ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಒಬ್ಬರಲ್ಲಿ ಒಮಿಕ್ರಾನ್ ಲಕ್ಷಣ; ವರದಿಗಾಗಿ ಕಾಯುತ್ತಿದ್ದೇವೆ: ಬಸವರಾಜ ಬೊಮ್ಮಾಯಿ

Omicron Variant: ವಿದೇಶಗಳಿಂದ ಬಂದವರನ್ನ ಪರೀಕ್ಷೆ ಮಾಡಲಾಗಿದೆ. ಕೇರಳದಿಂದ ಬಂದ ಪ್ರತಿಯೊಬ್ಬರಿಗೂ ಟೆಸ್ಟ್​ ಮಾಡಲಾಗ್ತಿದೆ‌. ಒಮಿಕ್ರಾನ್​ ಬಗ್ಗೆ ರಾಜ್ಯದ ಜನ ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಒಬ್ಬರಲ್ಲಿ ಒಮಿಕ್ರಾನ್ ಲಕ್ಷಣ; ವರದಿಗಾಗಿ ಕಾಯುತ್ತಿದ್ದೇವೆ: ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ದಾವಣಗೆರೆ: ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಒಬ್ಬರಲ್ಲಿ ಒಮಿಕ್ರಾನ್ ಲಕ್ಷಣ ಕಂಡುಬಂದಿದೆ. ಒಮಿಕ್ರಾನ್ ಮಾದರಿ ವಿಭಿನ್ನ ಸೋಂಕಿನ ಲಕ್ಷಣ ಕಂಡುಬಂದಿದೆ. ಐಸಿಎಂಆರ್​ಗೆ ಕಳುಹಿಸಿದ್ದೇವೆ, ವರದಿಗಾಗಿ ಕಾಯುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮುಂದೆ ಲಾಕ್​ಡೌನ್ ಮಾಡುವ ಪ್ರಸ್ತಾವನೆ ಇಲ್ಲ. ಒಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮಕೈಗೊಳ್ಳುತ್ತಿದೆ. ಅಲ್ಲದೇ ವಿದೇಶಗಳಿಂದ ಬಂದವರನ್ನ ಪರೀಕ್ಷೆ ಮಾಡಲಾಗಿದೆ. ಕೇರಳದಿಂದ ಬಂದ ಪ್ರತಿಯೊಬ್ಬರಿಗೂ ಟೆಸ್ಟ್​ ಮಾಡಲಾಗ್ತಿದೆ‌. ಒಮಿಕ್ರಾನ್​ ಬಗ್ಗೆ ರಾಜ್ಯದ ಜನ ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕು. ಈ ಬಗ್ಗೆ ನಾವು ನಿರ್ಧಾರ‌ ಕೈಗೊಳ್ಳಲು ಆಗಲ್ಲ. ಶಾಲಾ-ಕಾಲೇಜುಗಳಲ್ಲಿ ಕೊವಿಡ್ ಬಗ್ಗೆ ನಿಗಾಗೆ ಸೂಚಿಸಿದ್ದೇವೆ. ಶಾಲಾ- ಕಾಲೇಜುಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ ಎಂದು ದಾವಣಗೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಮುಂಜಾಗ್ರತೆ ಕುರಿತು ಡಾ. ಬಗಾದಿ ಗೌತಮ್ ಹೇಳಿಕೆ ಕೇರಳದಿಂದ ಬಂದರೆ 72 ಗಂಟೆಯೊಳಗಿನ RTPCR ಕಡ್ಡಾಯ ಆಗಿರಲಿದೆ. ಮಹಾರಾಷ್ಟ್ರ, ಕೇರಳದಿಂದ ಬಂದವರಿಗೆ, ನವೆಂಬರ್ 15 ರಿಂದ 27 ರವರೆಗೆ ಬಂದವರಿಗೆ ಟೆಸ್ಟಿಂಗ್‌ಗೆ ಸೂಚನೆ ನೀಡಲಾಗಿದೆ. ಮೈಸೂರಿನಲ್ಲಿ ಟೆಸ್ಟಿಂಗ್ ಟಾರ್ಗೆಟ್ 3-5 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಶಾಲಾ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿಕೆ ನೀಡಿದ್ದಾರೆ.

ಕಾವೇರಿ ನರ್ಸಿಂಗ್ ಹಾಸ್ಟೆಲ್ 46, ಜೋಸೆಫ್ ನರ್ಸಿಂಗ್ ಕಾಲೇಜ್ 29, ಮೈಸೂರಿನಲ್ಲಿ ಒಟ್ಟು 72 ಕೊರೊನಾ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ 2 ಲಕ್ಷ ಜನರಿಗೆ ಎರಡನೇ ಡೋಸ್ ಬಾಕಿ ಇದೆ. ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 1 ಲಕ್ಷ ಬಾಕಿ ಇದೆ. ಮೈಸೂರು ಜಿಲ್ಲೆಯಲ್ಲಿ ಶೇಕಡಾ 35ರಷ್ಟು ಲಸಿಕೆ ನೀಡಿಕೆ ಬಾಕಿಯಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. ಮಕ್ಕಳು, ಹಿರಿಯರ ಹಿತದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡರೆ ಸೋಂಕು ತಗುಲುವ ಸಾಧ್ಯತೆ ಕಡಿಮೆ. ಆಸ್ಪತ್ರೆಗೆ ದಾಖಲಾದರೂ ಸಾವಿನ ಸಂಭವ ಕಡಿಮೆಯಿರುತ್ತದೆ. ಮೈಸೂರು ಜಿಲ್ಲೆಯಲ್ಲಿ ಲಸಿಕಾಕರಣ ಅಂತಿಮ ಹಂತದಲ್ಲಿದೆ. ಜಿಲ್ಲೆ ಜನರು ಸ್ಪಂದಿಸಿದರೆ ಲಸಿಕೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಒಮಿಕ್ರಾನ್​ ಪ್ರಕರಣ ಪತ್ತೆಯಾಗಿಲ್ಲ. ಪ್ರತಿ ಮನೆಯಲ್ಲೂ ಮೂರು ತಲೆಮಾರಿನ ಜನರು ಇದ್ದಾರೆ. ಹೀಗಾಗಿ ಎಲ್ಲರೂ ಕೊರೊನಾ ವ್ಯಾಕ್ಸಿನ್​​ ಪಡೆಯಬೇಕು. ಶೈಕ್ಷಣಿಕ ಕಾರ್ಯಕ್ರಮ‌ ವರ್ಚುವಲ್​ ಮೂಲಕ ಮಾಡಿ. ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಲಹೆ ನೀಡಿದ್ದಾರೆ.

ಓಮಿಕ್ರಾನ್ ಕುರಿತು ಕಟ್ಟೆಚ್ಚರ ರಾಜ್ಯದಲ್ಲೂ ಕೊರೊನಾ ಒಮಿಕ್ರಾನ್​ ಸೋಂಕಿನ ಭೀತಿ ಇದೆ. ಈ ಮಧ್ಯೆ, ನೆಗೆಟಿವ್ ರಿಪೋರ್ಟ್ ಇಲ್ಲದೆ ಪ್ರಯಾಣಿಕರು ಬಂದ ಹಿನ್ನೆಲೆ ಏರ್​​ಲೈನ್ಸ್​ ಸಿಬ್ಬಂದಿಗೆ DHO, ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ. ದೇವನಹಳ್ಳಿ ಬಳಿಯ ಇರುವ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ನೆಗೆಟಿವ್ ರಿಪೋರ್ಟ್ ಇಲ್ಲದವರನ್ನ ಕರೆತರದಂತೆ ಎಚ್ಚರಿಕೆ ನೀಡಲಾಗಿದೆ. ಫ್ಲೈಟ್ ಹತ್ತುವ ಮುನ್ನ ಕಡ್ಡಾಯವಾಗಿ ವರದಿ ಪರಿಶೀಲಿಸಿ. ನೆಗೆಟಿವ್ ರಿಪೋರ್ಟ್ ಇಲ್ಲದೇ ಸಾಕಷ್ಟು ಜನರು ಬಂದಿದ್ದಾರೆ. ಹೀಗಾಗಿ ನೆಗೆಟಿವ್ ವರದಿ ಕಡ್ಡಾಯ ಪರಿಶೀಲನೆಗೆ ಸೂಚನೆ ಕೊಡಲಾಗಿದೆ.

ಧಾರವಾಡದ SDM ಕಾಲೇಜಿನಲ್ಲಿ ಕೊರೊನಾ ಹೆಚ್ಚಳ ವಿಚಾರ ಹಿನ್ನೆಲೆಯಲ್ಲಿ ಧಾರವಾಡದ ಎಲ್ಲ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದೆ. ಜಿಲ್ಲೆಯ 33 ಹಾಸ್ಟೆಲ್‌ಗಳಲ್ಲಿ 6,000 ವಿದ್ಯಾರ್ಥಿಗಳಿಗೆ ಟೆಸ್ಟ್​ ಮಾಡಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್​​ಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಇಂದಿನಿಂದ ಕೊವಿಡ್​ ಟೆಸ್ಟ್ ಪ್ರಕ್ರಿಯೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ.

ಉತ್ತರ ಕನ್ನಡ ಜಿಲ್ಲೆಯ ರೆಸಾರ್ಟ್, ಹೋಂಸ್ಟೇ, ದೇವಸ್ಥಾನಗಳು, ಪ್ರವಾಸಿಗರ ಜತೆ ಸಂಪರ್ಕ ಹೊಂದಿರುವವರಿಗೆ ಟೆಸ್ಟ್​ ಮಾಡುತ್ತೇವೆ. ಪ್ರತಿ 10 ದಿನಗಳಿಗೊಮ್ಮೆ ಕೊವಿಡ್​ ಟೆಸ್ಟ್​ ಮಾಡುತ್ತೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ನಡೆಸದಂತೆ ಆದೇಶ ನೀಡಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ವಿದ್ಯಾರ್ಥಿಗಳ 15 ದಿನದ ಟ್ರಾವೆಲ್​ ಹಿಸ್ಟರಿ ಪರಿಶೀಲಿಸ್ತೇವೆ. ಮೆಡಿಕಲ್, ನರ್ಸಿಂಗ್ ಕಾಲೇಜಿನ‌ ವಿದ್ಯಾರ್ಥಿಗಳ ಮಾಹಿತಿ ಕಲೆಹಾಕುತ್ತೇವೆ. ಲಸಿಕೆ ಪಡೆಯದವರನ್ನ ಗುರುತಿಸಿ ಲಸಿಕೆ ನೀಡಲಾಗುತ್ತದೆ. 45,000 ಜನರನ್ನ ಪತ್ತೆ ಮಾಡಿ ಲಸಿಕೆ ನೀಡಲಾಗುತ್ತಿದೆ. ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ವರದಿ ಕಡ್ಡಾಯ ಇರಲಿದೆ. ನೆಗೆಟಿವ್​ ರಿಪೋರ್ಟ್ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರಕ್ಕೆ ಸಂಪರ್ಕಿಸುವ 11 ರಸ್ತೆಗಳಲ್ಲಿ ಚೆಕ್​​ಪೋಸ್ಟ್ ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆ, ಪೊಲೀಸ್‌ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಬಬಲೇಶ್ವರ, ತಿಕೋಟಾ, ಚಡಚಣ ಸೇರಿ 11 ಚೆಕ್​​ಪೋಸ್ಟ್ ನಿರ್ಮಿಸಲಾಗಿದೆ. ದಿನದ 24 ಗಂಟೆಗಳ ಕಾಲ ಚೆಕ್​​ಪೋಸ್ಟ್ ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ವಿಜಯಪುರದಲ್ಲಿ ಎಸ್​ಪಿ ಆನಂದ್​ಕುಮಾರ್ ಹೇಳಿಕೆ ನೀಡಿದ್ದಾರೆ.

ಚಾಮರಾಜನಗರದ ವೈದ್ಯಕೀಯ ಕಾಲೇಜಿನ 9 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ. ಚಾಮರಾಜನಗರ ತಾಲೂಕಿನ ಯಡಪುರ ಬಳಿಯ ಕಾಲೇಜಿನಲ್ಲಿ 9 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಸಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಕೊರೊನಾ 3ನೆಯ ಅಲೆ ಮುನ್ನೆಲೆ ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾವನೆ ಇಲ್ಲ -ಸಚಿವ ಡಾ. ಕೆ. ಸುಧಾಕರ್

ಇದನ್ನೂ ಓದಿ: ಕೊರೊನಾ ಭೀತಿ ನಡುವೆ ಇಂದು ದಾವಣಗೆರೆಯಲ್ಲಿ 3 ವಿಐಪಿ ಮದುವೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

Published On - 3:58 pm, Mon, 29 November 21

Click on your DTH Provider to Add TV9 Kannada