ಕೇಂದ್ರ ವಿರುದ್ಧ ನಿತೀಶ್ ವಾಗ್ದಾಳಿ, ಈಗ ಬೇಕಿರುವುದು ಬಿಜೆಪಿ ಮುಕ್ತ ಭಾರತ ಎಂದ ಕೆಸಿಆರ್
ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಮುಗಿಸುತ್ತೇವೆ ಎಂದು ಆಡಳಿತ ಪಕ್ಷ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪಟನಾದಲ್ಲಿ ಮಾತನಾಡಿದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಪಟನಾ: ಮೋದಿ ಸರ್ಕಾರದ ಮೊದಲು ರೂಪಾಯಿ ಮೌಲ್ಯ ಇಷ್ಟೊಂದು ಕುಸಿದಿರಲಿಲ್ಲ. ಒಂದು ವರ್ಷದಿಂದ ರೈತರು ಏಕೆ ಪ್ರತಿಭಟನೆ ನಡೆಸಬೇಕಾಯಿತು ?ಕೇಂದ್ರದ ವೈಫಲ್ಯದಿಂದ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ನಷ್ಟವನ್ನು ಎದುರಿಸುತ್ತಿದೆ. ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಮುಗಿಸುತ್ತೇವೆ ಎಂದು ಆಡಳಿತ ಪಕ್ಷ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪಟನಾದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (KCR) ಹೇಳಿದ್ದಾರೆ. “ಕಾಂಗ್ರೆಸ್-ಮುಕ್ತ ಭಾರತ” ಎಂಬ ಘೋಷಣೆಯನ್ನು ತಿರುಚುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ರಾವ್ . “ನಮಗೆ ಈಗ ಬೇಕಾಗಿರುವುದು ಬಿಜೆಪಿ-ಮುಕ್ತ ಭಾರತ ಎಂದು ಹೇಳಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ನಾವು ಪ್ರಯತ್ನಿಸುತ್ತೇವೆ ಎಂದು ರಾವ್ ಹೇಳಿದ್ದಾರೆ.ರೂಪಾಯಿ ಮೌಲ್ಯ ಕುಸಿತ, ರೈತರ ಪ್ರತಿಭಟನೆ, ನಿರುದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಇಬ್ಬರು ನಾಯಕರು ವಾಗ್ದಾಳಿ ನಡೆಸಿದ್ದಾರೆ. 2024ರ ಲೋಕಸಭೆ ಚುನಾವಣೆಯ ವೇಳೆಗೆ ವಿರೋಧ ವಿರೋಧ ಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಮತ್ತು ಕಾಂಗ್ರೆಸ್ ಪಕ್ಷವನ್ನು ಜತೆಗೆ ಸೇರಿಸಲಾಗುತ್ತಿದೆಯೇ ಎಂದು ಕೇಳಿದಾಗ ಟಿಆರ್ ಎಸ್ ಮುಖ್ಯಸ್ಥ ರಾವ್, ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಪ್ರಧಾನಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಪಾತ್ರದ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೆಸಿಆರ್, “ಈ ವಿಷಯಗಳನ್ನು ಸೂಕ್ತ ಸಮಯದಲ್ಲಿ ನಿರ್ಧರಿಸಲಾಗುತ್ತದೆ, ನಮಗೆ ಯಾವುದೇ ಆತುರವಿಲ್ಲ” ಎಂದು ಹೇಳಿದರು. ತೆಲಂಗಾಣ ಸಿಎಂ ನಿತೀಶ್ ಕುಮಾರ್ ಅವರನ್ನು ಪ್ರೀತಿಯಿಂದ “ಬಡೆ ಭಾಯ್” (ದೊಡ್ಡಣ್ಣ) ಎಂದು ಕರೆದರು.
ಜನತಾ ದಳ (ಯುನೈಟೆಡ್) ನಾಯಕರ ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆಗೆ ಕೆಸಿಆರ್, ನಿತೀಶ್ ಕುಮಾರ್ ಅವರು ದೇಶದ ಹಿರಿಯ ಮತ್ತು ಅತ್ಯುತ್ತಮ ನಾಯಕರಲ್ಲಿ ಒಬ್ಬರು. ನಾವು ಇತರ ವಿಷಯಗಳ ಬಗ್ಗೆ ಆಮೇಲೆ ಚಿಂತಿಸುತ್ತೇವೆ ಎಂದಿದ್ದಾರೆ . “ಯಾವುದೇ ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ” ಮೋದಿ ಸರ್ಕಾರ ‘ಅಗ್ನಿಪಥ್’ ಯೋಜನೆ ಜಾರಿಗೆ ತಂದಿದೆ ಎಂದು ಟಿಆರ್‌ಎಸ್ ಮುಖ್ಯಸ್ಥರು ಟೀಕಿಸಿದರು.
ವಿಶೇಷ ವರ್ಗದ ಸ್ಥಾನಮಾನದ ಬಿಹಾರದ ಬೇಡಿಕೆಯನ್ನು “ತಿರಸ್ಕರಿಸಿದ” ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ದ ಅವರು ಕಿಡಿಕಾರಿದ್ದಾರೆ. ಇಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರ್, ಕೇಂದ್ರ ಸರ್ಕಾರ ‘ಅತಿಯಾದ ಪ್ರಚಾರ-ಪ್ರಸಾರ’ ಮಾಡುತ್ತಿದೆ ಎಂದು ಆರೋಪಿಸಿದರು.
Published On - 5:56 pm, Wed, 31 August 22