ಕೊವಿಡ್ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ಪರಿಗಣಿಸಿ, ಒಡಿಶಾ ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ ನವೆಂಬರ್ 10 ರಿಂದ 30 ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.
ವಯಸ್ಕರು, ಮಕ್ಕಳು, ಕೊಮೊರ್ಬಿಡಿಟಿ ಹೊಂದಿರುವ ವ್ಯಕ್ತಿಗಳು ಮತ್ತು ಇತರರು ಚಳಿಗಾಲದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಾರೆ ಎಂದು ಗಮನಿಸಲಾಗಿದೆ. ಇದಲ್ಲದೆ, ವಾಯುಮಾಲಿನ್ಯ ಹಾಗೂ ಗಾಳಿಯಲ್ಲಿರುವ ಪಾರ್ಟಿಕ್ಯುಲೇಟ್ ಮ್ಯಾಟರ್ (ಎಸ್‌ಪಿಎಂ) ಉಸಿರಾಟದ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ಹೇಳಲಾಗಿದೆ.
ಪಟಾಕಿಗಳನ್ನು ಸುಡುವುದರಿಂದ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುವ ನೈಟ್ರಸ್ ಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮುಂತಾದ ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತವೆ. ಅಂತಹ ಮಾಲಿನ್ಯಕಾರಕಗಳು ಸೋಂಕಿತರ ಆರೋಗ್ಯಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.
ಹಾಗಾಗಿ, ಸಾರ್ವಜನಿಕ ಹಿತಾಸಕ್ತಿಯಿಂದ ಮೇಲೆ ತಿಳಿಸಿದ ಅವಧಿಯಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಎಂದು ಒಡಿಶಾ ಸರ್ಕಾರ ತಿಳಿಸಿದೆ. ದೀಪಾವಳಿ ದೀಪಗಳ ಹಬ್ಬ. ಸಾಂಪ್ರದಾಯಿಕ ರೀತಿಯಲ್ಲಿ ಮಣ್ಣಿನ ದೀಪಗಳು, ಮೇಣದ ಬತ್ತಿ ಮತ್ತು ಇತರೆ ಸಾಂಪ್ರದಾಯಿಕ ಬೆಳಕಿನ ವಸ್ತುಗಳನ್ನು ಬೆಳಗಿಸುವ ಮೂಲಕ ಆಚರಿಸಬಹುದು ಎಂದು ಸಹ ತಿಳಿಸಿದೆ.