ್ಲಿ ಜನಿಸಿದ ಬಿಪಿನ್ ರಾವತ್ 1978ರಲ್ಲಿ ಸೇನೆಗೆ ಸೇರಿದ್ದರು. ಬಿಪಿನ್ ರಾವತ್ ಅವರು 2011 ರಲ್ಲಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಮಿಲಿಟರಿ ಮಾಧ್ಯಮ ಅಧ್ಯಯನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.

ಸೇನಾ ಮುಖ್ಯಸ್ಥರಿಂದ ಸಿಡಿಎಸ್‌ವರೆಗೆ ಪಯಣ ಬಿಪಿನ್ ರಾವತ್ ಅವರು 01 ಸೆಪ್ಟೆಂಬರ್ 2016 ರಂದು ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 31 ಡಿಸೆಂಬರ್ 2016 ರಂದು ಭಾರತೀಯ ಸೇನೆಯ 26 ನೇ ಮುಖ್ಯಸ್ಥರ ಜವಾಬ್ದಾರಿಯನ್ನು ಪಡೆದರು. ಅದೇ ಸಮಯದಲ್ಲಿ, 30 ಡಿಸೆಂಬರ್ 2019 ರಂದು, ಅವರು ಭಾರತದ ಮೊದಲ ಸಿಡಿಎಸ್ ಆಗಿ ನೇಮಕಗೊಂಡಿದ್ದು 01 ಜನವರಿ 2020 ರಂದು ಸಿಡಿಎಸ್ ಉಸ್ತುವಾರಿ ವಹಿಸಿಕೊಂಡರು.

ಇದನ್ನೂ ಓದಿ: CDS Bipin Rawat: ಅತಿಸೂಕ್ಷ್ಮ ಹುದ್ದೆ ನಿರ್ವಹಿಸಿದ ಸಮರ್ಥ ವ್ಯಕ್ತಿ ಸಿಡಿಎಸ್ ಬಿಪಿನ್ ರಾವತ್

ಇದನ್ನೂ ಓದಿ: CDS Bipin Rawat: ವಿಶ್ವದ ಹಲವೆಡೆ ಎಂಐ 17 ಹೆಲಿಕಾಪ್ಟರ್​ ದುರಂತಗಳ ಸರಮಾಲೆ: ಬಿಕ್ರಮ್ ವೊಹ್ರಾ ಬರಹ

Published On - 8:28 pm, Wed, 8 December 21

Click on your DTH Provider to Add TV9 Kannada