ಕೊರೊನಾ ಲಸಿಕೆ, ಔಷಧಿ ಮೇಲಿನ ಜಿಎಸ್‌ಟಿಗೆ ಬೀಳುತ್ತಾ ಕಡಿವಾಣ; ಮೇ 28ಕ್ಕೆ ಜಿಎಸ್​ಟಿ ಮಂಡಳಿ ಮಹತ್ವದ ಸಭೆ

ಕೊರೊನಾದ ಸಂಕಷ್ಟ ಕಾಲದಲ್ಲಿ ಲಸಿಕೆ, ಔಷಧಿಗಳು, ಮೆಡಿಕಲ್ ಆಕ್ಸಿಜನ್ ಸಾಮಗ್ರಿಗಳ ಮೇಲೆ ತೆರಿಗೆ ವಿಧಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲು ನಾಡಿದ್ದು (ಮೇ 28) ಜಿಎಸ್‌ಟಿ ಮಂಡಳಿ ಸಭೆ ಸೇರಲಿದೆ.

ಕೊರೊನಾ ಲಸಿಕೆ, ಔಷಧಿ ಮೇಲಿನ ಜಿಎಸ್‌ಟಿಗೆ ಬೀಳುತ್ತಾ ಕಡಿವಾಣ; ಮೇ 28ಕ್ಕೆ ಜಿಎಸ್​ಟಿ ಮಂಡಳಿ ಮಹತ್ವದ ಸಭೆ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 26, 2021 | 7:14 PM

ಭಾರತದಲ್ಲಿ ಎಲ್ಲದರ ಮೇಲೂ ಟ್ಯಾಕ್ಸ್ ಹಾಕಲಾಗುತ್ತೆ. ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ನೀಡುತ್ತಿರುವ ಕೊರೊನಾ ಲಸಿಕೆಯ ಮೇಲೂ ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತಿದೆ. ಕೊರೊನಾದ ಸಾಮಗ್ರಿಗಳು, ಔಷಧಿ, ಮೆಡಿಕಲ್ ಆಕ್ಸಿಜನ್ ಸಾಮಗ್ರಿಗಳ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತೆ. ಕೊರೊನಾದ ಸಂಕಷ್ಟ ಕಾಲದಲ್ಲಿ ಲಸಿಕೆ, ಔಷಧಿಗಳು, ಮೆಡಿಕಲ್ ಆಕ್ಸಿಜನ್ ಸಾಮಗ್ರಿಗಳ ಮೇಲೆ ತೆರಿಗೆ ವಿಧಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲು ನಾಡಿದ್ದು (ಮೇ 28) ಜಿಎಸ್‌ಟಿ ಮಂಡಳಿ ಸಭೆ ಸೇರಲಿದೆ. ಜಿಎಸ್‌ಟಿ ಮಂಡಳಿಯ ಮಹತ್ವದ ಸಭೆಯಲ್ಲಿ ಯಾವ್ಯಾವ ಮಹತ್ವದ ತೀರ್ಮಾನ ಕೈಗೊಳ್ಳಬಹುದು ಎನ್ನುವ ಕುತೂಹಲ ಇದೆ.

ನಮ್ಮ ಭಾರತದಲ್ಲಿ ಒಂದು ಬೆಂಕಿಪೊಟ್ಟಣ ಖರೀದಿ ಮಾಡಿದರೂ, ಅದರ ಮೇಲೂ ತೆರಿಗೆ ಹಾಕಲಾಗಿರುತ್ತೆ. ಆದರೆ, ಅದು ನಮಗೆ ಗೊತ್ತಾಗಿರಲ್ಲ ಅಷ್ಟೇ. ಇದು ಕೊರೊನಾದ ಸಂಕಷ್ಟ ಕಾಲ. ನಾವೆಲ್ಲರೂ ಈಗ ಕೊರೊನಾ ವೈರಸ್ ವಿರುದ್ಧದ ಲಸಿಕೆ ಪಡೆಯಲು ಪರದಾಡುತ್ತಿದ್ದೇವೆ. ಕೆಲವರು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದರೆ, ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ತೆತ್ತು ಲಸಿಕೆ ಪಡೆಯುತ್ತಿದ್ದಾರೆ. ಕೊರೊನಾ ಲಸಿಕೆಯ ಮೇಲೂ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇಷ್ಟೇ ಅಲ್ಲ, ಜೀವ ಉಳಿಸುವ ವೆಂಟಿಲೇಟರ್, ಕೊರೊನಾ ಔಷಧಿ ಸೇರಿದಂತೆ ಇತರೆ ಸಾಮಗ್ರಿಗಳ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತಿದೆ.

ಜನರು ಮೊದಲೇ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್​ಡೌನ್​ನಿಂದ ಜನರ ದುಡಿಮೆ, ಸಂಪಾದನೆಗೂ ಹೊಡೆತ ಬಿದ್ದಿದೆ. ಕೊರೊನಾದಿಂದ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇಂಥ ಸ್ಥಿತಿಯಲ್ಲಿ ಜೀವ ಉಳಿಸುವ ಔಷಧಿಗಳು, ಕೊರೊನಾ ಲಸಿಕೆ, ವೆಂಟಿಲೇಟರ್​ಗಳ ಮೇಲೆಲ್ಲಾ ಜಿಎಸ್‌ಟಿ ವಿಧಿಸಿ ತೆರಿಗೆ ಸಂಗ್ರಹಿಸುವುದು ಎಷ್ಟು ಸರಿ ಎಂಬ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಈಗ ಕೊರೊನಾ ಲಸಿಕೆ, ಔಷಧಿಗಳ ಮೇಲೆ ಜಿಎಸ್‌ಟಿ ಇರಬೇಕೇ ಬೇಡವೇ? ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಜಿಎಸ್‌ಟಿ ಮಂಡಳಿಯ ಸಭೆ ಕರೆಯಲಾಗಿದೆ. ಜಿಎಸ್‌ಟಿ ಬಗ್ಗೆ ಈ ಸಭೆಯಲ್ಲಿ ಕೈಗೊಂಡ ತೀರ್ಮಾನವೇ ಅಂತಿಮ. ಹೀಗಾಗಿ ಮೇ 28ರ ಶುಕ್ರವಾರ ನಡೆಯುವ ಜಿಎಸ್‌ಟಿ ಮಂಡಳಿ ಸಭೆ ಮಹತ್ವ ಪಡೆದುಕೊಂಡಿದೆ.

ಈಗ ರಾಜ್ಯ ಸರ್ಕಾರಗಳ ಒತ್ತಾಯದ ಮೇರೆಗೆ 7 ತಿಂಗಳ ಬಳಿಕ ಜಿಎಸ್‌ಟಿ ಮಂಡಳಿಯ ಸಭೆಯನ್ನು ಕರೆಯಲಾಗಿದೆ. ಜಿಎಸ್‌ಟಿ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸುವರು. ಕೇಂದ್ರದ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲ ರಾಜ್ಯದ ಹಣಕಾಸು ಸಚಿವರು ಸಭೆಯಲ್ಲಿ ಭಾಗಿಯಾಗುವರು.

ಲಸಿಕೆ ಮೇಲಿನ ಜಿಎಸ್‌ಟಿ ರದ್ದಾದರೇ ಜನರಿಗೆ ಹೊರೆ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮುಖ್ಯವಾಗಿ ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೊರೊನಾ ಲಸಿಕೆ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕೆಂದು ಆಗ್ರಹಿಸಿ ಮೇ 9ರಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಬೇರೆ ರಾಜ್ಯಗಳು ಕೂಡ ಇದೇ ಬೇಡಿಕೆಯನ್ನು ಕೇಂದ್ರದ ಹಣಕಾಸು ಇಲಾಖೆಗೆ ಮುಂದಿಟ್ಟಿವೆ. ಈಗ ಜಿಎಸ್‌ಟಿ ಮಂಡಳಿಯ ಮುಂದೆ ಕೊರೊನಾ ಲಸಿಕೆಯ ಜಿಎಸ್‌ಟಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳಿವೆ. ಮೊದಲನೆಯದಾಗಿ ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ರದ್ದುಪಡಿಸುವುದು. ಎರಡನೇಯದು ಕೊರೊನಾ ಲಸಿಕೆಯ ಮೇಲೆ ಸಾಂಕೇತಿಕವಾಗಿ ಶೇ 0.1 ರಷ್ಟು ಮಾತ್ರ ಜಿಎಸ್‌ಟಿ ವಿಧಿಸುವುದು.

ಮೊದಲನೆ ಆಯ್ಕೆ ಪ್ರಕಾರ, ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ರದ್ದುಪಡಿಸಿದರೇ ಆಗುವ ಸಾಧಕಭಾದಕಗಳ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಜಿಎಸ್‌ಟಿ ಮಂಡಳಿ ಸಭೆಗೂ ಮುನ್ನ ಕೇಂದ್ರ ಹಾಗೂ ರಾಜ್ಯ ಹಣಕಾಸು ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಫಿಟಮೆಂಟ್ ಸಮಿತಿಯು ಇದ್ದು, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಂಡಿಸಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ.

ಕೊರೊನಾ ಲಸಿಕೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ರದ್ದುಪಡಿಸಿದರೆ, ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಇನ್​ಫುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸಿಗಲ್ಲ. ಅಂದರೆ, ಲಸಿಕಾ ಕಂಪನಿಗಳು ತಾವು ಲಸಿಕೆ ತಯಾರಿಸಲು ಖರೀದಿಸುವ ಕಚ್ಚಾವಸ್ತುಗಳ ಮೇಲಿನ ತೆರಿಗೆಯನ್ನು ಇನ್​ಫುಟ್ ಟ್ಯಾಕ್ಸ್ ಕ್ರೆಡಿಟ್ ಫೈಲ್ ಮಾಡುವ ಮೂಲಕ ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳುತ್ತಿವೆ. ಇನ್​ಫುಟ್ ಟ್ಯಾಕ್ಸ್ ಕ್ರೆಡಿಟ್ ಲಾಭ ಸಿಗದೆ ಇದ್ದರೆ, ಲಸಿಕಾ ಕಂಪನಿಗಳಿಗೆ ಕಚ್ಚಾ ವಸ್ತುಗಳ ಮೇಲಿನ ವೆಚ್ಚ ಹೆಚ್ಚಾಗುತ್ತೆ. ಈ ಹೆಚ್ಚಾದ ವೆಚ್ಚವನ್ನು ಲಸಿಕಾ ಕಂಪನಿಗಳು ಜನರಿಗೆ ವರ್ಗಾಯಿಸುತ್ತವೆ. ಹೀಗಾಗಿ ಲಸಿಕಾ ಕಂಪನಿಗಳು ಕೊರೊನಾ ಲಸಿಕೆಯ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಬಹುದು. ಕೊರೊನಾ ಲಸಿಕೆಯ ಬೆಲೆ ಮತ್ತಷ್ಟು ಹೆಚ್ಚಾದರೇ, ಕೇಂದ್ರ, ರಾಜ್ಯ ಸರ್ಕಾರ, ಜನರಿಗೆ ಮತ್ತೆ ಹೊರೆ ಬೀಳಲಿದೆ. ಕೊರೊನಾ ಲಸಿಕೆಯ ಮೇಲೆ ಸದ್ಯ ಶೇ 5ರಷ್ಟು ಜಿಎಸ್‌ಟಿ ಇರುವುದರಿಂದ ಲಸಿಕಾ ತಯಾರಕ ಕಂಪನಿಗಳು ಇನ್​ಫುಟ್ ಟ್ಯಾಕ್ಸ್ ಅನ್ನು ಕೇಂದ್ರ ಸರ್ಕಾರದಿಂದ ರೀಫಂಡ್ ಮಾಡಿಕೊಳ್ಳಲು ಅವಕಾಶ ಇದೆ. ಹೀಗಾಗಿ ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿಯನ್ನು ರದ್ದುಪಡಿಸುವುದರಿಂದ ಜನರಿಗೆ ಲಾಭವಾಗಲ್ಲ. ಮತ್ತಷ್ಟು ಹೊರೆಯಾಗುತ್ತೆ ಎಂದು ಮೇ 9ರಂದೇ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದ್ದರು.

ಎರಡನೆ ಆಯ್ಕೆಯಾದ, ಕೊರೊನಾ ಲಸಿಕೆಯ ಮೇಲೆ ಸಾಂಕೇತಿಕವಾಗಿ ಶೇ 0.1ರಷ್ಟು ಜಿಎಸ್‌ಟಿ ವಿಧಿಸಿದರೆ, ಲಸಿಕಾ ಕಂಪನಿಗಳು ಕೇಂದ್ರದಿಂದ ಇನ್​ಫುಟ್ ಟ್ಯಾಕ್ಸ್ ಕ್ರೆಡಿಟ್ ಮೂಲಕ ಕಚ್ಚಾವಸ್ತುಗಳ ಮೇಲಿನ ವೆಚ್ಚದ ರೀಫಂಡ್ ಮಾಡಿಕೊಳ್ಳಲು ಅವಕಾಶ ಇದೆ. ಇದರಿಂದ ಕೊರೊನಾ ಲಸಿಕೆಯ ಬೆಲೆ ಹೆಚ್ಚಾಗಲ್ಲ. ಕೊರೊನಾ ಲಸಿಕೆಯ ಬೆಲೆ ಕೂಡ ಕಡಿಮೆಯಾಗುತ್ತೆ. ಲಸಿಕೆಯ ಬೆಲೆ ಪ್ರತಿ ಡೋಸ್​ಗೆ ₹ 400 ಇದ್ದಾಗ ₹ 20 ರೂಪಾಯಿ ಬೆಲೆ ಕಡಿಮೆಯಾಗುತ್ತೆ. ಪ್ರತಿ ಡೋಸ್ ಲಸಿಕೆಯ ಬೆಲೆ ₹ 600 ರೂಪಾಯಿ ಇದ್ದಾಗ, ₹ 30 ಕಡಿಮೆಯಾಗುತ್ತೆ.

ಕೆಲ ಸಾಮಗ್ರಿಗಳ ಜಿಎಸ್‌ಟಿ ಇಳಿಕೆಗೆ ಅಜೆಂಡಾ ರೆಡಿ ಇನ್ನೂ ಕೇಂದ್ರ ಹಾಗೂ ರಾಜ್ಯದ ಹಣಕಾಸು ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಪಿಟ್​ಮೆಂಟ್ ಸಮಿತಿಯು ಮೇ 28ರ ಜಿಎಸ್‌ಟಿ ಮಂಡಳಿ ಸಭೆಯ ಅಜೆಂಡಾ ಸಿದ್ದಪಡಿಸಿದೆ. ಈ ಅಜೆಂಡಾದ ಪ್ರಕಾರ ಕೆಲ ಸಾಮಗ್ರಿಗಳ ಜಿಎಸ್‌ಟಿಯನ್ನು 2ರಿಂದ 3 ತಿಂಗಳ ಅವಧಿಗೆ ಇಳಿಕೆ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಸದ್ಯ ನಮ್ಮ ದೇಶದಲ್ಲಿ ಆಕ್ಸಿಜನ್ ಕಾನ್​ಸನ್​ಟ್ರೇಟರ್, ಮೆಡಿಕಲ್ ಗ್ರೇಡ್ ಆಕ್ಸಿಜನ್, ಪಲ್ಸ್ ಆಕ್ಸಿಮೀಟರ್, ಕೊರೊನಾ ಟೆಸ್ಟಿಂಗ್ ಕಿಟ್​ಗಳ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈಗ ಆಕ್ಸಿಜನ್ ಕಾನ್​ಸನ್​ಟ್ರೇಟರ್, ಮೆಡಿಕಲ್ ಗ್ರೇಡ್ ಆಕ್ಸಿಜನ್, ಪಲ್ಸ್ ಆಕ್ಸಿಮೀಟರ್ ಮೇಲಿನ ಶೇ 12ರಷ್ಟು ಜಿಎಸ್‌ಟಿಯನ್ನು ಈ ವರ್ಷದ ಜುಲೈ 31ರವರೆಗೆ ಶೇ 5ರ ಜಿಎಸ್‌ಟಿಗೆ ಇಳಿಕೆ ಮಾಡಲು ಫಿಟ್​ಮೆಂಟ್ ಸಮಿತಿಯು ಶಿಫಾರಸ್ಸು ಮಾಡಿದೆ. ಕೊರೊನಾ ಟೆಸ್ಟಿಂಗ್ ಕಿಟ್ ಮೇಲಿನ ಶೇ 12ರಷ್ಟು ಜಿಎಸ್‌ಟಿಯನ್ನು ಈ ವರ್ಷದ ಆಗಸ್ಟ್ 31 ರವರೆಗೆ ಶೇ 5ಕ್ಕೆ ಇಳಿಕೆ ಮಾಡಲು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸುಗಳ ಬಗ್ಗೆ ಮೇ 28ರಂದು ನಡೆಯುವ ಜಿಎಸ್‌ಟಿ ಮಂಡಳಿಯು ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ.

ಕೊರೊನಾ ಲಸಿಕೆಯ ಮೇಲಿನ ಶೇ.5 ರ ದರದ ಜಿಎಸ್‌ಟಿಯನ್ನು ರದ್ದುಪಡಿಸುವ ಅಥವಾ ಕಡಿಮೆ ಮಾಡುವ ಪ್ರಸ್ತಾವವನ್ನು ಫಿಟ್​ಮೆಂಟ್ ಸಮಿತಿಯು ತಿರಸ್ಕರಿಸಿದೆ. ವೆಂಟಿಲೇಟರ್​ಗಳ ಮೇಲೆ ಸದ್ಯ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ವೆಂಟಿಲೇಟರ್​ಗಳನ್ನು ವೈಯಕ್ತಿಕವಾಗಿ ಜನರು ಖರೀದಿ ಮಾಡಲ್ಲ. ಹೀಗಾಗಿ ಇದರ ಶೇ 12ರ ಜಿಎಸ್‌ಟಿ ಕಡಿಮೆ ಮಾಡುವುದು ಬೇಡ ಎಂಬ ಶಿಫಾರಸ್ಸನ್ನು ಜಿಎಸ್‌ಟಿ ಮಂಡಳಿಗೆ ಮಾಡಲಾಗಿದೆ. ಎನ್‌ 95 ಮಾಸ್ಕ್ ಮೇಲೆ ಶೇ 5ರಷ್ಟು ಜಿಎಸ್‌ಟಿ ಇದ್ದು, ಅದರಲ್ಲಿ ಬದಲಾವಣೆ ಮಾಡಿಲ್ಲ. ಆರ್‌ಟಿ-ಪಿಸಿಆರ್ ಯಂತ್ರಗಳ ಮೇಲೆ ಶೇ 18 ರಷ್ಟು ಜಿಎಸ್‌ಟಿ ಇದ್ದು, ಈ ತೆರಿಗೆ ದರದಲ್ಲೂ ಬದಲಾವಣೆಗೆ ಶಿಫಾರಸ್ಸು ಮಾಡಿಲ್ಲ.

ಕೊರೊನಾ ವೈರಸ್ ವಿರುದ್ಧ ಚಿಕಿತ್ಸೆಗೆ ಬಳಸುತ್ತಿರುವ ಔಷಧಗಳ ಮೇಲಿನ ಜಿಎಸ್‌ಟಿ ಇಳಿಕೆಗೂ ಫಿಟ್​ಮೆಂಟ್ ಸಮಿತಿಯು ಶಿಫಾರಸ್ಸು ಮಾಡಿಲ್ಲ. ಏಕೆಂದರೆ, ಕೊರೊನಾ ವೈರಸ್ ವಿರುದ್ಧ ಇದುವರೆಗೂ ನಿರ್ದಿಷ್ಟವಾದ ಔಷಧಿ ಎಂಬುದೇ ಇಲ್ಲ. ಇದುವರೆಗೂ ರೆಮ್​ಡೆಸಿವರ್ ಇಂಜೆಕ್ಷನ್ ಅನ್ನು ಕೊರೊನಾ ರೋಗಿಗಳಿಗೆ ನೀಡಲಾಗುತ್ತಿತ್ತು. ಆದರೇ, ಈಗ ವಿಶ್ವ ಆರೋಗ್ಯ ಸಂಸ್ಥೆಯೇ ಕೊರೊನಾ ರೋಗಿಗಳ ಚಿಕಿತ್ಸೆಗೆ ರೆಮ್​ಡೆಸಿವರ್ ಬಳಸಬಾರದೆಂದು ಹೇಳಿದೆ. ಕೇಂದ್ರದ ಆರೋಗ್ಯ ಇಲಾಖೆಯಿಂದ ಯಾವುದಾದರೂ ಡ್ರಗ್ಸ್ ಮೇಲಿನ ಜಿಎಸ್‌ಟಿ ದರ ಇಳಿಕೆಗೆ ಮನವಿ ಬಂದರೇ, ಅದನ್ನು ಪರಿಶೀಲಿಸಬಹುದು ಎಂದು ಫಿಟ್​ಮೆಂಟ್ ಸಮಿತಿ ಹೇಳಿದೆ. ಹ್ಯಾಂಡ್ ಸ್ಯಾನಿಟೈಸರ್ ಮೇಲಿನ ಜಿಎಸ್‌ಟಿ ಇಳಿಕೆಯ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಸೋಪ್ ಮೇಲೂ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಹ್ಯಾಂಡ್ ಸ್ಯಾನಿಟೈಸರ್ ಮೇಲಿನ ಜಿಎಸ್‌ಟಿ ಇಳಿಕೆ ಸೂಕ್ತವಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ವಿದೇಶದಿಂದ ಅಮದಾಗುವ ಆಕ್ಸಿಜನ್ ಕಾನ್​ಸನ್​ಟ್ರೇಟರ್​ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಮೊನ್ನೆ ದೆಹಲಿ ಹೈಕೋರ್ಟ್ ಅಸಂವಿಧಾನಿಕ ಎಂದು ಹೇಳಿ ರದ್ದುಪಡಿಸಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕೇಂದ್ರದ ಹಣಕಾಸು ಇಲಾಖೆ ನಿರ್ಧರಿಸಿದೆ. ವಿದೇಶದಿಂದ ಅಮದಾಗುವ ಆಕ್ಸಿಜನ್ ಕಾನ್​ಸನ್​ಟ್ರೇಟರ್ ಮೇಲಿನ ಜಿಎಸ್‌ಟಿ ಬಗ್ಗೆಯೂ ಈಗ ಜಿಎಸ್‌ಟಿ ಮಂಡಳಿಯು ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ.

(GST Council Meeting on May 28 questions on taxation on coronavirus drug and covid vaccine)

ಇದನ್ನೂ ಓದಿ: GST revenue collection: 2021ರ ಏಪ್ರಿಲ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಜಿಎಸ್​ಟಿ 1.41 ಲಕ್ಷ ಕೋಟಿ ರೂ. ಸಂಗ್ರಹ

ಇದನ್ನೂ ಓದಿ: ಜಿಎಸ್​ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್

Published On - 7:13 pm, Wed, 26 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ