International Women’s Day | ಮಹಿಳೆಯ ದಿನಚರಿಯೇ ಸವಾಲುಗಳ ಗುಚ್ಛ.. Choose To Challenge ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ !
Women's Day 2021: ಹೆಣ್ಣು ಅಂದರೆ ಸಾಮಾನ್ಯಳಲ್ಲ. ಬೆಳ್ಳಿಗ್ಗೆಯಿಂದ ಸಂಜೆಯವರೆಗೆ ದುಡಿದು, ಮನೆಯವರನ್ನು ನೋಡಿಕೊಳ್ಳುತ್ತಾಳೆ. ಊಂ.. ಹೂಂ... ಹೇಳುವ ಭಾಗ್ಯ ಆಕೆಯ ಪಾಲಿಗೆ ತೀರ ಅಪರೂಪವಾಗಿ ಬಿಟ್ಟಿದೆ.
ಮತ್ತೊಂದು ಮಹಿಳಾ ದಿನಾಚರಣೆ (International Women’s Day) ಬಂದಿದೆ. ಈ ಬಾರಿ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶ್ವಸಂಸ್ಥೆ ನೀಡಿದ ಘೋಷವಾಕ್ಯ , ‘ಸವಾಲುಗಳನ್ನು ನೀಡಲು ಅಣಿಯಾಗು’ ( Choose To Challenge). ಹಾಗೆ ನೋಡಿದರೆ ಮಹಿಳೆಯೊಬ್ಬಳ ದಿನಚರಿಯೇ ಅನೇಕ ಸವಾಲುಗಳಿಂದ ಕೂಡಿರುವಂಥದ್ದು. ಪುರುಷನಂತೆ ಆಕೆಯ ದಿನದಲ್ಲಿರುವುದು 24 ಗಂಟೆಗಳೇ. ಆಕೆಗೂ 2 ಕೈಗಳೇ ಇರುವುದು. ಆದರೆ ಆಕೆಯ ಕೆಲಸ-ಕಾರ್ಯಗಳು ಗಡಿಯಾರದ ಮುಳ್ಳಿನೊಂದಿಗೇ ನಡೆಯುತ್ತವೆ. ಅವಳ ಕಾರ್ಯ ಬಾಹುಳ್ಯ ಮನೆ, ಕಛೇರಿ, ಉದ್ಯೋಗ, ಸಂಘ-ಸಂಸ್ಥೆಗಳು, ವ್ಯಾಪಾರ, ವಹಿವಾಟು, ತಿರುಗಾಟ, ಕ್ರೀಡೆ, ಯೋಗ, ವ್ಯಾಯಾಮ, ಕಲೆ, ಸಂಗೀತ ಮೊದಲಾಗಿ ವಿಸ್ತರಿಸುತ್ತ ಹೋಗುತ್ತದೆ. ಅನೇಕ ಬಾರಿ ಇವುಗಳಲ್ಲಿ ಅನೇಕ ಕೆಲಸಗಳನ್ನು ಅವಳು ಒಂದರ ಹಿಂದೆ ಒಂದರಂತೆ ದಣಿವಿರದೆ ಮಾಡುತ್ತಿರುತ್ತಾಳೆ. ಈ ಗುಣ ಮಹಿಳೆಗೆ ಅಂತರ್ಗತವಾಗಿರುವಂಥದ್ದು. ಇದರಿಂದಲೇ ಆಕೆ ಯಾವುದೇ ಸವಾಲನ್ನು ಎದುರಿಸಲು ಸಿದ್ಧಳೂ, ಶಕ್ತಳೂ ಆಗಿರುತ್ತಾಳೆ. 2021ರ ಮಹಿಳಾ ದಿನಾಚರಣೆಯ ಘೋಷವಾಕ್ಯದ ಸೀಮಿತ ಅರ್ಥದಲ್ಲಿ ಬಹಳ ತಡವಾಗಿ ಅದನ್ನು ಗುರುತಿಸುತ್ತಿದೆ ಎನ್ನಿಸುತ್ತಿದೆ.
ಬಹುತೇಕವಾಗಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಾಧಕಿಯರ ಕುರಿತೇ ನಾವು ಮಾತಾಡುತ್ತೇವೆ. ಇಲ್ಲಿ ಸಾಮಾನ್ಯ ಮಹಿಳೆಗೆ ಸ್ಥಾನವೇ ಇಲ್ಲ. ತೀರ ಇತ್ತೀಚೆಗೆ ಪೌರ ಕಾರ್ಮಿಕರನ್ನು ಸನ್ಮಾನಿಸುವ ಪರಿಪಾಠ ಆರಂಭವಾಗಿದೆ. ದಿನನಿತ್ಯದ ಬದುಕಿನಲ್ಲಿ ಒಬ್ಬ ಸಾಮಾನ್ಯ ಮಹಿಳೆಯೆದುರಿಸುವ ಸವಾಲುಗಳು ಕಡಿಮೆಯೇನಲ್ಲ. 20ನೇ ಶತಮಾನದ ಕೊನೆಯ ದಶಕದಲ್ಲಿ ‘ ಎಚ್ಚೆತ್ತ ಮಹಿಳೆ’, ‘ ಜಾಗೃತ ಮಹಿಳೆ’ ಎಂಬ ಹಣೆಪಟ್ಟಿಯನ್ನು ಕಟ್ಟಿ ಸಾಮಾನ್ಯ ಮಹಿಳೆಯನ್ನು ಈ ವಲಯದಿಂದ ದೂರ ಇಡಲಾಯಿತು. ಇದರಿಂದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಅಪಾರ ಸಂಖ್ಯೆಯ ಮಹಿಳೆಯರ ಬದುಕಿನ ಬವಣೆಗಳು, ಸವಾಲುಗಳು ಹೇಳತೀರದ ನೋವು, ದುಃಖಗಳು ಸಾರ್ವಜನಿಕವಾಗಿ ಗುರುತಿಸಲ್ಪಡಲಿಲ್ಲ. 21ನೇ ಶತಮಾನದ ಆರಂಭದ ದಶಕ ಇಂಥ ಸಾಮಾನ್ಯ ಮಹಿಳೆಯರ ಪಾಲಿಗೆ ಸುವರ್ಣಯುಗ ಎಂತಲೇ ಹೇಳಬೇಕು. ಅನೇಕ ಸಂಘ-ಸಂಸ್ಥೆಗಳು, ವೈಯುಕ್ತಿಕ ವಾಗಿಯೂ ಇಂಥ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳ ಪ್ರಯತ್ನಿಸಿದರು. ಇದರಿಂದ ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿತು. ಇದರ ಪರಿಣಾಮವಾಗಿ ಉಂಟಾದ ಸಂಚಲನ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಹಾದಿಯನ್ನು ನಿಚ್ಚಳಗೊಳಿಸಿತು.
2012 ರವರೆಗೂ ಈ ಸಾಮಾನ್ಯ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾಮಾಜಿಕವಾಗಿ ಹೆಚ್ಚು ಹೆಚ್ಚು ಕಾಣತೊಡಗಿದರು. ಪುರುಷ ವರ್ಗ ನಿಬ್ಬೆರಗಾಗಿ ನೋಡುವಂತೆ ಇವರು ಮುಂದುವರೆದರು; ಬೆಳೆದರು. ಈ ದಶಕ ಸಾಮಾನ್ಯ ಮಹಿಳೆಯರೂ ಅಸಾಮಾನ್ಯವಾದದ್ದನ್ನು ಸಾಧಿಸಬಲ್ಲರು ಎಂಬುದನ್ನು ಢಾಳಾಗಿ ನಿರೂಪಿಸಿತು. ಅಲ್ಲಿಂದ ಮುಂದಿನ ಅರ್ಧ ದಶಕ ಮಹಿಳೆಯ ಪಾಲಿಗೆ ಅವಳ ಅಸ್ಮಿತೆಯ ಪ್ರಶ್ನೆಯಾಯಿತು. ಅವಳ ಅಸ್ತಿತ್ವವನ್ನೇ ಹತ್ತಿಕ್ಕುವ, ಹೊಸಕಿ ಹಾಕುವ ಕ್ರೂರ, ಅಮಾನುಷ ಪ್ರಯತ್ನಗಳು ನಿರಂತರವಾದವು. ಇದು 2020ರ ಆರಂಭದವರೆಗೂ ನಡೆಯಿತು ಎಂದರೆ ತಪ್ಪಾಗಲಾರದು. ಮಾರ್ಚ್ ತಿಂಗಳಲ್ಲಿ ಕೊರೊನಾಘಾತದಿಂದ ಭಾರತವೂ ತತ್ತರಿಸಿ ಹೋಯಿತು. ಆ ವರ್ಷದ ಘೋಷವಾಕ್ಯ ‘ ಸಮಾನತೆ- ಮಹಿಳಾ ಹಕ್ಕುಗಳ ಅರಿವಿನ ಹಿನ್ನೆಲೆಯಲ್ಲಿ’. ಆದರೆ ಆ ವರ್ಷವನ್ನು ಕೊರೊನಾ ನುಂಗಿ ಹಾಕಿತು.
ಮಹಿಳೆಯರಿಗೆ ಈಗ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಅರಿವಿದೆ. ಅವರು ತಮ್ಮ ನೆಲೆಗಳಲ್ಲಿ ಸಾಮಾಜಿಕ, ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳಲು ಸಿದ್ಧರಿದ್ದಾರೆ. ಇದಕ್ಕಾಗಿ ಎಂತಹ ತ್ಯಾಗಕ್ಕೂ ಹಾಗೂ ಎಂತಹ ಶ್ರಮಕ್ಕೂ ಅವರು ತಯಾರು. ಇದಕ್ಕೆ ಕೃಷಿಯಾದಿಯಾಗಿ ಯಾವ ಕ್ಷೇತ್ರಗಳೂ ಹೊರತಲ್ಲ. ಈ ವರ್ಷ ಇಂಥ ಸಾಮಾನ್ಯ ಮಹಿಳೆಯರ ವರ್ಷವಾಗಲಿ ಎಂಬುದು ನನ್ನ ಹಾರೈಕೆ. ಅವರ ದಿನನಿತ್ಯದ ಸವಾಲುಗಳು ಗಣನೆಗೇ ಬಾರದಾಗಿವೆ. ಬೆಳಗಿನ 5 ಗಂಟೆ. ಅಲಾರಂ ಕಿಣಿಕಿಣಿಸುವುದಕ್ಕೆ ತುಸು ಮೊದಲೇ ಎಚ್ಚರವಾಗಿದ್ದರೂ ಅವಳು ಹಾಸಿಗೆಯಲ್ಲಿ ಹಾಗೇ ಹೊರಳಾಡುತ್ತಿರುತ್ತಾಳೆ. ಇದಕ್ಕೆ ಕಾರಣ ಹಿಂದಿನ ರಾತ್ರಿ 12 ರವರೆಗೆ ದೋಸೆ ಹಿಟ್ಟು ರುಬ್ಬಿ, ಬಟ್ಟೆ ತೊಳೆದು ಒಣಗಿಸಿ, ಸಾರಿಗೆ, ಪಲ್ಯಕ್ಕೆ ತರಕಾರಿ ಹೆಚ್ಚಿಕೊಂಡು ಮಲಗಿದ್ದಳು. ಹಾಗಾಗಿ ನಿದ್ದೆಯಿನ್ನೂ ತಿಳಿವಾಗಿಲ್ಲ. ಆದರೂ ಏಳಲೇಬೇಕು. 7ಗಂಟೆಗೆ ಮಕ್ಕಳ ಸ್ಕೂಲ್ ವ್ಯಾನ್ ಮನೆ ಮುಂದೆ ಬಂದು ನಿಲ್ಲುವಷ್ಟರಲ್ಲಿ ಅವರನ್ನು ರೆಡಿ ಮಾಡಿ ಡಬ್ಬಿ ಕಟ್ಟಬೇಕು. 8ಗಂಟೆಗೆ ಹೊರಡುವ ಯಜಮಾನರಿಗೂ ಊಟದ ಡಬ್ಬಿ, ಅವರ ಬಟ್ಟೆ ಇಸ್ತ್ರಿ ಎಲ್ಲ ಆಗಬೇಕು. ಆನಂತರ ತಾನು ಸ್ನಾನ, ಪೂಜೆ ಮುಗಿಸಿ ಡಬ್ಬಿ ಕಟ್ಟಿಕೊಂಡು ಆಫೀಸಿಗೆ ಓಡಬೇಕು. 9 ಗಂಟೆಗೆ ಬಸ್ ಸ್ಟ್ಯಾಂಡಿನಲ್ಲಿರದಿದ್ದರೆ ಬಸ್ಸೂ ಮಿಸ್ಸಾಗಿ ಆಫೀಸಿನಲ್ಲೂ ಬೈಗುಳ ತಿನ್ನಬೇಕು.
ಇದು ಅವಳ ಹಾಗೂ ಅವಳಂತಹ ಸಹಸ್ರಾರು ಹೆಂಗಳೆಯರ ಜೀವನ ಚರಿ. ಪಟ್ಟಣಗಳಿಗೆ, ಶಹರಗಳಿಗೆ ಮೀಸಲಾಗಿದ್ದ ಈ ದಿನಚರಿ ಇಂದು ಸಣ್ಣ ಊರು, ಹಳ್ಳಿಗಳನ್ನೂ ತಲುಪಿದೆ!! ಅವರೆಲ್ಲರಿಗೂ ಗಡಿಯಾರದ ಮುಳ್ಳನ್ನು ಕಾಲಿಗೆ, ಕೈಗೆ ಸಿಕ್ಕಿಸಿಕೊಂಡು ಕೆಲಸ ಮಾಡುವುದು ಎಷ್ಟು ರೂಢಿಯಾಗಿಬಿಟ್ಟಿದೆ ಎಂದರೆ ದಿನವೂ ಗಡಿಯಾರವನ್ನು ಎದುರಿಗಿಟ್ಟುಕೊಂಡು ನೋಡುತ್ತಿದ್ದರೆ ಆಯಾ ಸಮಯಕ್ಕೆ ಅದೇ ಕೆಲಸವನ್ನು ಅವರು ದಿನವೂ ಮಾಡುತ್ತಿರುತ್ತಾರೆ. ಆದರೆ ಪ್ರತಿದಿನವೂ ಅವರಲ್ಲಿ ತಪ್ಪದೇ ಕಾಣುವ ವಿಶೇಷವೆಂದರೆ ಬತ್ತದ ಅದೇ ಉತ್ಸಾಹ, ಅದೇ ಲವಲವಿಕೆ, ಅದೇ ನಿಯತ್ತು!!
ಮನೆಯಲ್ಲಿ ಎಲ್ಲದಕ್ಕೂ ‘ಅವಳೇ’ ಬೇಕು ಅವರಿಗೆಲ್ಲ ಇರುವುದು ಎರಡು ಕಾಲು, ಎರಡು ಕೈಗಳೇ. ಆದರೂ ನಾಲ್ಕು ಜನ ಸೇರಿ ಮಾಡಿಬಿಡುವ ಕೆಲಸವನ್ನು ಅವರೊಬ್ಬರೇ ಪ್ರತಿದಿನವೂ ಹೇಗೆ ಮಾಡುತ್ತಾರೆ ಎನ್ನುವುದೇ ಸೋಜಿಗ. ಮನೆಯ ಎಲ್ಲರ ಅಹವಾಲೂ ಅವರು ಬಳಿಯೇ. ” ಅಮ್ಮಾ, ನನ್ನ ಪೆನ್ನು…” ಮಗಳು ರಾಗ ಎಳೆದರೆ, ” ಅಮ್ಮಾ ನನ್ನ ಜಾಮೆಟ್ರಿ ಬಾಕ್ಸ್..” ಮಗನ ಕೂಗು. ” ಅದಕ್ಕೆ ರಾತ್ರಿ ಎಲ್ಲಾ ಜೋಡಿಸಿಟ್ಟು ಕೊಳ್ಳೋ ಅಂದ್ರೆ ಕೇಳೋದಿಲ್ಲ. ಬೆಳಿಗ್ಗೆ ನನ್ನ ಜೀವ ತಿಂತೀರಿ. ನಿಮ್ಮ ಕಾಲದಲ್ಲಿ ನನಗೆ ದಿನಾ ಆಫೀಸಿಗೆ ಲೇಟು…” ಗದರುತ್ತಲೇ ಎಲ್ಲವನ್ನೂ ಧಾವಂತದಲ್ಲಿ ಹುಡುಕಿ ಕೊಡುತ್ತಾಳೆ. ” ಲೇ, ಬಟ್ಟೆ ಇಸ್ತ್ರಿ ಮಾಡೇ ಇಲ್ವಲ್ಲೇ..” ಯಜಮಾನರ ಆರೋಪ. ” ರಾತ್ರಿ ಮಾಡಿ ಇಡ್ತೀನಿ ಅಂದ್ರೆ ಬೆಳಿಗ್ಗೆ ಗರಿಗರಿ ಇರೋಲ್ವಂತೆ. ನಂಗೇನು ನಾಕು ಕೈಯಾ ಇರೋದು…” ಅಂತ ಜೋರು ದನಿಯಲ್ಲಿ ಹೇಳಿದರೂ ಎಲ್ಲ ಕೆಲಸಗಳನ್ನೂ ಮಾಡಿ ಮುಗಿಸುತ್ತಾಳೆ.
ಈಗ 8 ಗಂಟೆಯ ಸಮಯ. ಮನೆಯಲ್ಲಿ ಗದ್ದಲವೇ ಇಲ್ಲ. ಆದರೆ ಅವಳು ಹಾಯಾಗಿ ತನ್ನ ಕೆಲಸಗಳನ್ನು ಮಾಡಿಕೊಳ್ಳುವಂತಿಲ್ಲ. ಬಸ್ಸು ಅವಳನ್ನು ಕರೆಯುತ್ತದೆ. ಮನೆಯ ಎಲ್ಲರ ಅಗತ್ಯಗಳನ್ನು ಪೂರೈಸಿದ ಅವಳ ಅಗತ್ಯಗಳನ್ನು ಪೂರೈಸುವುದಿರಲಿ, ಕೇಳುವುದಕ್ಕೂ ಮನೆಯಲ್ಲಿ ಯಾರೂ ಇಲ್ಲ. ತನ್ನ ಡಬ್ಬಿಯನ್ನು ತಾನೇ ಕಟ್ಟಿಕೊಂಡು, ಚುರುಗುಡುವ ಹೊಟ್ಟೆ ಹೊತ್ತುಕೊಂಡೇ ಬಸ್ಸಿಗೆ ಓಡುತ್ತಾಳೆ. ಗಿಜಿಗುಡುವ ಬಸ್ಸಿನಲ್ಲಿ ತೂಗಿಕೊಂಡೇ ಹೋದರೂ, ಅಂತೂ ಬಸ್ಸು ಸಿಕ್ಕಿತಲ್ಲ ಎಂಬ ಸಮಾಧಾನ ಅವಳದು. ಯಜಮಾನರು ಬೈಕನ್ನೇರಿ ಭರ್ರನೇ ಹೋಗಿ ಬಿಡುತ್ತಾರೆ. ಆದರೆ ಅವರ ಸಂಗಡ ಸವಾರಿ ಮಾಡುವ ಭಾಗ್ಯ ಅವಳಿಗಿಲ್ಲ. ಏಕೆಂದರೆ ಅವಳ ಕೆಲಸವೇ ಅಷ್ಟು ಹೊತ್ತಿಗೆ ಮುಗಿದಿರುವುದಿಲ್ಲ. ಹಾಗಾಗಿ ಅವಳಿಗೆ ಬಸ್ಸಿನ ತೂಗುಯ್ಯಾಲೆಯೇ ಗತಿ.
ಕಛೇರಿಯನ್ನು ತಲುಪಿದ ಕೂಡಲೇ ಮೊದಲು ಮಾಡುವ ಕೆಲಸ ಗಬಗಬನೆ ಒಂದಷ್ಟು ತಿನ್ನುವುದು. ನಂತರ ಕೆಲಸದ ಕಡೆ ಗಮನ ಹರಿಸಿದರೆ ಸಂಜೆ ಬಸ್ಸಿನ ವೇಳೆಯಾಗುವ ತನಕ ಆಕೆಯದು ಬೇರೆಯದೇ ಲೋಕ. ಬಸ್ಸಿನಲ್ಲಿ ತೂಗಿಕೊಂಡೇ ಬಂದು ಮನೆ ತಲುಪಿದರೆ ಮುಸುರೆಯ ಪಾತ್ರೆ-ಪಗಡೆಗಳು, ತೊಳೆಯಬೇಕಾದ ಬಟ್ಟೆಗಳು ಕಾಯುತ್ತಿರುತ್ತವೆ. ಅವಕ್ಕೆ ಒಂದು ಗತಿ ಕಾಣಿಸುವಷ್ಟರಲ್ಲಿ ರಾತ್ರಿಯ ಊಟದ ಸಿದ್ಧತೆ, ನಾಳಿನ ತಯಾರಿ. ಅದೇ ಚರ್ವಿತ ಚರ್ವಣ. ಆದರೂ ಆಕೆಗೆ ಪ್ರತಿದಿನವೂ ಹೊಸದಿನ. ದಿನವೂ ತಿಂಡಿ , ಅಡುಗೆ ಬೇರೆಯದೇ. ಅದನ್ನೆಲ್ಲ ಯೋಜಿಸಿ ಸರಿಯಾಗಿ ಕಾರ್ಯರೂಪಕ್ಕೆ ತರುವುದು ಆಕೆಗೆ ಉಸಿರಾಡುವಷ್ಟೇ ಸಹಜ.
ದಣಿವೂ ಇಲ್ಲ..ವಿರಾಮವೂ ಇಲ್ಲ ಒಂದು ಸಣ್ಣ ಕಾರ್ಖಾನೆಯೋಪಾದಿಯಲ್ಲಿ ಆಕೆಯ ದೈನಂದಿನ ಚಟುವಟಿಕೆ ನಡೆದಿದ್ದರೂ ಆಕೆಗೆ ದಣಿವೂ ಇಲ್ಲ; ವಿರಾಮವೂ ಇಲ್ಲ. ಎಂದೋ ಒಂದು ದಿನ ತೀರಾ ಮನಸ್ಸು ಮುದುಡಿದಾಗ ” ನನ್ನನ್ನೂ ಯಾರಾದರೂ ವಿಚಾರಿಸಿದ್ದರೆ ..ನಾನು ಬಂದಾಗ ಟೀ ಸಿದ್ಧ ಮಾಡಿ ಕೊಟ್ಟರೆ…ಊಟ ಬಡಿಸುವಾಗ ಲೋಟಕ್ಕೆ ನೀರಾದರೂ ಹಾಕಿದ್ದರೆ…. ಒಣಗಿದ ಬಟ್ಟೆಗಳನ್ನಾದರೂ ಒಳ ತಂದಿಟ್ಟಿದ್ದರೆ…..ಮುಂತಾಗಿ ಅನ್ನಿಸಬಹುದೇನೋ. ಉಳಿದಂತೆ ಆಕೆಯದು ಸದಾ ನಿಸ್ವಾರ್ಥ ದುಡಿಮೆ. ಒಂದೊಮ್ಮೆ ಕಛೇರಿಗಳಲ್ಲಿ ಕೆಲಸ ಮಾಡಿದೆ ಮನೆಯನ್ನು ನೋಡಿಕೊಳ್ಳುವವಳಾದರೂ ಆಕೆಯ ದಿನಚರಿಯಲ್ಲಿ ವ್ಯತ್ಯಾಸವೇನೂ ಇಲ್ಲ. ಜೊತೆಗೆ ಮನೆಯಲ್ಲಿ ಇಡೀ ದಿನ ಇದ್ದು ಮಾಡಿದ್ದೇನು….? ಎಂದು ಮೂಗು ಮುರಿಸಿಕೊಳ್ಳುವುದು ತಪ್ಪಿದ್ದಲ್ಲ.
ಅವಳ ನಿಸ್ವಾರ್ಥ ಸೇವೆಗೆ ಬೆಲೆಯೇ ಇಲ್ಲವೆ? ಅವಳದ್ದೇ ಆದ ಬೇಕು- ಬೇಡಗಳಿರುವುದಿಲ್ಲವೇ? ಹೇಗಿದ್ದಿ…. ಬೆಳಗಿನಿಂದ ಏನೇನು ಮಾಡಿದಿ… ಇವತ್ತು ನಾನು ಟೀ ಮಾಡಿ ಕೊಡಲೆ….ಎಂಬ ಪ್ರಶ್ನೆಗಳನ್ನು ಕೇಳಲು ಅವಳ ಕಿವಿಗಳು ಕಾತರಿಸುತ್ತಿರಬಹುದು ಅಥವಾ ಮನೆಯೆಲ್ಲ ಥಳಥಳ ಹೊಳೆಯುತ್ತಿದೆ…ಸಾರು ಬಹಳ ಚೆನ್ನಾಗಿತ್ತು..ಪಲ್ಯ ರುಚಿಯಾಗಿತ್ತು…ಎಂಬ ಸಣ್ಣ ಹೊಗಳಿಕೆಯನ್ನು ಕೇಳಲು ಆಸೆ ಪಡುತ್ತಿರಬಹುದು. ಇವೆಲ್ಲದರ ಜೊತೆಗೆ ವಯೋಸಹಜವಾಗಿ ಕೆಲವು ತೊಂದರೆಗಳು ಕಾಡುತ್ತಿರಬಹುದು. ಮನೆಯ ಸದಸ್ಯರ ಮಾತಿನಲ್ಲಿ ವ್ಯಕ್ತವಾಗುವ ಸಣ್ಣ ಕಳಕಳಿ, ಪ್ರೀತಿ ಅದನ್ನೆಲ್ಲ ಮರೆಸಿ ಆಕೆಯಲ್ಲಿ ಹೊಸ ಉತ್ಸಾಹ ಮೂಡಿಸಬಹುದು. ಆದರೆ ಊಂ.. ಹೂಂ…ಆ ಭಾಗ್ಯ ಆಕೆಯ ಪಾಲಿಗೆ ತೀರ ಅಪರೂಪ.
ಇನ್ನಾದರೂ ಅವಳು ಪಟ್ಟಣ, ಹಳ್ಳಿಗಳೆನ್ನದೆ ಮನೆ ಮನೆಗಳಲ್ಲಿ ದುಡಿಯುವ ಯಂತ್ರ ಮಾತ್ರವಾಗದೇ, ಮನೆಯ ಎಲ್ಲರ ಬೇಡಿಕೆಗಳನ್ನು ಪೂರೈಸುವ ದೇವತೆಯಾಗದೆ, ತನ್ನ ಪಾಲಿನ ಜೀವನವನ್ನು ತನಗಾಗಿ ಬದುಕುವ ಪುಟ್ಟ ಸ್ವಾರ್ಥವನ್ನು ಬೆಳೆಸಿಕೊಳ್ಳಲಿ. ಆಗ ತನ್ನ ಪ್ರಾಮುಖ್ಯತೆಯನ್ನು ಅರಿಯುತ್ತಾಳೆ. ಇತರರೂ ಅದನ್ನು ಗುರುತಿಸುವಂತೆ ಮಾಡುತ್ತಾಳೆ. ಇದು ಅವಳಿಗೆ ದೊರೆಯಬೇಕಾದ ಕನಿಷ್ಠ ಹಕ್ಕು. ಅದು ಆಕೆಗೆ ಸಿಗಬೇಕಲ್ಲವೇ? ಇಂದಿನಿಂದ ಸಾಮಾನ್ಯ ಮಹಿಳೆಯನ್ನೂ ಸೆಲೆಬ್ರಿಟಿಗಳಂತೆ ಕಾಣುವಂತಾಗಲಿ. ತಾರತಮ್ಯ ಮೊದಲು ಮಹಿಳೆ – ಮಹಿಳೆಯ ನಡುವೆ ಇಲ್ಲವಾಗಲಿ..
ಇದನ್ನೂ ಓದಿ: International Women’s Day 2021: ತುರ್ತು ಸಂದರ್ಭದಲ್ಲಿ ಮಹಿಳೆಯರ ಸಹಾಯಕ್ಕೆ ಬರುತ್ತವೆ ಈ ನಾಲ್ಕು ಆ್ಯಪ್ಗಳು!