ಕೊಚ್ಚಿ: ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ವಂ ಮಂಡಳಿಗೆ ಸೇರಿರುವ ಕೇರಳದ (Kerala)ತ್ರಿಶ್ಶೂರ್ ಜಿಲ್ಲೆಯ ಇರಿಂಞಾಲಕುಡದಲ್ಲಿರುವ ಕೂಡಲ್ಮಾಣಿಕ್ಯಂ ದೇವಸ್ಥಾನವು ನಾನು ಹಿಂದೂ ಅಲ್ಲ ಎಂಬ ಕಾರಣ ನೀಡಿ ದೇವಾಲಯದ ಆವರಣದಲ್ಲಿ ನಿಗದಿತ ನೃತ್ಯ ಕಾರ್ಯಕ್ರಮಕ್ಕೆ ನಿರ್ಬಂಧಿಸಿದೆ ಎಂದು ಭರತನಾಟ್ಯ ನರ್ತಕಿ ಮಾನ್ಸಿಯಾ ವಿ ಪಿ (Mansiya V P) ಆರೋಪಿಸಿದ್ದಾರೆ. ಭರತನಾಟ್ಯದಲ್ಲಿ (Bharatanatyam) ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಮಾನ್ಸಿಯಾ ಅವರು ಮುಸ್ಲಿಮರಾಗಿದ್ದರೂ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರದರ್ಶನ ನೀಡುತ್ತಾರೆ ಎಂಬ ಕಾರಣಕ್ಕಾಗಿ ಇಸ್ಲಾಮಿಕ್ ಧರ್ಮಗುರುಗಳ ಕೋಪ ಮತ್ತು ಬಹಿಷ್ಕಾರವನ್ನು ಎದುರಿಸಿದ್ದರು. ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಮಾನ್ಸಿಯಾ ತನ್ನ ನೃತ್ಯ ಕಾರ್ಯಕ್ರಮವನ್ನು ಏಪ್ರಿಲ್ 21 ರಂದು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ನಾನು ಹಿಂದೂ ಅಲ್ಲದ ಕಾರಣ ದೇವಸ್ಥಾನದಲ್ಲಿ ಕಾರ್ಯಕ್ರಮ ನೀಡಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ವೇದಿಕೆಗಳನ್ನು ಧರ್ಮದ ಆಧಾರದ ಮೇಲೆ ನಿಗದಿಪಡಿಸಲಾಗಿದೆ, ನೀವು ಉತ್ತಮ ನೃತ್ಯಗಾರ್ತಿ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸುವುದಿಲ್ಲ. ಈ ಮಧ್ಯೆ, ನಾನು ಮದುವೆಯಾದ ನಂತರ ನಾನು ಹಿಂದೂ ಆಗಿ ಮತಾಂತರ ಆಗಿದ್ದೇನೆಯೇ ಎಂಬ ಪ್ರಶ್ನೆಗಳನ್ನು ಸಹ ಎದುರಿಸುತ್ತಿದ್ದೇನೆ. ಮಾನ್ಸಿಯಾ ಸಂಗೀತಗಾರ ಶ್ಯಾಮ್ ಕಲ್ಯಾಣ್ ನ್ನು ಮದುವೆಯಾಗಿದ್ದಾರೆ. ನನಗೆ ಯಾವುದೇ ಧರ್ಮವಿಲ್ಲ ಮತ್ತು ನಾನು ಹೇಗೆ ಮತಾಂತರ ಆಗುವುದು? ಎಂದು ಕೇಳಿದ್ದಾರೆ.
ಧರ್ಮ ಆಧಾರಿತ ಕಾರ್ಯಕ್ರಮದಿಂದ ಈ ರೀತಿ ಹೊರಗಿಡುವುದು ಇದು ಮೊದಲ ಅನುಭವವೇನೂ ಅಲ್ಲ. ಕೆಲವು ವರ್ಷಗಳ ಹಿಂದೆ, ಗುರುವಾಯೂರ್‌ನಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಅಲ್ಲ ಎಂಬ ಕಾರಣಕ್ಕೆ ನಾನು ಪ್ರದರ್ಶನ ನೀಡುವುದನ್ನು ನಿಷೇಧಿಸಲಾಗಿತ್ತು ಎಂದು ಅವರು ಹೇಳಿದರು.
“ಕಲೆ ಮತ್ತು ಕಲಾವಿದರನ್ನು ಧರ್ಮ ಮತ್ತು ಜಾತಿಯೊಂದಿಗೆ ಗಂಟು ಹಾಕುತ್ತಲೇ ಇದ್ದಾರೆ. ಒಂದು ಧರ್ಮಕ್ಕೆ ನಿಷೇಧವಾದಾಗ ಅದು ಇನ್ನೊಂದು ಧರ್ಮದ ಏಕಸ್ವಾಮ್ಯವಾಗುತ್ತದೆ. ಈ ಅನುಭವ ನನಗೆ ಹೊಸದಲ್ಲ. ನಮ್ಮ ಜಾತ್ಯತೀತ ಕೇರಳದಲ್ಲಿ ಏನೂ ಬದಲಾಗಿಲ್ಲ ಎಂಬುದನ್ನು ನೆನಪಿಸಲು ನಾನು ಅದನ್ನು ಇಲ್ಲಿ (ಫೇಸ್‌ಬುಕ್‌ನಲ್ಲಿ) ರೆಕಾರ್ಡ್ ಮಾಡುತ್ತಿದ್ದೇನೆ, ”ಎಂದು ಅವರು ಹೇಳಿದರು.
ಕೂಡಲ್ಮಾಣಿಕ್ಯಂ ದೇವಸ್ವಂ (ದೇವಸ್ಥಾನ) ಮಂಡಳಿಯ ಅಧ್ಯಕ್ಷ ಪ್ರದೀಪ್ ಮೆನನ್ ಅವರನ್ನು ದಿ ಇಂಡಿಯನ್ ಎಕ್ಸ್ ಪ್ರೆಸ್ ಸಂಪರ್ಕಿಸಿದಾಗ ದೇವಾಲಯದ ಪ್ರಸ್ತುತ ಸಂಪ್ರದಾಯದ ಪ್ರಕಾರ, ದೇವಾಲಯದ ಆವರಣದೊಳಗೆ ಹಿಂದೂಗಳು ಮಾತ್ರ ಕಾರ್ಯಕ್ರಮಗಳನ್ನು ಮಾಡಬಹುದು “ಈ ದೇವಾಲಯದ ಸಂಕೀರ್ಣವು 12 ಎಕರೆ ಪ್ರದೇಶದಲ್ಲಿ ಹರಡಿದೆ. ನಿಗದಿತ 10 ದಿನಗಳ ಉತ್ಸವವು ದೇವಾಲಯದ ಆವರಣದಲ್ಲಿ ನಡೆಯಲಿದೆ. ಉತ್ಸವದಲ್ಲಿ ಸುಮಾರು 800 ಕಲಾವಿದರು ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ನಮ್ಮ ನಿಯಮಗಳ ಪ್ರಕಾರ ಕಲಾವಿದರನ್ನು ಅವರು ಹಿಂದೂವೋ ಅಥವಾ ಹಿಂದೂ ಅಲ್ಲವೋ ಎಂದು ಕೇಳಬೇಕು. ತನಗೆ ಯಾವುದೇ ಧರ್ಮವಿಲ್ಲ ಎಂದು ಮಾನ್ಸಿಯಾ ಲಿಖಿತವಾಗಿ ನೀಡಿದ್ದರು. ಹೀಗಾಗಿ ಆಕೆಗೆ ಸ್ಥಳ ನಿರಾಕರಿಸಲಾಗಿತ್ತು. ದೇವಸ್ಥಾನದಲ್ಲಿ ಈಗಿರುವ ಸಂಪ್ರದಾಯವನ್ನು ನಾವು ಪಾಲಿಸಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಅರವಿಂದ ಕೇಜ್ರಿವಾಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ದೆಹಲಿ ವಿಧಾನಸಭೆಯಲ್ಲಿ ಗದ್ದಲ; 3 ಬಿಜೆಪಿ ಶಾಸಕರು ಅಮಾನತು
Published On - 3:47 pm, Mon, 28 March 22