HS Doreswamy Obituary : ‘ವ್ಯಾಕ್ಸಿನೇಷನ್ ನನಗ್ಯಾಕೆ ಯುವಕನಿಗೋ ಯುವತಿಗೋ ಕೊಟ್ಟುಬಿಡಿ‘

|

Updated on: May 30, 2021 | 9:09 AM

ಆರು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಎಷ್ಟಂತ ಇನ್ನೂ ಬಾಡಿಗೆ ಮನೆಯಲ್ಲಿರ್ತೀರಿ. ನಮ್ಮ ಮನೆಯ ಬಳಿ ಒಂದು ಸಣ್ಣಮನೆ ಇದೆ. ಅದನ್ನೇ ಅಚ್ಚುಕಟ್ಟು ಮಾಡಿಸೋಣ’ ಎಂದು ಯಾರದೋ ಮೂಲಕ ದೊರೆಸ್ವಾಮಿಯವರ ಹೆಂಡತಿಗೆ ಹೇಳಿಸಿದರು. ಅದನ್ನವರು ಗಂಡನ ಬಳಿ ಪ್ರಸ್ತಾಪಿಸಿದಾಗ, ‘ಆಯ್ತಮ್ಮ, ನೀನು ಬೇಕಾದರೆ ಅಲ್ಲಿಯೇ ಹೋಗಿರು. ನಾನು ಬೇಕಾದರೆ ಗಾಂಧೀಭವನದಲ್ಲಿ ಇರ್ತೀನಿ’ ಎಂದು ಥಟ್ಟನೆ ಹೇಳಿಬಿಟ್ಟರು.

HS Doreswamy Obituary : ‘ವ್ಯಾಕ್ಸಿನೇಷನ್ ನನಗ್ಯಾಕೆ ಯುವಕನಿಗೋ ಯುವತಿಗೋ ಕೊಟ್ಟುಬಿಡಿ‘
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​. ಎಸ್​. ದೊರೆಸ್ವಾಮಿ ಮತ್ತು ಮಾಜಿ ಸಚಿವ ಬಿ. ಕೆ. ಚಂದ್ರಶೇಖರ್. ಸೌಜನ್ಯ : ಬಿಬಿಸಿ/ಸಿಟಿಝೆನ್ ಮ್ಯಾಟರ್ಸ್
Follow us on

ದೊರೆಸ್ವಾಮಿಯವರೊಂದಿಗಿನದು ಸುಮಾರು ಇಪ್ಪತ್ತು ವರ್ಷಗಳ ಒಡನಾಟ. ಸಾಕಷ್ಟು ವೇದಿಕೆಗಳಲ್ಲಿ ಮಾತುಕತೆಗಳನ್ನಾಡಿದೆವು. ಪಕ್ಷದ ಅಥವಾ ಯಾವ ವಿಷಯವಾದರೂ ಪರಸ್ಪರ ಸುದೀರ್ಘ ಸಮಾಲೋಚನೆ ನಡೆಸಿಯೇ ಸಮರ್ಪಕ ತೀರ್ಮಾನ ಕೈಗೊಳ್ಳುತ್ತ ಬಂದೆವು. ಇತ್ತೀಚಿನ ಏಳೆಂಟು ವರ್ಷಗಳಲ್ಲಂತೂ ನಮ್ಮ ನಡುವೆ ಹೆಚ್ಚು ಆತ್ಮೀಯತೆ ಬೆಳೆಯಿತು. ಅವರಿಗೆ ಕೋಪ, ನಿರಾಸೆ ಯಾಕೆ ಹುಟ್ಟಿಕೊಂಡಿತ್ತು ಎಂದು ಈತನಕ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ, ಅವರನ್ನು ಟೀಕೆ ಮಾಡುವ ಪಕ್ಷದವರೂ. 

ಬ್ರಾಹ್ಮಣ ಕುಟುಂಬದ ಕಟ್ಟುಪಾಡುಗಳನ್ನು ಧಿಕ್ಕರಿಸಿ, ಶಾಲಾದಿನಗಳಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಗಟ್ಟಿ ವ್ಯಕ್ತಿತ್ವ ಅವರದು. ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುವ ಮಟ್ಟದಲ್ಲಿ ಕೆಲಸ ಕಾರ್ಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತ ಬಂದರು. ಅಂತಹ ಪ್ರಬಲವಾದ ಪ್ರಭಾವವನ್ನು ಅವರು ಪಡೆದುಕೊಂಡಿದ್ದು ಗಾಂಧೀಜಿಯವರಿಂದ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬಡವರು ಮತ್ತು ಅಲ್ಪಸಂಖ್ಯಾತರ ವಿರುದ್ಧವಾಗಿ ಏನೇ ಮಾತುಗಳು ಬಂದರೂ ತೀವ್ರವಾಗಿ ವಿರೋಧಿಸುತ್ತಿದ್ದರು. ‘ಪ್ಲೀಸಿಂಗ್​’ ಈ ವರ್ತನೆಯನ್ನು ಯಾವತ್ತೂ ಖಂಡಿಸುತ್ತಿದ್ದರು. ಕೊನೆತನಕವೂ ಸಿನಿಕತನ ಅವರ ಬಳಿ ಸುಳಿಯಲೇ ಇಲ್ಲ. ನಮ್ಮ ಕಾಲದಲ್ಲಿ ಹೀಗಿತ್ತು ಹಾಗಿತ್ತು. ಈಗ ಹಾಗಾಯಿತು ಎಂಬ ಹಳಹಳಿಕೆಯಂತೂ ಇರಲೇ ಇಲ್ಲ. ಮಾತನಾಡಿದರೆ ಚಳವಳಿಗಳು ಮತ್ತು ರಾಜಕಾರಣ. ಮಹಿಳೆ, ದಲಿತ, ಬಡವರ ಹಕ್ಕುಗಳ ಬಗ್ಗೆ ಸದಾ ಚಿಂತಿಸುತ್ತ ಒದ್ದಾಡುತ್ತಿದ್ದರು. ಚಳವಳಿಗಳ ಮುಂದಾಳತ್ವ ವಹಿಸುತ್ತಿದ್ದರು. ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದ ಅವರು ಅನ್ನಿಸಿದ್ದನ್ನು ನೇರವಾಗಿ ಹೇಳುವ ನಿಷ್ಠುರವಾದಿಯಾಗಿದ್ದರು.

ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ಬಗ್ಗೆ ದುಃಖಪಟ್ಟು ಕೋಪ ಇದ್ದರೂ ಸಂಯಮದಿಂದ ಮಾತನಾಡುತ್ತಿದ್ದರು. ಮೂರು ನಾಲ್ಕು ತಿಂಗಳ ಹಿಂದೆ ಮಾತನಾಡುತ್ತ ಹೇಳಿದರು, ‘ಗಾಂಧೀ, ನೆಹರು, ಮೌಲಾನಾ, ರಾಜೇಂದ್ರ ಪ್ರಸಾದ್ ಇವರ್ಯಾರೂ ಅಂದುಕೊಂಡಿರಲಿಲ್ಲವಲ್ಲ ಇಂಥ ಕೆಟ್ಟ ದಿನಗಳು ಬರುತ್ತವೆ ಎಂದು? ಈವತ್ತು ಸಂಸತ್ತನ್ನೇ ಕಡೆಗಣಿಸಲಾಗಿದೆ. ಯಾರು ಬೇಕಾದರೂ ಅಲ್ಲಿ ನಿಂತು ಏನು ಹೇಳಿಕೆಯನ್ನೂ ಕೊಡಬಹುದಾದಂಥ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲ ಏನಾದರೂ ಮಾಡಲೇಬೇಕು. ಮೋದಿ ನಡೆಯನ್ನು ವಿರೋಧಿಸಬೇಕು.’

ಅವತ್ತು ನಾನು ಮರುಳಸಿದ್ದಪ್ಪನವರು ಅವರ ಮನೆಯಲ್ಲಿ ಮಾತನಾಡುತ್ತ ಕುಳಿತಿದ್ದೆವು. ‘ಆಯ್ತಲ್ಲ ನೂರಾ ಎರಡು’ ಎಂದರು. ಮುಂದೇನು ಹೇಳುತ್ತಾರೆ ಎಂದು ನೋಡಿದೆವು. ‘ನಾನಿನ್ನೂ ಬದುಕಬೇಕು. ಹೋರಾಟಕ್ಕಾಗಿ ಬದುಕಬೇಕು’ ಎಂದರು. ಇಬ್ಬರೂ ತಲೆತಗ್ಗಿಸಿದೆವು. ಜಯನಗರದಲ್ಲಿ ಅವರಿದ್ದ ಮನೆ ಬಾಡಿಗೆಯದು. ಈತನಕ ಏನೂ ಆಸ್ತಿ ಮಾಡಿಲ್ಲ. ಹೃದ್ರೋಗ ಸಮಸ್ಯೆ ಇತ್ತು. ಆದರೂ ಆಸ್ಪತ್ರೆಗೆ ಹೋಗಲು ಹಟ ಹಿಡಿಯುತ್ತಿದ್ದರು. ಜಯದೇವದ ಡಾ. ಸಿ.ಎನ್ ಮಂಜುನಾಥ ಅವರು ಮತ್ತು ನಾವೊಂದು ನಾಲ್ಕು ಜನ ಒತ್ತಾಯಿಸಿದಾಗ, ಸ್ವಲ್ಪ ಜೋರು ಮಾಡಿದಾಗ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವಿಷಯದಲ್ಲಿ ಮಂಜುನಾಥ ಅವರನ್ನು ನೆನೆಯಲೇಬೇಕು. ದೊರೆಸ್ವಾಮಿಯವರ ಚಿಕಿತ್ಸೆ ವಿಷಯಕ್ಕೆ ಯಾವ ಸಂದರ್ಭದಲ್ಲಿಯೂ ಅವರು ಸ್ಪಂದಿಸುತ್ತ ಬಂದರು.

ಅವರ ಹೆಂಡತಿ ತೀರಿಹೋದ ಸಂದರ್ಭದಲ್ಲಿ, ಒಬ್ಬರೇ ಹೇಗಿರುತ್ತೀರಿ ಎಂದಿದ್ದಕ್ಕೆ, ‘ಅಯ್ಯ ನನಗೇನು ಭಯ? ನನ್ನ ಪಾಡಿಗೆ ನಾ ಇರ್ತೀನಿ. ಇಷ್ಟು ದಿನ ಮಾಡಿದ ಕೆಲಸಗಳ ಬಗ್ಗೆ, ಬದುಕಿನ ಬಗ್ಗೆ ಆತ್ಮತೃಪ್ತಿ ಇದೆ ಅಷ್ಟು ಸಾಕು’ ಎಂದರು. ಒಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಎಷ್ಟಂತ ಇನ್ನೂ ಬಾಡಿಗೆ ಮನೆಯಲ್ಲಿರ್ತೀರಿ. ನಮ್ಮ ಮನೆಯ ಬಳಿ ಒಂದು ಸಣ್ಣಮನೆ ಇದೆ. ಅದನ್ನೇ ಅಚ್ಚುಕಟ್ಟು ಮಾಡಿಸೋಣ’ ಎಂದು ಯಾರದೋ ಮೂಲಕ ದೊರೆಸ್ವಾಮಿಯವರ ಹೆಂಡತಿಗೆ ಹೇಳಿಸಿದರು. ಅದನ್ನವರು ಗಂಡನ ಬಳಿ ಪ್ರಸ್ತಾಪಿಸಿದಾಗ, ‘ಆಯ್ತಮ್ಮ, ನೀನು ಬೇಕಾದರೆ ಅಲ್ಲಿಯೇ ಹೋಗಿರು. ನಾನು ಬೇಕಾದರೆ ಗಾಂಧೀಭವನದಲ್ಲಿ ಇರ್ತೀನಿ’ ಎಂದು ಥಟ್ಟನೆ ಹೇಳಿಬಿಟ್ಟರು.

ಮೂರುದಿನಗಳ ಹಿಂದೆ ಹೇಳುತ್ತಿದ್ದರು. ಮನೆಗೆ ಹೋಗೋಕೆ ಮನಸಿಲ್ಲ. ಬೇರೆ ಏನಾದರೂ ವ್ಯವಸ್ಥೆ ಮಾಡಿಬಿಡಿ ಎಂದು ಹೇಳುವಾಗಲೂ ರಾಜಕೀಯ ಪರಿಸ್ಥಿತಿಯನ್ನೇ ಮಾತನಾಡುತ್ತಿದ್ದರು. ವ್ಯಾಕ್ಸಿನೇಷನ್ ವಿಷಯದಲ್ಲಿಯೂ ಅಷ್ಟೇ. ನನಗ್ಯಾಕೆ? ಯಾರಾದರೂ ಯುವಕನಿಗೋ, ಯುವತಿಗೋ ಕೊಟ್ಟುಕೊಡಿ ಎಂದುಬಿಟ್ಟರು. ಸ್ವಾರ್ಥ ಅನ್ನೋದು ಮೈನರ್ ಝೀರೋ. ಯಾವಾಗ ನೋಡಿದರೂ ದೇಶ, ರಾಜ್ಯ, ಹೋರಾಟ. ಬಹಳ ದುಃಖವಾಗುತ್ತಿದೆ ಅವರಿಲ್ಲ ಎನ್ನುವುದು ಈ ಸಂದರ್ಭದಲ್ಲಿ.

ಇದನ್ನೂ ಓದಿ : HS Doreswamy Obituary : 104ರ ವಯಸ್ಸಿನಲ್ಲಿಯೂ ದೊರೆಸ್ವಾಮಿಯವರಿಗಿದ್ದ ನೈತಿಕ ಸಿಟ್ಟು ನಮ್ಮ ದೇಶದ ಜನತೆಗೆ ಸ್ವಲ್ಪವಾದರೂ ಬರಲಿ

Published On - 6:36 pm, Wed, 26 May 21