ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನ ನಡೆಯುತ್ತಿದ್ದು ಭಕ್ತಾದಿಗಳು ದೇಣಿಗೆಯಾಗಿ ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಹೀಗೆ ಕಳುಹಿಸಿದ ಬೆಳ್ಳಿ ಇಟ್ಟಿಗೆಗಳನ್ನು ಲಾಕರ್ನಲ್ಲಿ ಇಡಲು ಜಾಗವಿಲ್ಲ. ಹಾಗಾಗಿ ಬೆಳ್ಳಿ ಇಟ್ಟಿಗೆ ಕಳುಹಿಸುವುದು ಬೇಡ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ದೇಶದಾದ್ಯಂತವಿರುವ ಭಕ್ತಾದಿಗಳು ರಾಮಮಂದಿರ ನಿರ್ಮಾಣಕ್ಕಾಗಿ ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆ ನೀಡಿದ್ದಾರೆ. ಇವುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ನಮಗೆ ಸವಾಲಾಗಿ ಪರಿಣಮಿಸಿದೆ. ಇಲ್ಲಿಯವರೆಗೆ 400 ಕೆಜಿಗಿಂತಲೂ ಹೆಚ್ಚು ಬೆಳ್ಳಿ ಇಟ್ಟಿಗೆಗಳು ದೇಣಿಗೆಯಾಗಿ ಲಭಿಸಿದೆ.ನಮ್ಮ ಬ್ಯಾಂಕ್ ಲಾಕರ್ ತುಂಬಿದೆ. ಹಾಗಾಗಿಯೇ ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆಯಾಗಿ ನೀಡಬೇಡಿ ಎಂದು ನಾವು ಮನವಿ ಮಾಡುತ್ತಿದ್ದೇವೆ ಎಂದು ಟ್ರಸ್ಟ್ನ ಸದಸ್ಯ ಡಾ. ಅನಿಲ್ ಮಿಶ್ರಾ ಹೇಳಿದ್ದಾರೆ.
ಭಕ್ತರ ಭಾವನೆಗಳನ್ನು ನಾವು ಗೌರವಿಸುತ್ತೇವೆ, ಆದರೆ ಇನ್ನಷ್ಟು ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸುವುದು ಬೇಡ ಎಂದು ನಾವು ಮನವಿ ಮಾಡುತ್ತಿದ್ದೇವೆ. ಇವುಗಳನ್ನು ಸುರಕ್ಷಿತವಾಗಿ ಕಾಪಾಡಲು ನಾವು ಮತ್ತಷ್ಟು ಹಣ ಖರ್ಚು ಮಾಡಬೇಕಾಗಿದೆ. ಮಂದಿರ ನಿರ್ಮಾಣದ ವೇಳೆ ಬೆಳ್ಳಿ ಇಟ್ಟಿಗೆಗಳ ಅವಶ್ಯಕತೆ ಬಂದರೆ ಆಗ ನಾವು ಕೇಳುತ್ತೇವೆ ಎಂದಿದ್ದಾರೆ ಮಿಶ್ರಾ. ಟ್ರಸ್ಟ್ ನ ಮೂಲಗಳ ಪ್ರಕಾರ ಇಲ್ಲಿಯವರೆಗೆ 1,600 ಕೋಟಿಗಿಂತಲೂ ಹೆಚ್ಚು ನಗದು ದೇಣಿಗೆ ಲಭಿಸಿದೆ.
ರಾಮಮಂದಿರ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ
ವಿಶ್ವ ಸಿಂಧಿ ಸೇವಾ ಸಂಘಟನ್ ಮತ್ತು ಅಂಬೇಡ್ಕರ್ ಮಹಾಸಭಾ ಟ್ರಸ್ಟ್ ಸೇರಿದಂತೆ ಹಲವಾರು ಸಂಘಟನೆಗಳು ಬೆಳ್ಳಿ ಇಟ್ಟಿಗೆಯನ್ನು ದೇಣಿಗೆಯಾಗಿ ನೀಡಿವೆ ಎಂದು ಹೆಸರು ಹೇಳಲಿಚ್ಛಿಸದ ಟ್ರಸ್ಟ್ನ ಸದಸ್ಯರೊಬ್ಬರು ಹೇಳಿರುವುದಾಗಿ ‘ದಿ ಪ್ರಿಂಟ್ ವರದಿ ಮಾಡಿದೆ. ಈ ಇಟ್ಟಿಗೆಗಳನ್ನು ಟ್ರಸ್ಟ್ ಸ್ಟೀಕರಿಸಿದ್ದು, ಇನ್ನು ಮುುಂದೆ ಬೆಳ್ಳಿ ಇಟ್ಟಿಗೆ ಸ್ವೀಕರಿಸುವುದಿಲ್ಲ ಎಂದಿದೆ. ಭಕ್ತಾದಿಗಳು ನಗದು ಅಥವಾ ಆನ್ಲೈನ್ ವಹಿವಾಟು ಮೂಲಕ ಹಣ ಕಳುಹಿಸಿದರೆ ಉತ್ತಮ ಎಂದು ಟ್ರಸ್ಟ್ ನ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಮಂದಿರ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಸುಮಾರು 9 ಮೀಟರ್ನಷ್ಟು ಆಳದಲ್ಲಿ ಮಣ್ಣು ಅಗೆದಾಗಿದ್ದು, 70 ದಿನಗಳಲ್ಲಿ ಮಣ್ಣು ಅಗೆಯುವ ಕೆಲಸ ಪೂರ್ಣವಾಗಲಿದೆ. ಈ ತಿಂಗಳಾಂತ್ಯದಲ್ಲಿ ಇಲ್ಲಿಯವರೆಗೆ ನಡೆದ ಕೆಲಸಗಳ ಬಗ್ಗೆ ಅವಲೋಕನ ಸಭೆ ನಡೆಯಲಿದೆ ಎಂದು ಮಿಶ್ರಾ ಹೇಳಿದ್ದಾರೆ.
₹1,600 ಕೋಟಿಗಿಂತಲೂ ಹೆಚ್ಚು ನಗದು ದೇಣಿಗೆ ಸಂಗ್ರಹ
ಟ್ರಸ್ಟ್ನ ಮೂಲಗಳ ಪ್ರಕಾರ ಇಲ್ಲಿಯವರೆಗೆ ₹1,600 ಕೋಟಿಗಿಂತಲೂ ಹೆಚ್ಚು ನಗದು ಸಂಗ್ರಹವಾಗಿದೆ. ದೇಣಿಗೆ ಸಂಗ್ರಹ ಅಭಿಯಾನವಾದ ‘ನಿಧಿ ಸಂಕಲ್ಪ್ ಸಂಗ್ರಹ್‘ ಮೂಲಕ 12 ಕೋಟಿಗಿಂತಲೂ ಹೆಚ್ಚು 5 ಲಕ್ಷಕ್ಕಿಂತಲವೂ ಹೆಚ್ಚು ಗ್ರಾಮಗಳನ್ನು ತಲುಪುವುದು ನಮ್ಮ ಗುರಿ. ಈ ಅಭಿಯಾನ ಫೆಬ್ರವರಿ 27ರವರೆಗೆ ನಡೆಯಲಿದ್ದು, ಪ್ರತಿ ದಿನ ಪುನರವಲೋಕನ ನಡೆಯುತ್ತದೆ. ಈ ಅಭಿಯಾನಕ್ಕಾಗಿ ಹಲವಾರು ಗುಂಪುಗಳನ್ನು ಮಾಡಲಾಗಿದೆ. ನಿಧಿ ಸಂಗ್ರಹ ಅಭಿಯಾನಕ್ಕಾಗಿ 50 ಸಾವಿರಕ್ಕಿಂತಲೂ ಹೆಚ್ಚು ಗುಂಪುಗಳನ್ನು ಮಾಡಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ. ಮುಂದಿನ 39 ತಿಂಗಳುಗಳಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ತಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೆಲ ದುಷ್ಟಶಕ್ತಿಗಳು ರಾಮ ಮಂದಿರದ ಹೆಸರಲ್ಲಿ ಹಣ ಸಂಗ್ರಹಿಸುತ್ತಿವೆ: ಬಿಜೆಪಿಗೆ ಉದ್ಧವ್ ಠಾಕ್ರೆ ಟಾಂಗ್
Published On - 12:02 pm, Thu, 18 February 21