ಜೈಪುರ, ಸೆಪ್ಟೆಂಬರ್ 2: ರಾಜಸ್ಥಾನದ (Rajasthan) ಪ್ರತಾಪ್‌ಗಢ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಆತನ ಕುಟುಂಬ ಸದಸ್ಯರು ಸಾರ್ವಜನಿಕವಾಗಿ ಥಳಿಸಿ ವಿವಸ್ತ್ರಗೊಳಿಸಿದ ಘಟನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಖಂಡಿಸಿದ್ದಾರೆ. ಜತೆಗೆ, ಮಹಿಳೆಯರಿಗೆ ಸುರಕ್ಷತೆ ಒದಗಿಸುವಲ್ಲಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಗೆಹ್ಲೋಟ್ ರಾಜವಂಶವನ್ನು ತೃಪ್ತಿಪಡಿಸುವಲ್ಲಿ ವ್ಯಸ್ತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಡಕಟ್ಟು ಮಹಿಳೆಯನ್ನು ಆಕೆಯ ಪತಿ ಮತ್ತು ಅತ್ತೆ ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿರುವುದನ್ನು ನಡ್ಡಾ ಖಂಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಡ್ಡಾ, ರಾಜಸ್ಥಾನದಲ್ಲಿ ಆಡಳಿತವು ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ಸಚಿವರು ಬಣ ಜಗಳಗಳನ್ನು ಪರಿಹರಿಸುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನದ ಪ್ರತಾಪ್‌ಗಢ್‌ನಲ್ಲಿ ನಡೆದ ಘಟನೆಯ ವಿಡಿಯೋ ಆಘಾತಕಾರಿಯಾಗಿದೆ. ರಾಜಸ್ಥಾನದಲ್ಲಿ ಆಡಳಿತಯಂತ್ರವೇ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಸಿಎಂ ಮತ್ತು ಸಚಿವರು ಬಣ ಜಗಳ ಇತ್ಯರ್ಥ ಮಾಡುವಲ್ಲಿ ನಿರತರಾಗಿದ್ದು, ಇನ್ನುಳಿದ ಸಮಯದಲ್ಲಿ ದೆಹಲಿಯ ರಾಜವಂಶವನ್ನು ಸಮಾಧಾನಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಪ್ರತಿ ದಿನವೂ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ರಾಜಸ್ಥಾನದ ಜನತೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನಡ್ಡಾ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.
The video from Pratapgarh, Rajasthan is shocking. What is worse is, governance in Rajasthan is totally absent. The CM and Ministers are busy settling factional squabbles, and the remaining time is spent appeasing one dynasty in Delhi. It’s no wonder the issue of women’s safety is…
— Jagat Prakash Nadda (@JPNadda) September 2, 2023
ಕಳೆದ ವರ್ಷ ವಿವಾಹವಾಗಿದ್ದ ಮಹಿಳೆ ನೆರೆಹೊರೆಯ ಪುರುಷನೊಂದಿಗೆ ಓಡಿಹೋಗಿದ್ದಾರೆ ಎಂದು ಆರೋಪಿಸಿ ಆಕೆಯ ಪತಿ ಮತ್ತು ಅತ್ತೆ ಥಳಿಸಿದ್ದರು. ಅಷ್ಟೇ ಅಲ್ಲದೆ, ಆಕೆಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಅಮಾನವೀಯ ಕೃತ್ಯ: ಮಹಿಳೆಯನ್ನು ಥಳಿಸಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಪತಿ ಮತ್ತು ಕುಟುಂಬಸ್ಥರು
ಪ್ರತಾಪಗಢ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಪ್ರತಾಪಗಢ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಅವರನ್ನು ಬೆನ್ನಟ್ಟಿದ್ದರಿಂದ ಓಡಿಹೋಗಲು ಯತ್ನಿಸಿದ ಆರೋಪಿಗಳು ಗಾಯಗೊಂಡಿದ್ದಾರೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರತಾಪಗಢ ಎಸ್ಪಿ ಅಮಿತ್ ಕುಮಾರ್ ‘ಎಎನ್ಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ