ಒಡಿಶಾದಲ್ಲಿ ಸೇತುವೆಯಿಂದ ಕೆಳಗುರುಳಿದ ಬಸ್, ಐವರು ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ

ಪುರಿಯಿಂದ ಪಶ್ಚಿಮ ಬಂಗಾಳಕ್ಕೆ ಹೊರಟಿದ್ದ ಬಸ್​ಒಂದು ಸೇತುವೆಯಿಂದ ಕೆಳಗುರುಳಿ ಐವರು ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಒಡಿಶಾದಲ್ಲಿ ಸೇತುವೆಯಿಂದ ಕೆಳಗುರುಳಿದ ಬಸ್, ಐವರು ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ
ಒಡಿಶಾ ರಸ್ತೆ ಅಪಘಾತ
Image Credit source: Hindustan Times

Updated on: Apr 16, 2024 | 8:27 AM

ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪುರಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಬಸ್​ವೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗುರುಳಿರುವ ಘಟನೆ ನಡೆದಿದೆ. ಐವರು ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಮೃತರನ್ನು ಗುರುತಿಸುವ ಪ್ರಯತ್ನ ಮುಂದುವರಿದಿದೆ ಎಂದು ಎಸ್ಪಿ ವಿನೀತ್ ಅಗರ್ವಾಲ್ ತಿಳಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚಿನ ಪ್ರಯಾಣಿಕರು ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ-16ರ ಬಾರಾಬತಿ ಸೇತುವೆ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

38 ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಈ ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸುವ ಜೊತೆಗೆ, ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಮೃತರ ಕುಟುಂಬಗಳಿಗೆ ಒಡಿಶಾ ಸರ್ಕಾರ ತಲಾ 3 ಲಕ್ಷ ರೂಪಾಯಿ ಪರಿಹಾರ ನೀಡಲಿದೆ.

ಮತ್ತಷ್ಟು ಓದಿ: ವಿಜಯಪುರ: ಬಬಲೇಶ್ವರನ ಅರ್ಜುಣಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ, ನಾಲ್ವರ ಸಾವು

ಅಪಘಾತಕ್ಕೀಡಾದ ಪ್ರಯಾಣಿಕರ ಬಸ್ ಪಶ್ಚಿಮ ಬಂಗಾಳದ ಹಲ್ದಿಯಾಕ್ಕೆ ಹೋಗುತ್ತಿತ್ತು ಎಂದು ಒಡಿಶಾ ಸಾರಿಗೆ ಆಯುಕ್ತ ಅಮಿತವ್ ಠಾಕೂರ್ ಹೇಳಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗಾಯಾಳುಗಳ ಸಹಾಯಕ್ಕಾಗಿ 16 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು.

ಸೇತುವೆಯಿಂದ ಬಿದ್ದ ಬಸ್ಸನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು. ರಕ್ಷಣಾ ಕಾರ್ಯಾಚರಣೆ ತಡರಾತ್ರಿ ಅಂತ್ಯಗೊಂಡಿದೆ. ಬಸ್‌ನಿಂದ ಪ್ರಯಾಣಿಕರನ್ನು ಹೊರ ತೆಗೆಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗಿದೆ ಎಂದು ಜಾಜ್‌ಪುರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಖಿಲ್ ಪವನ್ ಕಲ್ಯಾಣ್ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ