ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

Aditya L1 Launch Success; ಚಂದ್ರಯಾನ-3 ರ ಯಶಸ್ಸಿನ ಖುಷಿಯ ಬೆನ್ನಲ್ಲೇ ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ
ಆದಿತ್ಯ L1 ಉಡಾವಣೆ ಯಶಸ್ವಿImage Credit source: ISRO
Follow us
|

Updated on:Sep 02, 2023 | 12:27 PM

ಬೆಂಗಳೂರು, ಸೆಪ್ಟೆಂಬರ್ 2: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌-1 (Aditya L1) ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ (Satish Dhawan Space Centre) ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ. ಆ ಮೂಲಕ ಭಾರತವು ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ಕ್ಷಣಕ್ಕೆ ಶ್ರೀಹರಿಕೋಟಾದಲ್ಲಿ ಸೇರಿದ್ದ ಸಾವಿರಾರು ಮಂದಿ ಸಾಕ್ಷಿಯಾದರೆ, ಆನ್​​ಲೈನ್ ನೇರ ಪ್ರಸಾರದ ಮೂಲಕ ಕೋಟ್ಯಂತರ ಮಂದಿ ವೀಕ್ಷಣೆ ಮಾಡಿದರು.

ಆದಿತ್ಯ L1  ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ ಉಡಾವಣೆಯ ಮಹತ್ವದ ಕ್ಷಣದಲ್ಲಿಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಇಸ್ರೋದ ವಿಜ್ಞಾನಿಗಳು ಜತೆಯಾದರು. ಆದಿತ್ಯ ಎಲ್​1 ಅನ್ನು ಹಲವಾರು ಹಂತಗಳಲ್ಲಿ ಭೂಮಿಯ ಕಕ್ಷೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಲ್ಯಾಗ್ರೇಂಜ್ 1ರಲ್ಲಿ ಸ್ಥಾಪಿಸಲಾಗುತ್ತದೆ.

ಆದಿತ್ಯ L1 ಎಕ್ಸ್‌ಎಲ್ ಆವೃತ್ತಿಯ ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಗಮ್ಯಸ್ಥಾನಕ್ಕೆ ಪಯಣಿಸುತ್ತಿದ್ದು, ಸೂರ್ಯನ ಕುರಿತ ಅಧ್ಯಯನಕ್ಕೆ ಇಸ್ರೋ ವಿಜ್ಞಾನಿಗಳಿಗೆ ನೆರವಾಗಲಿದೆ. ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ (ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್​​1 ಎಂದು ಕರೆಯಲಾಗುತ್ತದೆ) ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗಲಿದೆ.

ಆದಿತ್ಯ ಎಲ್​1 ಉಡಾವಣೆಗೂ ಮುನ್ನ ದೇಶದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಾರ್ಥನೆ, ಪೂಜೆ ಇತ್ಯಾದಿಗಳ ಮೂಲಕ ಇಸ್ರೋಗೆ ಶುಭ ಹಾರೈಸಿದ್ದರು. ಇಸ್ರೋ ಮುಖ್ಯಸ್ಥ ಎಸ್​ ಸೋಮನಾಥ್ ಸಹ ತಿರುಪತಿಯ ಪ್ರಸಿದ್ಧ ಸೊಳ್ಳೂರಪೇಟ ಚೆಂಗಾಲಮ್ಮ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.

ಸದ್ಯ ಆದಿತ್ಯ ಎಲ್​-1 ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. 1 ಮತ್ತು 2ನೇ ಹಂತದಲ್ಲಿ ರಾಕೆಟ್​​ನಿಂದ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆ ಬೇರ್ಪಟ್ಟಿದೆ. 3 ಹಾಗೂ 4 ನೇ ಹಂತದಲ್ಲೂ ರಾಕೆಟ್​​ನಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಈ ಕಾರ್ಯ ಯಶಸ್ವಿಯಾಗಿದೆ. ಒಟ್ಟು 15 ಲಕ್ಷ ಕಿ.ಮೀ. ದೂರ ಸಂಚರಿಸುವ ಆದಿತ್ಯ ಎಲ್-1 ನೌಕೆ, ನಿಗದಿತ ಸ್ಥಳಕ್ಕೆ ತಲುಪಲು ಸುಮಾರು 4 ತಿಂಗಳ ಕಾಲ ತೆಗೆದುಕೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಆದಿತ್ಯ-ಎಲ್1 ಸೂರ್ಯನ ಬಳಿ ಸಾಗುತ್ತದೆಯೇ? ತಪ್ಪು ಕಲ್ಪನೆಗಳ ಬಗ್ಗೆ ಇಸ್ರೋ ನೀಡಿದ ಸ್ಪಷ್ಟನೆ ಇಲ್ಲಿದೆ

ಆದಿತ್ಯ ಎಲ್​-1 ಯೋಜನೆಯ ವಿವರ

ಆದಿತ್ಯ ಎಲ್-1 ನ ಪೂರ್ಣ ಬಜೆಟ್ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಯೋಜನೆಗಾಗಿ ಸರ್ಕಾರದಿಂದ ಸುಮಾರು 400 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ. ಆದಿತ್ಯ ಎಲ್-1 ಲ್ಯಾಗ್ರೇಂಜ್ 1 ಅನ್ನು ತಲುಪಲು ಸುಮಾರು 4 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಭೂಮಿ ಮತ್ತು ಸೂರ್ಯನ ನಡುವಿನ ಅಂತರವು ತುಂಬಾ ದೊಡ್ಡದಾಗಿರುವ ಕಾರಣ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಭೂಮಿ ಮತ್ತು ಸೂರ್ಯರ ನಡುವೆ 15 ಕೋಟಿ ಕಿಲೋಮೀಟರ್ ಅಂತರವಿದೆ ಎನ್ನಲಾಗಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದೆ.

ಏನೆಲ್ಲ ಅಧ್ಯಯನ ಮಾಡಲಿದೆ ಆದಿತ್ಯ ಎಲ್​-1?

ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಆದಿತ್ಯ ಎಲ್​-1 ಅಧ್ಯಯನ ನಡೆಸಲಿದೆ. ಈ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕ ಚಿತ್ರಗಳನ್ನು, ಮಾಹಿತಿಗಳನ್ನು ಒದಗಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:53 am, Sat, 2 September 23