
ನವದೆಹಲಿ, ಅಕ್ಟೋಬರ್ 26: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಬಳಸಿರುವ ಆಕ್ಷೇಪಾರ್ಹ ಹೇಳಿಕೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ವಿವಾದಕ್ಕೆ ನಾಂದಿ ಹಾಡಿದೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೂ ಕಾರಣವಾಗಿದ್ದು, ಬಹಿರಂಗ ಕ್ಷಮೆಗೂ ಆಗ್ರಹ ಕೇಳಿಬಂದಿದೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದು, ‘ಭಾರತೀಯ ರಾಜಕೀಯ ಸಂಸ್ಕೃತಿಯನ್ನು ಕಾಂಗ್ರೆಸ್ ನಾಶಪಡಿಸುತ್ತಿದೆ’ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.
ದೆಹಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಲ್ಹಾದ್ ಜೋಶಿ, ‘ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಮಾತ್ರ ಇನ್ಮೆಚೂರ್ ಎಂದು ನಾವು ಭಾವಿಸಿದ್ದೆವು. ಆದರೆ ಅವರೊಂದಿಗೆ ಸೇರಿಕೊಂಡು, ಈಗ ಎಲ್ಲರೂ ಇನ್ಮೆಚೂರ್ ಆಗಿದ್ದಾರೆ, ಹತಾಶರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುವ ಮೂಲಕ ಅವರು ಭಾರತದ ರಾಜಕೀಯ ಸಂಸ್ಕೃತಿಯನ್ನು ಅಥವಾ ತಮ್ಮ ಕ್ಷೇತ್ರದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ’ ಎಂದು ಜೋಶಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ಇದನ್ನೂ ಓದಿ: ಖರ್ಗೆ ಆಕ್ರೋಶದ ಹೇಳಿಕೆಗೆ ತಪ್ಪು ತಿಳುವಳಿಕೆಯೇ ಕಾರಣ?: ಥಳಿತಕ್ಕೊಳಗಾದ ವ್ಯಕ್ತಿಯಿಂದ ಸ್ಫೋಟಕ ಸತ್ಯ ಬಹಿರಂಗ
ಇನ್ನು ಮುಂದುವರೆದು ಮಾತನಾಡಿರುವ ಜೋಶಿ, ‘ರಾಹುಲ್ ಗಾಂಧಿ ಒಡನಾಟದಲ್ಲಿರುವುದರಿಂದ, ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಹಲವು ರಾಜ್ಯಾಧ್ಯಕ್ಷರು ಎಲ್ಲರೂ ಒಂದೇ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಅವರೆಲ್ಲರ ಮೇಲೆ ಪ್ರಭಾವ ಬೀರಿದೆ. ಸದಾ ತಮ್ಮ ನಾಯಕರೊಂದಿಗೆ ಇರುತ್ತಾರೆ ಮತ್ತು ಅವರು ಹೇಳಿದ್ದನ್ನೇ ಫಾಲೋ ಮಾಡುತ್ತಾರೆ. ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಇದೇ ರೀತಿಯ ಭಾಷೆ ಬಳಸಿದ್ದರು. ಈಗ ಇವರು ಅದೇ ರೀತಿ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಬಿಹಾರದ ಪಾಟ್ನಾದ ಕಾರ್ಯಕ್ರಮವೊಂದರಲ್ಲಿ ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ SIR ವಿಚಾರ, ಚೋರಿ ವಿಚಾರ ಪ್ರಸ್ತಾಪಿಸಿದ್ದರು. ಮತಗಳ್ಳತನ ಮಾಡಿದವರನ್ನ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಈ ವೇಳೆ ಸಭಿಕರೊಬ್ಬರು ಮೋದಿ ಎಲ್ಲೂ ಹೋಗೋದಿಲ್ಲ ಅಂತಾ ಘೋಷಣೆ ಕೂಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ಖರ್ಗೆ, ಮೋದಿ ಅವರ ಅಪ್ಪಾನೂ ಹೋಗುತ್ತಾನೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ನವೆಂಬರ್ 1 ರಂದು ದೆಹಲಿಯಲ್ಲಿ ಇಂಡಿಯಾ ಮಿತ್ರಪಕ್ಷಗಳ ಮೆಗಾ ರ‍್ಯಾಲಿಗೂ ಮುನ್ನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಬಳಸಿರುವ ಆಕ್ಷೇಪಾರ್ಹ ಹೇಳಿಕೆ ಸದ್ಯ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.