ಜಿಎಸ್ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್
ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನಲ್ಲಿ ವಂಚನೆ ಆಗಿದ್ದ 20,124 ಕೋಟಿ ರೂಪಾಯಿಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ನವದೆಹಲಿ: ನವೆಂಬರ್ 9, 2020ರಿಂದ ಜನವರಿ 31, 2021ರ ಮಧ್ಯೆ ₹ 20,124 ಕೋಟಿ ಜಿಎಸ್ಟಿ ವಂಚನೆಯನ್ನು ಸರ್ಕಾರ ಪತ್ತೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ. ನಕಲಿ/ಬೋಗಸ್ ಇನ್ವಾಯ್ಸ್ಗಳನ್ನು ಬಳಸಿ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯುವುದನ್ನು ಹಾಗೂ ಮತ್ತೊಂದು ಸಂಸ್ಥೆಗೆ ವರ್ಗಾಯಿಸುವುದರ ವಿರುದ್ಧ ದೇಶದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಅವರು ಲಿಖಿತ ಉತ್ತರವನ್ನು ನೀಡಿದ್ದಾರೆ.
ನವೆಂಬರ್ 9, 2020ರಿಂದ (ವಿಶೇಷ ಕಾರ್ಯಾಚರಣೆ ಆರಂಭವಾದ ದಿನದಿಂದ) ಜನವರಿ 31, 2021ರ ತನಕ ಪತ್ತೆ ಮಾಡಿದ ವಂಚನೆಯ ಮಾಹಿತಿಯನ್ನು ತೆರೆದಿಟ್ಟರು. 2,692 ಪ್ರಕರಣಗಳನ್ನು ಅಧಿಕಾರಿಗಳು ದಾಖಲು ಮಾಡಿದ್ದು, ಜಿಎಸ್ಟಿ/ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆಯ ರೂ. 20,124.19 ಕೋಟಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. ಈ ಅವಧಿಯಲ್ಲಿ 282 ವ್ಯಕ್ತಿಗಳನ್ನು ಬಂಧಿಸಿ, ರೂ. 857.75 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತ್ಯೇಕವಾದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಆದಾಯ ತೆರಿಗೆ ಇಲಾಖೆಯಿಂದ ಮುಚ್ಚಿಟ್ಟಿದ್ದ ರೂ. 2,223.88 ಕೋಟಿ ರೂಪಾಯಿಯನ್ನು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ನಿಂದ ಡಿಸೆಂಬರ್ ಮಧ್ಯೆ ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು. ಜತೆಗೆ 250 ಸಮೂಹಗಳ ಮೇಲೆ 2020ರ ಏಪ್ರಿಲ್ನಿಂದ ಡಿಸೆಂಬರ್ ಮಧ್ಯೆ ಶೋಧ ನಡೆಸಿ, 6500.78 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ