ನಿನ್ನೆಯಿಂದ ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಭಗವತಿ ನಗರದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಿದರು. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿರುವ ಅಮಿತ್ ಶಾ ಇಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ‘ಜಮ್ಮು-ಕಾಶ್ಮೀರ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಹೃದಯದಲ್ಲಿದೆ’ ಎಂದು ಹೇಳಿದರು. ಜಮ್ಮು ಪ್ರದೇಶಕ್ಕೆ ತಾರತಮ್ಯ ತೋರಿಸುವ ಕಾಲ ಮುಗಿಯಿತು. ಈಗ ಕಾಶ್ಮೀರ ಮತ್ತು ಜಮ್ಮು ಎರಡೂ ನಗರಗಳನ್ನೂ ಒಟ್ಟಾಗಿಯೇ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಜಮ್ಮುವಿನ ಜನರು ಅನ್ಯಾಯಕ್ಕೆ ಒಳಗಾಗುವ ಸಮಯ ಮುಗಿದಿದೆ. ಇನ್ನು ಮುಂದೆ ಯಾರೂ ಇಲ್ಲಿಯ ಜನರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಇಲ್ಲಿ ಅಭಿವೃದ್ಧಿಯಾಗುವುದನ್ನು ತಡೆಯಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲು ನಾನೀಗ ಜಮ್ಮುವಿಗೆ ಬಂದಿದ್ದೇನೆ ಎಂದು ಅಮಿತ್ ಶಾ ಹೇಳಿದರು. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಬೇಕು ಎಂದು ನಿರ್ಧಾರ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಇಲ್ಲಿ ವಾಲ್ಮೀಕ ಸಮಾಜದವರು ಮತ್ತು ಪಶ್ಚಿಮ ಪಾಕಿಸ್ತಾನದಿಂದ ಬಂದ ನಿರಾಶ್ರಿತರೆಡೆಗೆ ತೋರಿಸಲಾಗುತ್ತಿದ್ದ ತಾರತಮ್ಯವೀಗ ಕೊನೆಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಈಗ ಕನಿಷ್ಠ ವೇತನ ಕಾಯ್ದೆ ಜಾರಿಗೊಂಡಿದೆ. ಈ ಕೇಂದ್ರಾಡಳಿತ ಪ್ರದೇಶಕ್ಕೆ ಈಗಾಗಲೇ 12 ಸಾವಿರ ಕೋಟಿ ರೂಪಾಯಿ ಹೂಡಿಕೆ ಹರಿದುಬಂದಿದ್ದು, 2022ರ ಹೊತ್ತಿಗೆ 51 ಸಾವಿರ ಕೋಟಿ ರೂ.ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಜಮ್ಮು-ಕಾಶ್ಮೀರದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ದೇಗುಲಗಳ ನಾಡು. ಮಾತಾ ವೈಷ್ಣೋ ದೇವಿ, ಪ್ರೇಮನಾಥ್ ದುರ್ಗಾ ದೇವರುಗಳು ಇಲ್ಲಿ ನೆಲೆಸಿದ್ದಾರೆ. ಶ್ಯಾಮಪ್ರಸಾದ್ ಮುಖರ್ಜಿಯವರ ತ್ಯಾಗದ ಭೂಮಿ ಇದು. ಇಲ್ಲಿ ಕೇವಲ 7 ವೈದ್ಯಕೀಯ ಕಾಲೇಜುಗಳು ಇದ್ದವು. ಇದೀಗ ಜಮ್ಮು-ಕಾಶ್ಮೀರದಲ್ಲಿ ಇನ್ನೂ 7 ಹೊಸ ವೈದ್ಯಕೀಯ ಕಾಲೇಜುಗಳನ್ನು ನಮ್ಮ ಸರ್ಕಾರ ನಿರ್ಮಾಣ ಮಾಡಲಿದೆ. ಇಲ್ಲಿನ ಅಭಿವೃದ್ಧಿಗಾಗಿ ಯುವಕರು ನಮ್ಮೊಂದಿಗೆ ಕೈಜೋಡಿಸಿದರೆ ಭಯೋತ್ಪಾದಕರು ತಮ್ಮ ಕಾರ್ಯದಲ್ಲಿ ವಿಫಲರಾಗುತ್ತಾರೆ ಎಂದು ಅಮಿತ್ ಶಾ ಹೇಳಿದರು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಪೂರ್ಣ ನಾಶವಾಗಬೇಕು. ಯಾವುದೇ ನಾಗರಿಕನೂ ಹತ್ಯೆಗೀಡಾಗಬಾರದು ಎಂಬ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಅಮಿತ್ ಶಾ ಹೇಳಿದರು.
ಅಮಿತ್ ಶಾ ಬಹಿರಂಗ ಸಭೆಯ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಘೋಷಣೆಗಳನ್ನು ಕೂಗುತ್ತಿದ್ದರು. ಇಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಭದ್ರತೆಯನ್ನು ನಿಯೋಜಿಸಲಾಗಿತ್ತು. ಬಹಿರಂಗ ಸಭೆ ನಡೆಸುವುದಕ್ಕೂ ಮೊದಲು ಅಮಿತ್ ಶಾ ಜಮ್ಮುವಿನ ಐಐಟಿ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ. ನಿನ್ನೆ ಉನ್ನತ ಮಟ್ಟದ ಭದ್ರತಾ ಪರಿಶೀಲನೆ ಸಭೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ: Jaguar: ‘ಜಾಗ್ವಾರ್’ ಚಿತ್ರಕ್ಕೆ 5 ವರ್ಷಗಳ ಸಂಭ್ರಮ; ದಾಸರಹಳ್ಳಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಖಿಲ್
ಭಾರತೀಯ ನೌಕಾಪಡೆ ಹೊಸ ಶಕ್ತಿ ತುಂಬಲಿದೆ ಎಂಕೆ 54 ಟಾರ್ಪೆಡೊ: ಅಮೆರಿಕದೊಂದಿಗೆ 423 ಕೋಟಿ ಒಪ್ಪಂದ