Omicron: ವಿಶ್ವಾದ್ಯಂತ ಒಮಿಕ್ರಾನ್ ಹರಡುವಿಕೆಗೆ ಕಡಿಮೆ ಲಸಿಕೆ ದರ ಕಾರಣವೇ?; ತಜ್ಞರು ಹೇಳೋದೇನು?

ದಕ್ಷಿಣ ಆಫ್ರಿಕಾ ಸೇರಿದಂತೆ ಬೇರೆ ದೇಶಗಳಲ್ಲಿ ಒಮಿಕ್ರಾನ್ ಅಟ್ಟಹಾಸ ಹೆಚ್ಚಾಗಿರುವುದರಿಂದ ಭಾರತದಲ್ಲೂ ಮತ್ತೆ ಆತಂಕ ಹೆಚ್ಚಾಗಿದೆ. ವಿಶ್ವಾದ್ಯಂತ ಇರುವ ವಿಜ್ಞಾನಿಗಳು ಈ ಮಾರಣಾಂತಿಕ ಒಮಿಕ್ರಾನ್​ ವೈರಸ್​ಗೆ ಲಸಿಕೆ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

Omicron: ವಿಶ್ವಾದ್ಯಂತ ಒಮಿಕ್ರಾನ್ ಹರಡುವಿಕೆಗೆ ಕಡಿಮೆ ಲಸಿಕೆ ದರ ಕಾರಣವೇ?; ತಜ್ಞರು ಹೇಳೋದೇನು?
ಕೊವಿಡ್ ಲಸಿಕೆ
Edited By:

Updated on: Nov 29, 2021 | 4:51 PM

ನವದೆಹಲಿ: ಈಗಾಗಲೇ ಒಂದೂವರೆ ವರ್ಷದಿಂದ ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಕೊವಿಡ್ ಲಸಿಕೆ ವಿವರಣೆ ಮಾಡಿದ ನಂತರವೂ ಭಾರತದಲ್ಲಿ ಮತ್ತೆ ಒಮಿಕ್ರಾನ್ ರೂಪಾಂತರಿ ವೈರಸ್ ಪ್ರಾಣ ಭೀತಿ ಹೆಚ್ಚಿಸಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಅದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಸೇರಿದಂತೆ ಬೇರೆ ದೇಶಗಳಲ್ಲಿ ಒಮಿಕ್ರಾನ್ ಅಟ್ಟಹಾಸ ಹೆಚ್ಚಾಗಿರುವುದರಿಂದ ಭಾರತದಲ್ಲೂ ಮತ್ತೆ ಆತಂಕ ಹೆಚ್ಚಾಗಿದೆ. ವಿಶ್ವಾದ್ಯಂತ ಇರುವ ವಿಜ್ಞಾನಿಗಳು ಈ ಮಾರಣಾಂತಿಕ ಒಮಿಕ್ರಾನ್​ ವೈರಸ್​ಗೆ ಲಸಿಕೆ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಹಿರಿಯ ಸಂಶೋಧಕರಾದ ಮೆರು ಶೀಲ್ ಹೇಳಿರುವ ಪ್ರಕಾರ, ಒಮ್ಮೆ ವೈರಸ್​ಗಳು ದೇಹವನ್ನು ಪ್ರವೇಶಿಸಿದ ನಂತರ ವೈರಸ್​ಗಳ ಪ್ರತಿಗಳನ್ನು ಹರಡುತ್ತವೆ. ಕೊರೋನಾವೈರಸ್‌ ಆರಂಭದಿಂದಲೂ ನಿರಂತರವಾಗಿ ರೂಪಾಂತರಗೊಳ್ಳುತ್ತಾ ತನ್ನ ಮೂಲ ರೂಪಕ್ಕಿಂತ ಹೆಚ್ಚು ಶಕ್ತಿ ಪಡೆದುಕೊಳ್ಳುತ್ತಾ ಬರುತ್ತಿದೆ. ಲಸಿಕೆ ಪಡೆಯದ ಜನರು ಈ ವೈರಸ್‌ ಇನ್ನಷ್ಟು ರೂಪಾಂತರಗೊಳ್ಳಲು ಕಾರಣರಾಗುತ್ತಾರೆ. ಹೀಗಾಗಿ, ಕೊರೊನಾ ಲಸಿಕೆ ದರ ಕಡಿಮೆಯಾಗಿರುವುದೇ ಒಮಿಕ್ರಾನ್ ಸೋಂಕಿನ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಓಮಿಕ್ರಾನ್ ಪ್ರಭೇದದ ವೈರಸ್ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವುದರಿಂದ ಜಗತ್ತಿನಲ್ಲಿ ಮತ್ತೊಂದು ಕೊರೊನಾ ಅಲೆಗೆ ಕಾರಣವಾಗಬಹುದು ಎಂಬ ಭಯ, ಭೀತಿ ಎಲ್ಲ ದೇಶಗಳಿಗೂ ಇದೆ. ಹೀಗಾಗಿ ಈ ಹೊಸ ಪ್ರಭೇದದ ವೈರಸ್ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್, ನೆದರ್ ಲ್ಯಾಂಡ್, ಇಸ್ರೇಲ್, ಈಜಿಪ್ಟ್ ದೇಶಗಳಿಗೆ ಪ್ರಮುಖ ದೇಶಗಳು ವಿಮಾನ ಸಂಚಾರ ನಿಷೇಧಿಸುತ್ತಿವೆ. ಆದರೆ ಈ ತೀರ್ಮಾನ ಸಮರ್ಥನೀಯವಲ್ಲ ಎಂದು ದಕ್ಷಿಣ ಆಫ್ರಿಕಾ ಹೇಳಿದೆ.

ಜನರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಲಸಿಕೆ ದೊರೆತಿರುವುದರಿಂದಲೇ ಕೊರೋನಾ ವೈರಸ್‌ ರೂಪಾಂತರಗೊಂಡು ಒಮಿಕ್ರಾನ್‌ ತಳಿ ಸೃಷ್ಟಿಯಾಗಿದೆ. ನಾವು ಆಧುನಿಕ ವಿಧಾನದ ಮೂಲಕ ಹೊಸ ತಳಿಯನ್ನು ಬೇಗ ಪತ್ತೆಹಚ್ಚಿ ಜಗತ್ತಿಗೆ ತಿಳಿಸಿದ್ದಕ್ಕೆ ಈಗ ಜಗತ್ತು ನಮಗೇ ಶಿಕ್ಷೆ ನೀಡುತ್ತಿದೆ ಎಂದು ದಕ್ಷಿಣ ಆಫ್ರಿಕಾ ಮುಂತಾದ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ.

ಕೊರೋನಾವೈರಸ್‌ ಆರಂಭದಿಂದಲೂ ನಿರಂತರವಾಗಿ ರೂಪಾಂತರಗೊಳ್ಳುತ್ತಾ ತನ್ನ ಮೂಲ ರೂಪಕ್ಕಿಂತ ಹೆಚ್ಚು ಶಕ್ತಿ ಪಡೆದುಕೊಳ್ಳುತ್ತಾ ಬರುತ್ತಿದೆ. ಲಸಿಕೆ ಪಡೆಯದ ಜನರು ಈ ವೈರಸ್‌ ಹೆಚ್ಚೆಚ್ಚು ರೂಪಾಂತರಗೊಳ್ಳಲು ಕಾರಣರಾಗುತ್ತಾರೆ. ಕೊರೋನಾವೈರಸ್‌ನ ಲಕ್ಷಣವೆಂದರೆ ಅದರ ಕೊಂಬಿನಂತಹ ಪ್ರೊಟೀನ್‌ ಕೋಶಗಳು ಮನುಷ್ಯನ ಜೀವಕೋಶದೊಳಗೆ ಹೊಕ್ಕು ಸೋಂಕು ಹರಡುತ್ತವೆ. ಲಸಿಕೆಗಳು ಈ ಕೊಂಬುಗಳನ್ನೇ ಗುರಿಯಾಗಿಸಿಕೊಂಡು ವೈರಸ್‌ ಹರಡುವುದನ್ನು ತಡೆಯುತ್ತವೆ. ಲಸಿಕೆ ಪಡೆಯದ ವ್ಯಕ್ತಿಯ ದೇಹದೊಳಗೆ ವೈರಸ್‌ ಹೊಕ್ಕಿದರೆ ಅದು ಜೀವಕೋಶಗಳನ್ನು ಆಕ್ರಮಿಸಿಕೊಳ್ಳುತ್ತದೆ. ನಂತರ ತನ್ನ ಸಾವಿರಾರು ಪ್ರತಿರೂಪಗಳನ್ನು ಸೃಷ್ಟಿಸತೊಡಗುತ್ತದೆ. ಪ್ರತಿರೂಪವನ್ನು ಸೃಷ್ಟಿಸುವಾಗ ಏನಾದರೂ ತಪ್ಪಾದರೆ ಹೊಸ ತಳಿಯೊಂದು ಸೃಷ್ಟಿಯಾಗುತ್ತದೆ. ಈ ಹೊಸ ತಳಿಯು ಸುಲಭವಾಗಿ ಇನ್ನೊಂದು ದೇಹಕ್ಕೆ ಪ್ರವೇಶಿಸುತ್ತದೆ. ಕ್ರಮೇಣ ಅದರ ಸಂತತಿ ಹೆಚ್ಚುತ್ತದೆ.

ಜಗತ್ತಿನಲ್ಲಿ ಈಗ ಕೊರೊನಾ ವೈರಸ್‌ ನ ಹೊಸ ಪ್ರಭೇದ ಬಿ.1.1.529 ವೈರಸ್ ಅನ್ನು ಓಮಿಕ್ರಾನ್ ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. ಈ ಹೊಸ ಪ್ರಭೇದದ ವೈರಸ್ ಈಗಾಗಲೇ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ದಕ್ಷಿಣ ಆಫ್ರಿಕಾದಿಂದ ಹಿಡಿದು ಯುರೋಪ್​ವರೆಗೆ, ಯುರೋಪ್​ನಿಂದ ಹಿಡಿದು ಅಮೆರಿಕಾ, ಭಾರತದವರೆಗೆ ಎಲ್ಲ ರಾಷ್ಟ್ರಗಳು ಹೊಸ ಪ್ರಭೇದದ ಓಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆೆ ಕೇಳಿ ನಡುಗಿ ಹೋಗಿವೆ. ಹೊಸ ಪ್ರಭೇದದ ಓಮಿಕ್ರಾನ್ ಆರ್ಥಿಕವಾಗಿಯೂ ಭಾರತ ಮಾತ್ರವಲ್ಲದೆ, ಅನೇಕ ದೇಶಗಳಲ್ಲಿ ಭಾರೀ ನಷ್ಟವನ್ನೇ ಉಂಟು ಮಾಡಿದೆ. ಇದನ್ನು ಮೂಲತಃ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಹಚ್ಚಲಾಗಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ‘ಕಳವಳಕಾರಿ ರೂಪಾಂತರ ಪ್ರಭೇದ’ ಎಂದು ವರ್ಗೀಕರಿಸಿದೆ. ಪ್ರಸ್ತುತ ಡೆಲ್ಟಾ ಪ್ರಭೇದ ಸೇರಿದಂತೆ ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ದಕ್ಷಿಣ ಆಫ್ರಿಕಾದ ಆಚೆಗೆ ಹರಡುವ ಬಗ್ಗೆ ಕಳವಳಗಳು ಇರುವುದರಿಂದ ಹಲವಾರು ದೇಶಗಳು ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಸುತ್ತಲಿನ ದೇಶಗಳಿಗೆ ವಿಮಾನ ಸಂಚಾರ ನಿಷೇಧಿಸಿವೆ.

ಈ ಹೊಸ ಪ್ರಭೇದವು ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾ, ಬೋಟ್ಸ್ ವಾನ, ಇಸ್ರೇಲ್, ಹಾಂಗ್ ಕಾಂಗ್, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್​ನಲ್ಲಿ ಪತ್ತೆಯಾಗಿದೆ. ಹೊಸ ಪ್ರಭೇದದ ವೈರಸ್ ಈಗ ದಕ್ಷಿಣ ಆಫ್ರಿಕಾದ ಪ್ರತಿಯೊಂದು ಪ್ರಾಂತ್ಯಕ್ಕೂ ಹರಡಿದೆ ಎಂದು WHO ಹೇಳಿದೆ.

ಡೆಲ್ಟಾ ಪ್ರಭೇದದ ವೈರಸ್ 16 ರೂಪಾಂತರಗಳನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಆದರೆ, ಹೊಸ ಪ್ರಭೇದ ಓಮಿಕ್ರಾನ್ 32 ರೂಪಾಂತರ ಹೊಂದುವ ಸಾಮರ್ಥ್ಯ ಹೊಂದಿದೆ. ಜಗತ್ತಿನಲ್ಲಿ ಈಗಾಗಲೇ ಸಂಶೋಧನೆಯಾಗಿ ಬಳಕೆಯಲ್ಲಿರುವ ಕೊರೊನಾ ಲಸಿಕೆಗಳು ಡೆಲ್ಟಾ ಪ್ರಭೇದದ ವಿರುದ್ಧ ಪರಿಣಾಮಕಾರಿಯಾಗಿವೆ. ಆದರೇ ಓಮಿಕ್ರಾನ್ ಪ್ರಭೇದದ ವಿರುದ್ಧ ಕೊರೊನಾ ಲಸಿಕೆಗಳು ಪರಿಣಾಮಕಾರಿಯಾಗಿರಲ್ಲ. ಕೊರೊನಾ ಲಸಿಕೆಗಳು ಹಾಗೂ ಪ್ರತಿಕಾಯಗಳಿಂದ ಎಸ್ಕೇಪ್ ಆಗುವ ಸಾಮರ್ಥ್ಯವನ್ನು ಓಮಿಕ್ರಾನ್ ಪ್ರಭೇದದ ವೈರಸ್ ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೂ, ಈ ಬಗ್ಗೆ ಇನ್ನೂ ಸ್ಪಲ್ಪ ಅಧ್ಯಯನ, ಸಂಶೋಧನೆ ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಒಬ್ಬರಲ್ಲಿ ಒಮಿಕ್ರಾನ್ ಲಕ್ಷಣ; ವರದಿಗಾಗಿ ಕಾಯುತ್ತಿದ್ದೇವೆ: ಬಸವರಾಜ ಬೊಮ್ಮಾಯಿ

ಒಮಿಕ್ರಾನ್ ಭೀತಿ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊವಿಡ್ ಸೋಂಕು ದೃಢ