Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಲ್ಲಾಳಿಗಳಿಬ್ಬರ ಜಗಳ: ಬೆಂಕಿಗಾಹುತಿಯಾಯ್ತು 1 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ ಕಾರು

ಕಾರು ದಲ್ಲಾಳಿಗಳಿಬ್ಬರ ಹಣಕಾಸಿನ ವಿಚಾರವಾಗಿ ಸುಮಾರು 1 ಕೋಟಿ ರೂ. ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಬೆಂಕಿಗಾಹುತಿಯಾಗಿರುವಂತಹ ಘಟನೆ ಹೈದರಾಬಾದ್‌ನ ಪಹಾಡಿ ಶರೀಫ್ ಪ್ರದೇಶದಲ್ಲಿ ಏಪ್ರಿಲ್ 13 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಹಾಡಿ ಶರೀಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ.

ದಲ್ಲಾಳಿಗಳಿಬ್ಬರ ಜಗಳ: ಬೆಂಕಿಗಾಹುತಿಯಾಯ್ತು 1 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ ಕಾರು
ಬೆಂಕಿಗಾಹುತಿಯಾದ ಕಾರು
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 15, 2024 | 9:00 PM

ಹೈದರಾಬಾದ್​, ಏಪ್ರಿಲ್​ 15: ಕಾರು ದಲ್ಲಾಳಿಗಳಿಬ್ಬರ ಹಣಕಾಸಿನ ವಿಚಾರವಾಗಿ ಸುಮಾರು 1 ಕೋಟಿ ರೂ. ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು (Lamborghini car) ಬೆಂಕಿಗಾಹುತಿಯಾಗಿರುವಂತಹ ಘಟನೆ ಹೈದರಾಬಾದ್‌ನ ಪಹಾಡಿ ಶರೀಫ್ ಪ್ರದೇಶದಲ್ಲಿ ಏಪ್ರಿಲ್ 13 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನಗರವನ್ನು ಬೆಚ್ಚಿ ಬೀಳಿಸಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್​​ ಮೂಲಗಳ ಪ್ರಕಾರ, ಮಾಲೀಕ ನೀರಜ್ ತನ್ನ ಲಂಬೋರ್ಗಿನಿ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಖರೀದಿದಾರರನ್ನು ಹುಡುಕಲು ತನ್ನ ಸ್ನೇಹಿತರ ಸಹಾಯವನ್ನು ಪಡೆದಿದ್ದಾರೆ.  ಅಹಮದ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದು ಕಾರು ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದರು. ಅತ್ತ ಗಂಭೀರ ಖರೀದಿದಾರನಂತೆ ನಟಿಸಿದ್ದ ಅಹ್ಮದ್, ನೀರಜ್‌ನ ಸ್ನೇಹಿತ ಅಮನ್ ಹೈದರ್‌ಗೆ ಕಾರನ್ನು ಏಪ್ರಿಲ್ 13 ರ ಸಂಜೆ ಫಾರ್ಮ್‌ಹೌಸ್‌ಗೆ ತರುವಂತೆ ಮನವೊಲಿಸಿದ್ದಾನೆ.

ಬೆಂಕಿಗಾಹುತಿಯಾದ ಕಾರು 

ಪ್ಲ್ಯಾನ್ ಪ್ರಕಾರ​​ ಫಾರ್ಮ್‌ಹೌಸ್‌ಗೆ ಹೋಗುವ ಬದಲು, ಅಮನ್ ಹಾಗೂ ಮತ್ತೊಬ್ಬ ಸ್ನೇಹಿತ ಹಮ್ದಾನ್ ಜೊತೆಗೂಡಿ, ವಿವೇಕಾನಂದ ಜಂಕ್ಷನ್​​ ತಲುಪಿದ ನಂತರ ಹೈದರಾಬಾದ್ ವಿಮಾನ ನಿಲ್ದಾಣದ ಕಡೆಗೆ ಪಾಸಾಗಿದ್ದಾರೆ. ಬಳಿಕ ಇಲ್ಲಿ ಅವರು ಅಹ್ಮದ್ ಮತ್ತು ಅವರ ಸಹಚರರು ಅಡ್ಡಗಟ್ಟಿದ್ದಾರೆ.

ಇದನ್ನೂ ಓದಿ: ಸಿಡ್ನಿ ನರಹಂತಕ; ಗರ್ಲ್​ಫ್ರೆಂಡ್ ಸಿಗದ ಹತಾಶೆಯಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದ ಕೊಲೆಗಡುಕ

ಈ ವೇಳೆ ನೀರಜ್ ಅವರಿಗೆ ಹಣ ನೀಡುವುದು ಬಾಕಿ ಇದೆ ಎಂದು ಅಹ್ಮದ್​ ಸಹಚರರು ಹೇಳಿದ್ದಾರೆ. ಮಾತುಕತೆ ವೇಳೆ ಅಹ್ಮದ್ ಹಾಗೂ ಈತನ ಸ್ನೇಹಿತರು ಕೋಪಗೊಂಡಿದ್ದಾರೆ. ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮನ್​ ಪ್ರಯತ್ನಿಸಿದ್ದು ತಡೆಯಲು ಸಾಧ್ಯವಾಗಿಲ್ಲ. ಗಲಾಟೆ ಹಿಂಸಾಚಾರಕ್ಕೆ ತಿರುಗಿದ್ದು, ಲಂಬೋರ್ಗಿನಿ ಕಾರಿನ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ, ಕಾರಿನಲ್ಲಿ ಶವ ಪತ್ತೆ

ಘಟನೆಗೆ ಸಂಬಂಧಿಸಿದಂತೆ ಪಹಾಡಿ ಶರೀಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ. ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹೈದರಾಬಾದ್‌ನಲ್ಲಿ ದುಬಾರಿ ಮೌಲ್ಯದ ವಾಹನಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:57 pm, Mon, 15 April 24