CDS Bipin Rawat: ಅತಿಸೂಕ್ಷ್ಮ ಹುದ್ದೆ ನಿರ್ವಹಿಸಿದ ಸಮರ್ಥ ವ್ಯಕ್ತಿ ಸಿಡಿಎಸ್ ಬಿಪಿನ್ ರಾವತ್

ರಕ್ಷಣಾ ಪಡೆಗಳ ಏಕೀಕೃತ ಕಮಾಂಡ್​ಗಳ ರಚನೆ ಮತ್ತು ಸೇನೆಯ ಪುನರ್​ ಸಂಘಟನೆಯ ಯೋಜನೆ ರೂಪಿಸುವ ಮಹತ್ವದ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.

CDS Bipin Rawat: ಅತಿಸೂಕ್ಷ್ಮ ಹುದ್ದೆ ನಿರ್ವಹಿಸಿದ ಸಮರ್ಥ ವ್ಯಕ್ತಿ ಸಿಡಿಎಸ್ ಬಿಪಿನ್ ರಾವತ್
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 08, 2021 | 7:44 PM

ವಿಶ್ವದ ಬಲಿಷ್ಠ ಸಶಸ್ತ್ರಪಡೆಗಳಲ್ಲಿ ಒಂದು ಎಂಬ ಶ್ರೇಯ ಭಾರತದ ಸಶಸ್ತ್ರಪಡೆಗಳಿವೆ. ಹಲವು ಸಂಘರ್ಷಗಳಲ್ಲಿ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ನಮ್ಮ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಕಾಲಕ್ಕೆ ತಕ್ಕಂತೆ ನಮ್ಮ ಸೇನಾಪಡೆಗಳು ಹೆಜ್ಜೆ ಹಾಕುತ್ತಿಲ್ಲ ಎಂಬ ಆಕ್ಷೇಪ ಹತ್ತಾರು ವರ್ಷಗಳಿಂದ ಕೇಳಿಬರುತ್ತಿತ್ತು. ಅಮೆರಿಕ, ರಷ್ಯಾ, ಚೀನಾದಂಥ ಬಲಾಢ್ಯ ದೇಶಗಳು ಅಂತಿರಲಿ, ನೆರೆಯ ಚೀನಾ, ಪಾಕಿಸ್ತಾನಗಳು ಮಿಲಿಟರಿ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ತಂದಿದ್ದರೂ ಭಾರತದಲ್ಲಿ ಈ ಕಾರ್ಯಕ್ಕೆ ಕೈಹಾಕಲು ಸರ್ಕಾರಗಳಿಗೆ ಹಿಂಜರಿಕೆಯಿತ್ತು. ಭದ್ರತೆಯ ಆತಂಕಗಳು ಒಂದೆಡೆಯಿದ್ದರೆ, ಪ್ರಬಲ ರಾಜಕೀಯ ಇಚ್ಛಾಶಕ್ತಿ ಮತ್ತು ಬಹುಮತದ ಸರ್ಕಾರಗಳು ಅಸ್ತಿತ್ವಕ್ಕೆ ಬಾರದಿದ್ದುದು ಮತ್ತೊಂದು ಕಾರಣ. ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸಲು ಮತ್ತು ಸಶಸ್ತ್ರ ಪಡೆಗಳನ್ನು ದೃಢವಾದ ರೀತಿಯಲ್ಲಿ ಮುನ್ನಡೆಸಲು ಸಶಸ್ತ್ರ ಪಡೆಗಳ ಸಂಘಟನೆ ಮತ್ತು ಸಂಯೋಜನೆಯಲ್ಲಿ ಸುಧಾರಣೆ ತರಲೇಬೇಕಾದ ಅನಿವಾರ್ಯತೆ ಕಳೆದ ಐದು ವರ್ಷಗಳಿಂದೀಚೆಗೆ ಮತ್ತಷ್ಟು ಹೆಚ್ಚಾಯಿತು. ಈ ಹೊತ್ತಿಗೆ ದೇಶದಲ್ಲಿ ನಿಚ್ಚಳ ಬಹುಮತದ ಕೇಂದ್ರ ಸರ್ಕಾರವೂ ಆಡಳಿತದಲ್ಲಿತ್ತು. ಭದ್ರತೆಗೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಸುಧಾರಣಾ ಪ್ರಕ್ರಿಯೆ ಮೊದಲ ಹೆಜ್ಜೆ ಇಡಲು ಮುಂದಾಯಿತು.

ಈ ಮಹತ್ವದ ಹೆಜ್ಜೆಯ ಮೊದಲ ಅಧ್ಯಾಯವೇ ಸಿಡಿಎಸ್ ಎಂಬ ಹುದ್ದೆಯ ರಚನೆ. ಭೂಸೇನೆ (ಜನರಲ್), ವಾಯುಸೇನೆ (ಏರ್ ಚೀಫ್ ಮಾರ್ಷಲ್) ಮತ್ತು ನೌಕಾಸೇನೆಗಳಿಗೆ (ಅಡ್ಮಿರಲ್) ಪ್ರತ್ಯೇಕವಾಗಿ ಸಿಬ್ಬಂದಿ ಮುಖ್ಯಸ್ಥರು ಇರುವುದು ಎಲ್ಲರಿಗೂ ತಿಳಿದ ವಿಚಾರ. ಈ ಮೂರೂ ಹುದ್ದೆಗಳಿಗೂ ಉನ್ನತ ಹಂತದ ಹುದ್ದೆಯೊಂದನ್ನು ಹೊಸದಾಗಿ ಸೃಷ್ಟಿಸಲಾಯಿತು. ಅದೇ ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥರ (Chief of Defence Staff – CDS) ಹುದ್ದೆ. ಈ ಹುದ್ದೆಯನ್ನು ಮೊದಲ ಬಾರಿಗೆ ಅಲಂಕರಿಸಿದವರು ಭೂಸೇನೆಯ ಹಿಂದಿನ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್.

ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಗಳನ್ನು ಒಳಗೊಳ್ಳುವ ಭಾರತದ ಸಶಸ್ತ್ರಪಡೆಗಳ ಸಿಬ್ಬಂದಿ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರವು ಜನವರಿ 1, 2020ರಂದು ನೇಮಿಸಿತ್ತು. ಇದೇ ಹೊತ್ತಿಗೆ ರಕ್ಷಣಾ ಇಲಾಖೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ರಾವತ್ ಸೇವೆ ಸಲ್ಲಿಸುತ್ತಿದ್ದರು. ಏಕೀಕೃತ ಕಮಾಂಡ್​ಗಳ ರಚನೆ ಮತ್ತು ಸೇನೆಯ ಪುನರ್​ ಸಂಘಟನೆಯ ಮಹತ್ವದ ಹೊಣೆಗಾರಿಕೆಯನ್ನು ಅವರು ನಿರ್ವಹಿಸುತ್ತಿದ್ದರು.

ಸಿಡಿಎಸ್ ಬಿಪಿನ್ ರಾವತ್ ಬದುಕಿನ ನೋಟ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ದಿವಂಗತ ಜನರಲ್ ಬಿಪಿನ್ ರಾವತ್ ಸೇನಾ ಅಧಿಕಾರಿಗಳ ಕುಟುಂಬಕ್ಕೆ ಸೇರಿದ ಕುಡಿಯಾಗಿದ್ದವರು. ಜನಿಸಿದ್ದು 16ನೇ ಮಾರ್ಚ್ 1958ರಂದು. ಅವರ ತಂದೆ ಲಕ್ಷ್ಮಣಸಿಂಗ್ ರಾವತ್ ಸಹ ಸೇನೆಯಲ್ಲಿ ಅಧಿಕಾರಿಯಾಗಿದ್ದವರು. ಲೆಫ್ಟಿನೆಂಟ್ ಜನರಲ್ ಅಂದರೆ ಸೇನೆಯ ಉಪಮುಖ್ಯಸ್ಥರ ಹುದ್ದೆಗೇರಿದ್ದವರು. ರಾವತ್ ಅವರ ಅಜ್ಜ ಸಹ ಸೇನೆಯಲ್ಲಿದ್ದವರು. ಡೆಹ್ರಾಡೂನ್‌ನ ಕೇಮ್‌ಬ್ರಿಯನ್ ಹಾಲ್ ಶಾಲೆ ಹಾಗೂ ಶಿಮ್ಲಾದ ಸೇಂಟ್ ಎಡ್ವರ್ಡ್‌ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ನಂತರ ಖಡಕವಾಸ್ಲಾದ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಸೇರಿದರು. ಅಧ್ಯಯನದಲ್ಲಿ ಚುರುಕಾಗಿದ್ದ ರಾವತ್ ಅವರಿಗೆ ಅಲ್ಲಿ ಅವರಿಗೆ ಸ್ವೋರ್ಡ್‌ ಆಫ್‌ ಹಾನರ್ ಪುರಸ್ಕಾರ ಸಿಕ್ಕಿತ್ತು.

ರಾವತ್‌ರವರು ವೆಲ್ಲಿಂಗ್‌ಟನ್‌ನ ಡಿಫೆನ್ಸ್‌ ಸರ್ವಿಸಸ್ ಸ್ಟಾಫ್‌ ಕಾಲೇಜ್​ನಲ್ಲಿಯೂ (ಡಿಎಸ್‌ಎಸ್‌ಸಿ) ಕೆಲ ಸಮಯ ಅಭ್ಯಾಸ ಮಾಡಿದ್ದ ರಾವತ್, ಅಮೆರಿಕದ ಆರ್ಮಿ ಕಮಾಂಡ್‌ ಹಾಗೂ ಕಾನ್ಸಾಸ್‌ನ ಫೋರ್ಟ್‌ ಲೀವನ್‌ವರ್ತ್​ಗಳಲ್ಲಿ ಉನ್ನತ ಹಂತದ ಅಧ್ಯಯನ ಮಾಡಿದ್ದರು. 2011ರಲ್ಲಿ ಇವರಿಗೆ ಸೇನೆ ಹಾಗೂ ಮಾಧ್ಯಮಗಳ ವ್ಯೂಹಾತ್ಮಕ ಅಧ್ಯಯನಕ್ಕಾಗಿ ಮೀರತ್‌ನ ಚೌಧುರಿ ಚರಣ್‌ಸಿಂಗ್ ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿ ಪದವಿಯೂ ದೊರೆಯಿತು.

16ನೇ ಡಿಸೆಂಬರ್‌ 1978ರಂದು ಗೂರ್ಖಾ ರೈಫಲ್‌ನ 5ನೇ ಬಟಾಲಿಯನ್​ನಿಂದ ಅವರ ವೃತ್ತಿಜೀವನ ಆರಂಭವಾಯಿತು. ಅವರ ತಂದೆಯ ಸೈನಿಕ ವೃತ್ತಿ ಸಹ ಇಲ್ಲಿಂದಲೇ ಆರಂಭವಾಗಿದ್ದು. ರಾವತ್ ಅವರಿಗೆ ಎತ್ತರದ ಪರ್ವತ ಪ್ರದೇಶಗಳ ಯುದ್ಧಗಳಲ್ಲಿ ಹೆಚ್ಚಿನ ಅನುಭವ ಹಾಗೂ ನೈಪುಣ್ಯವಿತ್ತು. 10 ವರ್ಷಗಳ ಕಾಲ ಒಳನುಸುಳುವಿಕೆಯ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಸೈನ್ಯದ ವಿವಿಧ ಹಂತಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾವತ್ ಕಾಂಗೊದಲ್ಲಿ ಕೆಲ ಕಾಲ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಮುನ್ನಡೆಸಿದ್ದರು.

ಭಾರತ ಸರ್ಕಾರವು ಜನವರಿ 1, 2020ರಂದು ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರಾಗಿ ನೇಮಿಸಿತ್ತು. ಇದೇ ಸಮಯದಲ್ಲಿ ರಕ್ಷಣಾ ಇಲಾಖೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ಏಕೀಕೃತ ಕಮಾಂಡ್​ಗಳ ರಚನೆ ಮತ್ತು ಸೇನೆಯ ಪುನರ್​ ಸಂಘಟನೆಯ ಯೋಜನೆ ರೂಪಿಸುವ ಮಹತ್ವದ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಭಾರತದ ಮೊದಲ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ರಾವತ್ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಮುಖ್ಯಸ್ಥರಿಗಿಂತಲೂ ಉನ್ನತ ಸ್ಥಾನಮಾನಕ್ಕೇರಿದ್ದರು. ಈ ಹುದ್ದೆಯಲ್ಲಿರುವವರನ್ನು ರಕ್ಷಣಾ ಸಚಿವರಿಗೆ ದೇಶದ ಭದ್ರತೆಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಸಲಹೆ ನೀಡುವ ವ್ಯಕ್ತಿಯಾಗಿ ಗುರುತಿಸಲಾಗಿದೆ.

ಸುಧಾರಣೆಗೆ ಯತ್ನ ಡಿಸೆಂಬರ್ 31, 2016ರಿಂದ ಡಿಸೆಂಬರ್ 31, 2019ರವರೆಗೆ ರಾವತ್ ಭೂಸೇನೆಯ ಮುಖ್ಯಸ್ಥರಾಗಿದ್ದರು. ನೇರನುಡಿಗೆ ಹೆಸರುವಾಸಿಯಾಗಿದ್ದ ರಾವತ್ ಸೈನಿಕರು ನೇರವಾಗಿ ತಮ್ಮನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಿದ್ದರು. ಎಂದೂ ಸ್ಮಾರ್ಟ್​ಫೋನ್ ಬಳಸುತ್ತಿರಲಿಲ್ಲ. ಭೂಸೇನೆಯ ಗಾತ್ರ ಕಡಿಮೆಗೊಳಿಸಿ, ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧಗೊಳಿಸುವ ಸಲುವಾಗಿ ಹಲವು ಅಧ್ಯಯನಗಳಿಗೆ ಆದೇಶಿಸಿದ್ದರು. ಸಶಸ್ತ್ರಪಡೆಗಳು ಮೂರೂ ವಿಭಾಗಗಳನ್ನು ಸಂಯೋಜಿಸುವ ಏಕೀಕೃತ ಯುದ್ಧ ತಂಡ (Integrated Battle Groups) ರಚನೆಗೂ ರಾವತ್ ಮುಂದಾಗಿದ್ದರು.

ಉತ್ತಮ ಯೋಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ಯುದ್ಧ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ಸೇನಾ ಮುಖ್ಯಸ್ಥರ ಪ್ರಶಂಸಾ ಪತ್ರ, ಸೇನಾ ಕಮಾಂಡರ್​ ಪ್ರಶಂಸಾ ಪತ್ರದ ಗೌರವಕ್ಕೂ ಅವರು ಪಾತ್ರರಾಗಿದ್ದರು.

ಇದನ್ನೂ ಓದಿ: Bipin Rawat Death: ಸೇನಾ ಹೆಲಿಕಾಪ್ಟರ್ ಪತನ ದುರಂತ; ಸಿಡಿಎಸ್ ಬಿಪಿನ್ ರಾವತ್​ ದುರ್ಮರಣ ಇದನ್ನೂ ಓದಿ: CDS Bipin Rawat ಸಿಡಿಎಸ್ ಬಿಪಿನ್ ರಾವತ್ ವೃತ್ತಿಜೀವನ: ಸರ್ಜಿಕಲ್ ಸ್ಟ್ರೈಕ್ ಕಾರ್ಯಗತಗೊಳಿಸಿದ್ದ ಗುಡ್ಡಗಾಡು ಸಂಘರ್ಷ ಪರಿಣಿತ

Published On - 7:16 pm, Wed, 8 December 21

ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
Daily Devotional: ಕಾಲಾಷ್ಠಮಿಯ ಮಹತ್ವ ಹಾಗೂ ವಿಶೇಷತೆ ತಿಳಿಯಿರಿ
Daily Devotional: ಕಾಲಾಷ್ಠಮಿಯ ಮಹತ್ವ ಹಾಗೂ ವಿಶೇಷತೆ ತಿಳಿಯಿರಿ
ಮೇಷ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲವಿದೆ
ಮೇಷ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲವಿದೆ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ