ಹೈದರಾಬಾದ್: ಆಡಳಿತ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಗಳವಾರ ಮಂಗಳಗಿರಿಯಲ್ಲಿ, ವಿಶಾಖಪಟ್ಟಣಂ ಮತ್ತು ಇತರ ಸ್ಥಳಗಳಲ್ಲಿ ತೆಲುಗು ದೇಶಂ ಪಕ್ಷದ ಪ್ರಧಾನ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ವಿರೋಧ ಪಕ್ಷದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSR Congress Party) ಆರೋಪಿಸಿದೆ. ಟಿಡಿಪಿ ವಕ್ತಾರ ಕೆ ಪಟ್ಟಾಭಿ ರಾಮ್ ಅವರು, ಮಾಜಿ ಸಚಿವ ನಕ್ಕ ಆನಂದ ಬಾಬು ಅವರಿಗೆ ಪೊಲೀಸ್ ನೋಟಿಸ್ ನೀಡುವುದನ್ನು ಆಕ್ಷೇಪಿಸಿ, ಜಗನ್ ಮೋಹನ್ ರೆಡ್ಡಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ವೈಎಸ್‌ಆರ್‌ಸಿಪಿ ಗೂಂಡಾಗಳು ಪಕ್ಷದ ಪ್ರಧಾನ ಕಚೇರಿ ಮತ್ತು ವಿಶಾಖಪಟ್ಟಣಂನ ಕಚೇರಿ ಮತ್ತು ಪಕ್ಷದ ನಾಯಕರ ನಿವಾಸಗಳ ಮೇಲೆ ನಡೆಸಿದ ದಾಳಿಯನ್ನು ತೆಲುಗು ದೇಶಂ ಪಕ್ಷವು ಬಲವಾಗಿ ಖಂಡಿಸುತ್ತದೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆಯೇ ಅಥವಾ ಫ್ಯಾಸಿಸ್ಟ್ ದೇಶದಲ್ಲಿದ್ದೇವೆಯೇ ಎಂದು ನಮಗೆ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿ ಮತ್ತು ಡಿಜಿಪಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಎಪಿ ಟಿಡಿಪಿ ಅಧ್ಯಕ್ಷ ಅಚ್ಚಣ್ಣಾಯ್ಡು ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ವಿಫಲವಾದ ಕಾರಣಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ವಿಜಯವಾಡದಲ್ಲಿ ಪಟ್ಟಾಭಿಯ ನಿವಾಸದ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಪಟ್ಟಾಭಿಯವರ ಟೀಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯದಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಗೌತಮ್ ಸವಾಂಗ್ ಹೇಳಿದರು. ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸದಂತೆ ಜನರಿಗೆ ಮನವಿ ಮಾಡಿದ ಅವರು, ನಾಯಕರು ಅವಹೇಳನಕಾರಿ ಟೀಕೆಗಳನ್ನು ಮಾಡುವುದನ್ನು ತಡೆಯಬೇಕು ಎಂದಿದ್ದಾರೆ.
ವೈಎಸ್‌ಆರ್‌ಸಿಪಿಯ ಕಾರ್ಯಕರ್ತರು ಕೆಲವು ನಾಯಕರು ಮಾಡಿದ ಟೀಕೆಳಿಗಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಎಲ್ಲವೂ ನಿಯಂತ್ರಣದಲ್ಲಿದೆ. ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ಪಿಟಿಐಗೆ ತಿಳಿಸಿದ್ದಾರೆ. ಡಿಜಿಪಿ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದಾದ್ಯಂತ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರಚೋದನೆ ನೀಡದಂತೆ ಜನರನ್ನು ವಿನಂತಿಸಲಾಗಿದೆ. ಪ್ರಚೋದನಕಾರಿ ಟೀಕೆಗಳನ್ನು ಮಾಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಅವರು ಈ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತಂದರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಪರಿಸ್ಥಿತಿಗಳ ಬಗ್ಗೆ ಗಮನಹರಿಸಿದ್ದಾರೆ. “ಕೇಂದ್ರವು ಪ್ರಜಾಪ್ರಭುತ್ವವನ್ನು ಉಳಿಸುವ ಕ್ರಮಗಳನ್ನು ಅನುಕರಿಸಬೇಕು ಮತ್ತು ಗಂಜಾ ಮಾಫಿಯಾ (ರಾಜ್ಯದಲ್ಲಿ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಾಭಿ ಹೇಳಿದ್ದರು.
ದಾಳಿಯಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದ ಪಕ್ಷದ ಹಿರಿಯ ಶಾಸಕ ಮಲ್ಲಾಡಿ ವಿಷ್ಣು, ಪಟ್ಟಾಭಿ ಸಿಎಂ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಬಾರದಿತ್ತು. ಪಟ್ಟಾಭಿ ಯಾವಾಗಲೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು ಮತ್ತು ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸುತ್ತಿದ್ದರು ಎಂದು ವಿಷ್ಣು ಆರೋಪಿಸಿದರು.
ಈ ದಾಳಿಯಿಂದ ವೈಎಸ್‌ಆರ್ ಕಾಂಗ್ರೆಸ್‌ಗೆ ಯಾವ ಸಂಬಂಧವಿದೆ? ಅವರು ಸಾರ್ವಜನಿಕವಾಗಿ ನಮ್ಮ ಇಮೇಜ್ ಅನ್ನು ಕೆಡಿಸಲು ನಮ್ಮ ಪಕ್ಷವನ್ನು ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರ ಕೆಟ್ಟ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ವಿಷ್ಣು ಹೇಳಿದ್ದಾರೆ.
ದಾಳಿಯ ಸುದ್ದಿಯನ್ನು ಕೇಳಿದ ನಂತರ, ನಾಯ್ಡು ಮಂಗಳಗಿರಿಯಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿ ಘಟನೆಯ ಬಗ್ಗೆ ವಿಚಾರಿಸಿದರು. ಕೆಲವರು ಬಿಯರ್ ಬಾಟಲಿಗಳಿಂದ ದಾಳಿ ಮಾಡಿದ್ದಾರೆ ಎಂದು ಟಿಡಿಪಿ ಕಚೇರಿಯಲ್ಲಿನ ಕಾರ್ಯಕರ್ತರು ನಾಯ್ಡು ಅವರಿಗೆ ಮಾಹಿತಿ ನೀಡಿದರು.
ಟಿಡಿಪಿಯ ಪ್ರಧಾನ ಕಾರ್ಯದರ್ಶಿ ಮತ್ತು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಸರಣಿ ಟ್ವೀಟ್‌ಗಳಲ್ಲಿ ಪಕ್ಷದ ಕಚೇರಿಗಳ ಮೇಲಿನ ದಾಳಿಯನ್ನು ಖಂಡಿಸಿದರು. ಅನೇಕ ನಗರಗಳಲ್ಲಿನ ಟಿಡಿಪಿ ಕಚೇರಿಗಳಲ್ಲಿ ಪೋಲಿಸ್ ಜನರನ್ನು ಚದುರಿಸುವ ವೇಳೆ ಸ್ವಲ್ಪ ಮಟ್ಟಿನ ಉದ್ವಿಗ್ನತೆ ಕಂಡುಬಂದಿದೆ ಎಂದು ಟಿವಿ ವರದಿಗಳು ಸೂಚಿಸುತ್ತವೆ.
ಇದನ್ನೂ ಓದಿ:Uttarakhand Rain: ಉತ್ತರಾಖಂಡದಲ್ಲಿ ಮಳೆಯಿಂದ 34 ಜನ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ