Congress Party: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಬಹಿರಂಗಪಡಿಸಲು ಎಐಸಿಸಿ ನಕಾರ
ಇದು ಪಕ್ಷದ ಆಂತರಿಕ ವಿದ್ಯಮಾನ ಎಂದು ಹೇಳಿರುವ ಎಐಸಿಸಿ, ಪಕ್ಷದ ಯಾವುದೇ ಸದಸ್ಯ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗಳಲ್ಲಿ ಮತದಾರರ ಪಟ್ಟಿ ಪಡೆದುಕೊಂಡು ಪರಿಶೀಲಿಸಬಹುದು ಎಂದು ಹೇಳಿದೆ.
ದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನು ಬಹಿರಂಗ ಪಡಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (All India Congress Committee – AICC) ಬುಧವಾರ (ಆಗಸ್ಟ್ 31) ನಿರಾಕರಿಸಿದೆ. ಇದು ಪಕ್ಷದ ಆಂತರಿಕ ವಿದ್ಯಮಾನ ಎಂದು ಹೇಳಿರುವ ಎಐಸಿಸಿ, ಪಕ್ಷದ ಯಾವುದೇ ಸದಸ್ಯ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗಳಲ್ಲಿ ಮತದಾರರ ಪಟ್ಟಿ ಪಡೆದುಕೊಂಡು ಪರಿಶೀಲಿಸಬಹುದು ಎಂದು ಹೇಳಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯ ಸಿದ್ಧತೆ ಪರಿಶೀಲಿಸಲೆಂದು ಕೇರಳಕ್ಕೆ ಬಂದಿರುವ ಅವರು, ‘ಮತದಾರರ ಯಾದಿಯನ್ನು ಬಹಿರಂಗಪಡಿಸುವ ಉದ್ದೇಶವಿಲ್ಲ. ಯಾವುದೇ ಸದಸ್ಯ ಈ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ’ ಎಂದು ಹೇಳಿದರು. ‘ಪಕ್ಷದ ಆಂತರಿಕ ವಿದ್ಯಮಾನ. ಇದನ್ನು ಸಾರ್ವಜನಿಕಗೊಳಿಸುವ ಅಗತ್ಯವಿಲ್ಲ. ಎಲ್ಲರೂ ಏಕೆ ನೋಡಬೇಕು’ ಎಂದು ಅಲಪ್ಪುಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಕೇಳಿದರು.
ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಈ ಸಂಬಂಧ ಈಗಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮತದಾರರ ಪಟ್ಟಿಯನ್ನು ಬಹಿರಂಗಪಡಿಸುವ ಪದ್ಧತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಹಿಂದೆ ಹೇಗೆ ಚುನಾವಣೆ ನಡೆದಿತ್ತೋ, ಈ ಬಾರಿಯೂ ಅದೇ ರೀತಿ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು ಎನ್ನುವ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವೇಣುಗೋಪಾಲ್ ಅವರ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಪಕ್ಷದ ನಾಯಕರಾದ ಮನೀಶ್ ತಿವಾರಿ, ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ ಮತದಾರರ ಪಟ್ಟಿ ಬಹಿರಂಗಪಡಿಸಬೇಕು. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದ್ದರು.