
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಕ್ಯಾಬಿನೆಟ್ನಲ್ಲಿ ಕೂಡ ಮಹಿಳೆಯರಿಗೆ ಪ್ರಮುಖ ಇಲಾಖೆಗಳು ಸಿಕ್ಕಿದ್ದನ್ನು ನಾವು ನೋಡಿದ್ದೇವೆ.. ಹಾಗೇ ಅವರು ಮಹಿಳಾ ದಿನಾಚರಣೆಗೂ ವಿಶೇಷ ಪ್ರಾಶಸ್ತ್ಯ ನೀಡುತ್ತ ಬಂದಿದ್ದಾರೆ. ಕಳೆದ ಬಾರಿ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಮಹಿಳಾ ಸಾಧಕಿಯರಿಗಾಗಿ ಬಿಟ್ಟುಕೊಟ್ಟಿದ್ದರು. ಆಯ್ದ ಸಾಧಕಿಯರ ಜೀವನಗಾಥೆಯನ್ನು ಹಂಚಿಕೊಳ್ಳಲು ಮೋದಿಯವರು ಅವಕಾಶ ಮಾಡಿಕೊಟ್ಟಿದ್ದರು. ಈ ಬಾರಿ ಬೆಳಗ್ಗೆಯೇ ಮಹಿಳಾ ದಿನಾಚರಣೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿಯವರು, ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಹಿಳೆಯರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ. ಹಾಗೇ, ಮಹಿಳಾ ಉದ್ಯಮಗಳ ಉತ್ಪನ್ನಗಳನ್ನು ಖರೀದಿಸಿದ್ದಾರೆ.
ಭಾರತದ ಆತ್ಮನಿರ್ಭರದ ದಾರಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಕ್ಕೆ ಹೆಚ್ಚೆಚ್ಚು ಪ್ರಾಶಸ್ತ್ಯ ಸಿಗಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಇಂದು ಖರೀದಿಸಿದ ಮಹಿಳಾ ಉದ್ಯಮಗಳ ಉತ್ಪನ್ನಗಳ ಬಗ್ಗೆ ತಿಳಿಸಿದ್ದಾರೆ. ತಮಿಳುನಾಡಿನ ತೋಡಾ ಬುಡಕಟ್ಟು ಜನಾಂಗದ ಮಹಿಳೆಯರು ಕೈಯಲ್ಲೇ ಕಸೂತಿ ಮಾಡಿದ ಶಾಲುನ್ನು ನಾನು ಇಂದು ಖರೀದಿಸಿದೆ. ತುಂಬ ಅದ್ಭುತವಾಗಿದೆ.. ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಣ್ಣ ಮತ್ತು ಬುಡಕಟ್ಟು ಜನಾಂಗದವರ ಕ್ರಿಯಾಶೀಲತೆಯನ್ನು ಒಳಗೊಂಡ ಗೋಂಡ್ ಪೇಪರ್ ಪೇಂಟಿಂಗ್ನ್ನು ಖರೀದಿಸಿದ್ದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನಾಗಾಲ್ಯಾಂಡ್ನ ಮಹಿಳೆಯ ಸೃಜನಶೀಲತೆಯನ್ನು ತೋರಿಸುವ ಶಾಲ್, ಖಾದಿ ಕಾಟನ್ ಮಧುಬನಿ ಪೇಂಟಿಂಗ್ ಇರುವ ಸ್ಟೋಲನ್ಗಳನ್ನೂ ಇಂದು ಕೊಂಡಿದ್ದಾಗಿ ಮೋದಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದ ಮಹಿಳೆಯರು ಕೈಯಲ್ಲೇ ತಯಾರಿಸಿದ ಸೆಣಬಿನ ಫೈಲ್ ಫೋಲ್ಡರ್ ತುಂಬ ಚೆನ್ನಾಗಿದೆ. ನೀವೂ ಎಲ್ಲರೂ ಇದನ್ನು ಉಪಯೋಗಿಸಬಹುದು ಎಂದು ಹೇಳಿದ ನರೇಂದ್ರ ಮೋದಿ, ನನಗೆ ಗಮುಸಾ ಧರಿಸಲು ತುಂಬ ಇಷ್ಟ. ಇದು ಆರಾಮದಾಯಕವಾಗಿರುತ್ತದೆ. ಹಾಗಾಗಿ ಅಸ್ಸಾಂನ ಕಾಕಟಿಪಾಪುಂಗ ಡೆವಲೆಪ್ಮೆಂಟ್ ಬ್ಲಾಕ್ನ ಹಲವು ಸ್ವಸಹಾಯ ಸಂಘಗಳು ಸೇರಿ ತಯಾರಿಸುವ ಗಮುಸಾವನ್ನೂ ಈ ಬಾರಿ ಮಹಿಳಾ ದಿನಾಚರಣೆಯಂದು ಕೊಂಡಿದ್ದೇನೆ.. ಹಾಗೇ ಕೇರಳ ಮೂಲದ ಮಹಿಳೆಯರು ತಯಾರಿಸುವ ಕ್ಲಾಸಿಕ್ ಪಾಮ್ ಕ್ರಾಫ್ಟ್ ನಿಲಾವಿಲಕ್ಕು ಕೂಡ ತೆಗೆದುಕೊಂಡೆ ಎಂದೂ ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ಸದಾ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತ ಬಂದಿದ್ದಾರೆ. ಉಜ್ವಲಾ ಯೋಜನೆ ಸೇರಿ ಮಹಿಳೆಯರಿಗೆ ಅನುಕೂಲ ಆಗುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.