ಮುಸ್ಲಿಂ ಡೆಲಿವರಿ ಬಾಯ್ ಬೇಡ ಎಂದ ಸ್ವಿಗ್ಗಿ ಗ್ರಾಹಕ, ಆಕ್ರೋಶ ವ್ಯಕ್ತಪಡಿಸಿದ ಟ್ವೀಟಿಗರು

ಡಿಯರ್ ಸ್ವಿಗ್ಗಿ, ದಯವಿಟ್ಟು ಇಂತಹ ಮತಾಂಧ ವಿನಂತಿಯ ವಿರುದ್ಧ ನಿಲುವು ತೆಗೆದುಕೊಳ್ಳಿ. ನಾವು (ವಿತರಣಾ ಕೆಲಸಗಾರರು) ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರಿಗೂ ಆಹಾರವನ್ನು ತಲುಪಿಸಲು ಇಲ್ಲಿದ್ದೇವೆ...

ಮುಸ್ಲಿಂ ಡೆಲಿವರಿ ಬಾಯ್ ಬೇಡ ಎಂದ ಸ್ವಿಗ್ಗಿ ಗ್ರಾಹಕ, ಆಕ್ರೋಶ ವ್ಯಕ್ತಪಡಿಸಿದ ಟ್ವೀಟಿಗರು
ಪ್ರಾತಿನಿಧಿಕ ಚಿತ್ರ
Edited By:

Updated on: Aug 31, 2022 | 8:52 PM

ದೆಹಲಿ: ಆ್ಯಪ್ ಆಧಾರಿತ ಆಹಾರ ವಿತರಣಾ ವೇದಿಕೆಯಲ್ಲಿ ಹೈದರಾಬಾದ್ (Hyderabad) ಗ್ರಾಹಕರೊಬ್ಬರು ಮಾಡಿದ ವಿನಂತಿಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಅನೇಕರು ಗ್ರಾಹಕನ ಧರ್ಮಾಂಧತೆ ಬಗ್ಗೆ ಕಿಡಿ ಕಾರಿದ್ದಾರೆ. ಸ್ವಿಗ್ಗಿ (Swiggy) ಮೂಲಕ ರೆಸ್ಟೋರೆಂಟ್‌ಗೆ ನೀಡಿದ ಸೂಚನೆಗಳಲ್ಲಿ ಗ್ರಾಹಕರು ತಮಗೆ ಆಹಾರ ಡೆಲಿವರಿ ಮಾಡಲು ಮುಸ್ಲಿಂ ವ್ಯಕ್ತಿ ಬೇಡ ಎಂದು ಹೇಳಿದ್ದಾರೆ . ಈ ಬಗ್ಗೆ ಕಾರ್ಮಿಕರ ಸಂಘಟನೆಯ ಮುಖ್ಯಸ್ಥ ಶೇಕ್ ಸಲಾವುದ್ದೀನ್, ಸ್ವಿಗ್ಗಿ ಆರ್ಡರ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು ಈ ಬಗ್ಗೆ ನೀವು ನಿಲುವು ತೆಗೆದುಕೊಳ್ಳಿ ಎಂದು ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂದು ಎಲ್ಲರಿಗೂ ಆಹಾರವನ್ನು ತಲುಪಿಸಲು ನಾವು ಇಲ್ಲಿದ್ದೇವೆ ಎಂದು ಅವರು ಹೇಳಿದರು. ಡಿಯರ್ ಸ್ವಿಗ್ಗಿ, ದಯವಿಟ್ಟು ಇಂತಹ ಮತಾಂಧ ವಿನಂತಿಯ ವಿರುದ್ಧ ನಿಲುವು ತೆಗೆದುಕೊಳ್ಳಿ. ನಾವು (ವಿತರಣಾ ಕೆಲಸಗಾರರು) ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರಿಗೂ ಆಹಾರವನ್ನು ತಲುಪಿಸಲು ಇಲ್ಲಿದ್ದೇವೆ, ಮಜಬ್ ನಹೀ ಸಿಖಾತಾ ಆಪಾಸ್ ಮೇ ಬೈರ್ ರಖ್ನಾ ಎಂದು ಸಲಾವುದ್ದೀನ್ ಟ್ವೀಟ್ ಮಾಡಿದ್ದಾರೆ. ಈ ವಿವಾದಕ್ಕೆ ಸ್ವಿಗ್ಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಕ್ರೋಶ ವ್ಯಕ್ತಪಡಿಸಿದವರಲ್ಲಿ ಕರ್ನಾಟಕದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಒಬ್ಬರು. ಕಾರ್ಮಿಕರು ಧರ್ಮದ ಹೆಸರಿನಲ್ಲಿ ಇಂತಹ ಕಟುವಾದ ಮತಾಂಧತೆಯನ್ನು ಎದುರಿಸುತ್ತಿರುವುದನ್ನು ಪ್ಲಾಟ್‌ಫಾರ್ಮ್ ಕಂಪನಿಗಳು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಅಂತಹ ಕಂಪನಿಗಳು ಯಾವ ಕ್ರಮ ತೆಗೆದುಕೊಳ್ಳುತ್ತವೆ? ಎಂದು ಕಾರ್ತಿ ಸ್ವಿಗಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ವರದಿಯಾಗಿವೆ.


2019 ರಲ್ಲಿ, ಆ್ಯಪ್-ಆಧಾರಿತ ಆಹಾರ ವಿತರಣಾ ಸೇವೆ ಜೊಮಾಟೊ ಆನ್‌ಲೈನ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಆರ್ಡರ್ ಅನ್ನು ರದ್ದುಗೊಳಿಸಿದ ನಂತರ ಒಂದು ನಿಲುವನ್ನು ತೆಗೆದುಕೊಂಡಿದ್ದಕ್ಕಾಗಿ ಪ್ರಶಂಸೆಯನ್ನು ಗಳಿಸಿತು.

“ಆಹಾರಕ್ಕೆ ಧರ್ಮವಿಲ್ಲ. ಅದೊಂದು ಧರ್ಮ” ಎಂದು ರೈಡರ್ ಬದಲಾಯಿಸಬೇಕೆಂಬ ಗ್ರಾಹಕರ ಮನವಿಗೆ ಪ್ರತಿಕ್ರಿಯೆಯಾಗಿ ಕಂಪನಿ ಟ್ವೀಟ್ ಮಾಡಿತ್ತು. ಜೊಮ್ಯಾಟೊ ನಿಲುವನ್ನು ಬೆಂಬಲಿಸಿ, ಕಂಪನಿಯ ಸಂಸ್ಥಾಪಕರು ತಮ್ಮ ವೈಯಕ್ತಿಕ ಖಾತೆಯಿಂದ ತಮ್ಮ ಮೌಲ್ಯಗಳಿಗೆ ಅಡ್ಡಿಯಾಗುವ ಯಾವುದೇ ವ್ಯವಹಾರವನ್ನು ಕಳೆದುಕೊಳ್ಳಲು ವಿಷಾದಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

“ಭಾರತದ ಕಲ್ಪನೆ ಮತ್ತು ನಮ್ಮ ಗೌರವಾನ್ವಿತ ಗ್ರಾಹಕರು ಮತ್ತು ಪಾಲುದಾರರ ವೈವಿಧ್ಯತೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಮ್ಮ ಮೌಲ್ಯಗಳಿಗೆ ಅಡ್ಡಿಯಾಗುವ ಯಾವುದೇ ವ್ಯವಹಾರವನ್ನು ಕಳೆದುಕೊಳ್ಳಲು ನಾವು ವಿಷಾದಿಸುವುದಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದರು.

Published On - 8:44 pm, Wed, 31 August 22