ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ನೂಪುರ್ ಶರ್ಮಾಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್​​

| Updated By: ವಿವೇಕ ಬಿರಾದಾರ

Updated on: Jun 11, 2022 | 9:43 PM

ಸುದ್ದಿ ವಾಹಿನಿಯ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾವಿರುದ್ಧ ಮುಂಬೈನ ಪೈಡೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್​ 25ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಪೈಡೋನಿ ಪೊಲೀಸರು ನೂಪುರ್ ಶರ್ಮಾಗೆ ಸಮನ್ಸ್​ ನೀಡಿದ್ದಾರೆ.

ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ನೂಪುರ್ ಶರ್ಮಾಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್​​
ನೂಪುರ್ ಶರ್ಮ
Image Credit source: Newsroom Post
Follow us on

ನವದೆಹಲಿ: ಸುದ್ದಿ ವಾಹಿನಿಯ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ (Prophet Mohammed) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾ(Noopur Sharma) ವಿರುದ್ಧ ಮುಂಬೈನ (Mumbai) ಪೈಡೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್​ 25ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಪೈಡೋನಿ ಪೊಲೀಸರು ನೂಪುರ್ ಶರ್ಮಾಗೆ ಸಮನ್ಸ್​ ನೀಡಿದ್ದಾರೆ ಎಂದು ಹಿಂದುಸ್ಥಾನ ಟೈಮ್ಸ್​ ವರದಿ ಮಾಡಿದೆ. ನೂಪುರ್ ಶರ್ಮಾ ಅವರಿಗೆ ಅಂಚೆ ಮೂಲಕ ಸಮನ್ಸ್ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಕರಣ ಸಂಬಂಧ ಮೇ 29 ರಂದು  ರಜಾ ಅಕಾಡೆಮಿಯ ಮುಂಬೈ ವಿಂಗ್‌ನ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಪೈಡೋನಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು, ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಕಿಡಿಗೇಡಿತನವನ್ನು ಉಂಟುಮಾಡಿದ ಆರೋಪದ ಮೇಲೆ ಪೊಲೀಸ್​ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೂ ಮೊದಲು ಜೂನ್ 7 ರಂದು ಥಾಣೆಯ ಮುಂಬ್ರಾ ಪೊಲೀಸರು ಜೂನ್ 22 ರಂದು ತನಿಖೆಗೆ ಹಾಜರಾಗುವಂತೆ ಶರ್ಮಾಗೆ ಸಮನ್ಸ್ ನೀಡಿದ್ದರು. ಈಗ ಭಿವಾಂಡಿ ಪೊಲೀಸರು ನೂಪುರ್ ಶರ್ಮಾಗೆ ಸಮನ್ಸ್ ಜಾರಿ ಮಾಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ  ಸಮನ್ಸ್​ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಭೋಯಿವಾಡ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಚೇತನ್ ಕಾಕ್ಡೆ  ಮಾತನಾಡಿ  “ನಾವು ಇತ್ತೀಚೆಗೆ ಅವರಿಗೆ ಸಮನ್ಸ್ ನೀಡಿದ್ದೇವೆ, ವಿಚಾರಣೆಗಾಗಿ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಕೇಳಿಕೊಂಡಿದ್ದೇವೆ. ಭದ್ರತಾ ಕಾರಣಗಳಿಂದ ಸಮನ್ಸ್‌ನ ದಿನಾಂಕವನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದರು.

ಈ ಮಧ್ಯೆ ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಅವರು ಶನಿವಾರ ಮುಸ್ಲಿಂ ಸಮುದಾಯದ ಹಲವಾರು ಪ್ರತಿನಿಧಿಗಳನ್ನು ಭೇಟಿ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು ಮತ್ತು ಕಾನೂನಿನ ಪ್ರಕಾರ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರವಾದಿ ಮೊಹ್ಮದರ ಕುರಿತು ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ  ಅವರು ಸುದ್ದಿವಾಹಿನಿಯ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಂತರ ಅವರನ್ನು ಬಿಜೆಪಿ ತನ್ನ ಪಕ್ಷದ ಸದಸ್ಯತ್ವದಿಂದ ಅಮಾನತು ಮಾಡಿತ್ತು. ನಂತರ ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿದ್ದು, ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದು, ಭಾರತದ ವಸ್ತುಗಳನ್ನು ಕೊಡುಕೊಳ್ಳದಂತೆ ಬೋಯ್​ ಕಟ್​​ ಇಂಡಿಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡಿತ್ತು.

ನಂತರ ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದರು. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದರು. ಇವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ಹಾಗೇ ಇವರ ಪರವಾಗಿ ಕೆಲ ಸಂಘಟನೆಗಳು, ವ್ಯಕ್ತಿಗಳು ಮತ್ತು ಸೆಲಬ್ರೆಟಿ ಮಾತನಾಡಿದ್ದರು. ನಂತರ ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದರು. ಈ ತಿಂಗಳು (ಜೂನ್​ 22) ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.​

ನೂಪುರ್ ಶರ್ಮಾ ಅವರ ಹೇಳಿಕೆಯನ್ನು ತೀರ್ವವಾಗಿ ವಿರೋಧಿಸಿದ ಮುಸ್ಲಿಂ ಸಮುದಾಯ ನಿನ್ನೆ ಶುಕ್ರವಾರ (ಜೂನ್​ 10) ರಂದು ಪ್ರತಿಭಟನೆಗೆ ಇಳಿದಿತ್ತು. ದೇಶದ ನಾನಾ ಭಾಗದಲ್ಲಿ ಪ್ರತಿಭಟನೆ ನಡೆದಿತ್ತು. ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು. ನೂಪೂರ್​ ಶರ್ಮಾ ಪ್ರತಕೃತಿ ದಹನ ಮಾಡಲಾಗಿತ್ತು. ನಂತರ ರಾಜ್ಯದಲ್ಲೂ ಈ ಪ್ರತಿಭಟನೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು. ಹೀಗಾಗಿ ರಾಜ್ಯದಲ್ಲಿ ಯಾವುದೇ ರೀತಿಯಾದ ಹಿಂಸಾತ್ಮಕ ಕೃತ್ಯಗಳು ಆಗದಂತೆ ಕಟ್ಟೆಚ್ಚರವಹಿಸುವಂತೆ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಅವರು ಪೋಲಿಸರಿಗೆ ಸೂಚಿಸಿದ್ದರು. ಈ ಸಂಬಂಧ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಂದು (ಜೂನ್​​ 11) ರಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು , 20 ಕ್ಕೂ ಅಧಿಕ ಧರ್ಮ ಗುರುಗಳು ಸಭೆ ಸೇರಿದ್ದಾರೆ.

Published On - 9:41 pm, Sat, 11 June 22