ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹೊತ್ತಲ್ಲೇ, ಸಾಲುಸಾಲು ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಂಡು, ವಾಹನಗಳೆಲ್ಲ ಹೊತ್ತಿ ಉರಿದ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಭವಿಷ್ಯದಲ್ಲಿ ಇಂಧನ ಕೊರತೆಯಾಗುವುದನ್ನು ತಪ್ಪಿಸುವ ಸಲುವಾಗಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲಾಗಿದೆ. ಇದು ಮಾರುಕಟ್ಟೆಗೆ ಬಂದ ಮೊದಮೊದಲು ಜನರು ಇದರ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಆದರೆ ಈಗೀಗ ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಏರುತ್ತಿದೆ. ಜನರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಪದೇಪದೆ ಬೆಂಕಿ ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ಯಾಟರಿ ಗುಣಮಟ್ಟವೇ ಬೆಂಕಿ ಉಂಟಾಗಲು ಕಾರಣ ಎಂದು ತಜ್ಞರು ಹೇಳಿದ್ದರೆ, ಕೇಂದ್ರ ಸರ್ಕಾರವೂ ಕೂಡ ಸೂಕ್ತ ತನಿಖೆಗೆ ಆದೇಶಿಸಿದೆ.
ಈ ಮಧ್ಯೆ ಓಲಾ ಎಲೆಕ್ಟ್ರಿಕ್ ಕಂಪನಿ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದ ತನ್ನ 1441 ಸ್ಕೂಟರ್ಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದಲೇ ಸ್ಕೂಟರ್ಗಳನ್ನು ಹಿಂಪಡೆಯುತ್ತಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೇ, ಪುಣೆಯಲ್ಲಿ ಮಾರ್ಚ್ 26ರಂದು ನಡೆದ ಘಟನೆಗೆ ಕಾರಣವೇನು ಎಂಬ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿರುವುದಾಗಿಯೂ ಓಲಾ ಹೇಳಿದೆ. ಪುಣೆಯ ದಾನೋರಿ ಏರಿಯಾದಲ್ಲಿ ಮಾರ್ಚ್ 26ರಂದು ನಿಂತಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು, ಧಗಧಗನೇ ಹೊತ್ತಿ ಉರಿದಿತ್ತು. ನಾವು ಕೂಡಲೇ ಈ ಬಗ್ಗೆ ತನಿಖೆ ಪ್ರಾರಂಭ ಮಾಡುವುದಾಗಿ ಅಂದೇ ಓಲಾ ಹೇಳಿತ್ತು.
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಪರೀಕ್ಷೆಯ ಅಗತ್ಯವಿದೆ. ಹೀಗಾಗಿ ಒಂದು ನಿರ್ಧಿಷ್ಟ ಬ್ಯಾಚ್ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಸುಮಾರು 1441 ಸ್ಕೂಟರ್ಗಳನ್ನು ಹಿಂಪಡೆಯುತ್ತಿದ್ದೇವೆ. ಅವುಗಳಲ್ಲಿ ಏನು ಸಮಸ್ಯೆಯಿದೆ? ಯಾವ ಕಾರಣಕ್ಕಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ಸಮಗ್ರವಾಗಿ ಪರಿಶೀಲನೆ ಮಾಡಲಾಗುವುದು ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗೆ ಹಿಂಪಡೆದ ಸ್ಕೂಟರ್ಗಳನ್ನೆಲ್ಲ ನಮ್ಮ ಇಂಜಿನಿಯರ್ಗಳು ಪರಿಶೀಲನೆ ಮಾಡಲಿದ್ದಾರೆ. ಬ್ಯಾಟರಿ ವ್ಯವಸ್ಥೆಯಿಂದ ಹಿಡಿದು, ಪ್ರತಿಯೊಂದನ್ನೂ ಪರೀಕ್ಷಿಸಲಾಗುವುದು ಎಂದೂ ಹೇಳಿದೆ.
ಕೇವಲ ಓಲಾ ಅಷ್ಟೇ ಅಲ್ಲ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳ ಕಾರಣದಿಂದ ಒಕಿನಾವಾ ಅಟೋಟೆಕ್ ತನ್ನ 3000 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ವಾಪಸ್ ಪಡೆದಿದೆ. ಹಾಗೇ, ಪ್ಯೂರ್ ಇವಿ ಕೂಡ 2000 ದ್ವಿಚಕ್ರ ವಾಹನಗಳನ್ನು ಹಿಂಪಡೆದಿದೆ. ಕೇಂದ್ರ ಸರ್ಕಾರ ಕೂಡ ಒಂದು ತಜ್ಞರ ಸಮಿತಿ ರಚಿಸಿ, ತಪಾಸಣೆ ನಡೆಸಲು ಸೂಚಿಸಿದೆ. ಅಷ್ಟೇ ಅಲ್ಲ, ಕಂಪನಿಗಳು ನಿರ್ಲಕ್ಷ್ಯ ತೋರಿದರೆ ದಂಡ ವಿಧಿಸುವುದಾಗಿಎಚ್ಚರಿಕೆಯನ್ನೂ ನೀಡಿದೆ.