Women’s Day Special: ಟೇಬಲ್​ ಟೆನ್ನಿಸ್​​ನ ಮಿನುಗುತಾರೆ ಅರ್ಚನಾ ಕಾಮತ್​; ಬೆನ್ನೆಲುಬಾಗಿ ನಿಂತ ತಾಯಿಯ ಹೆಮ್ಮೆಯ ನುಡಿಗಳಿವು..

ಕತಾರ್​ನ ಜೋಹದ್​ನಲ್ಲಿ ಟೂರ್ನಿಮೆಂಟ್ ನಡೆಯುತ್ತಿದೆ. ಮಾರ್ಚ್ 6ರಂದು ಈ ಸ್ಪರ್ಧೆ ಆರಂಭವಾಗಿದ್ದು, ಅರ್ಚನಾ ಕಾಮತ್ ಭಾರತೀಯ ವಿಭಾಗದ ಆಟಗಾರ್ತಿಯಾಗಿ ಇಲ್ಲಿ ಭಾಗವಹಿಸುತ್ತಿದ್ದಾರೆ.

Women's Day Special: ಟೇಬಲ್​ ಟೆನ್ನಿಸ್​​ನ ಮಿನುಗುತಾರೆ ಅರ್ಚನಾ ಕಾಮತ್​; ಬೆನ್ನೆಲುಬಾಗಿ ನಿಂತ ತಾಯಿಯ ಹೆಮ್ಮೆಯ ನುಡಿಗಳಿವು..
ಅರ್ಚನಾ ಕಾಮತ್​
Follow us
preethi shettigar
| Updated By: Lakshmi Hegde

Updated on:Mar 08, 2021 | 3:13 PM

‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನಿವತ್ತೂ  ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಇದು ಟೇಬಲ್​ ಟೆನ್ನಿಸ್​ ಸಾಧಕಿ ಅರ್ಚನಾ ಕಾಮರ್​​ರ ಬಗ್ಗೆ ಅವರ ತಾಯಿ ಹಂಚಿಕೊಂಡ ಅಪರೂಪದ ವಿಷಯಗಳ ಪರಿಚಯ..

ಟೇಬಲ್ ಟೆನಿಸ್ ಲೋಕದಲ್ಲಿ ಪ್ರಿನ್ಸಸ್ ಆಫ್ ದಿ ಪ್ಯಾಡಲ್ ಎಂದೇ ಪರಿಚಿತಾಗಿರುವ ಅರ್ಚನಾ ಈ ಕ್ರೀಡೆಯಲ್ಲಿ ಹಲವು ಮೊದಲುಗಳಿಗೆ ಕಾರಣರಾಗಿದ್ದಾರೆ. 8ನೇ ವಯಸ್ಸಿನಲ್ಲಿಯೇ ಬೆಂಗಳೂರಿನಿಂದ ಟೇಬಲ್ ಟೆನಿಸ್ ರಂಗಕ್ಕೆ ಪದಾರ್ಪಣೆ ಮಾಡಿದ ಅರ್ಚನಾ ಇಂದು ವಿಶ್ವದೆತ್ತರಕ್ಕೆ ಬೆಳೆದಿದ್ದಾರೆ. 2011ರಲ್ಲಿ 12 ಮತ್ತು 18 ವರ್ಷದೊಳಗಿನ ರಾಜ್ಯ ರ‍್ಯಾಂಕಿಂಗ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು, ಗಮನ ಸೆಳೆದಿದ್ದ ಅರ್ಚನಾ 2012ರಲ್ಲಿ ರಾಜ್ಯ ಸಬ್ ಜೂನಿಯರ್ ರ‍್ಯಾಂಕಿಂಗ್ ಅಗ್ರಪಟ್ಟಕ್ಕೆ ಏರಿ ಸಾಧನೆ ಮಾಡಿದ್ದಾರೆ.

ಅರ್ಚನಾ ಗಿರೀಶ್ ಕಾಮತ್  ಜನಿಸಿದ್ದು 2000 ಜೂನ್ 17ರಂದು.  ಕಣ್ಣಿನ ತಜ್ಞರಾದ ಗಿರೀಶ್ ಮತ್ತು ಅನುರಾಧಾ ಕಾಮತ್ ಅವರ ಪುತ್ರಿ. ಅರ್ಚನಾ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದು, ಅರ್ಚನಾ ಕಾಮತ್ ಈವರೆಗೆ ರಾಷ್ಟ್ರೀಯ ಪಂದ್ಯಾವಳಿಯಲ್ಲಿ  ಒಟ್ಟು 17  ಪದಕಗಳನ್ನುಗೆದ್ದಿದ್ದಾರೆ. ಅದರಲ್ಲಿ 11 ಚಿನ್ನದ ಪದಕಗಳು ಎಂಬುದೇ ವಿಶೇಷ.

15 ವರ್ಷ ಒಳಗಿನ ಸಬ್​ ಜೂನಿಯರ್, 18 ವರ್ಷದೊಳಗಿನ ಜೂನಿಯರ್, 21 ವರ್ಷದೊಳಗಿನವರ ಯೂತ್ ಬಾಲಕಿಯರು ಹಾಗೂ ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಆಟವಾಡಿ ಕರ್ನಾಟಕದ ಮಟ್ಟಿಗೆ ಈ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. 2013 ಅರ್ಚನಾ ಕ್ರೀಡಾ ಬದುಕಿಗೆ ಹೊಸ ತಿರುವು ನೀಡಿದ್ದು, ವಿವಿಧ ವಯೋಮಾನದ ಟೂರ್ನಿಗಳಲ್ಲಿ 30 ಪ್ರಶಸ್ತಿ ಪಡೆದುಕೊಂಡಿದ್ದರು.

archana kamath

ಟೇಬಲ್ ಟೆನಿಸ್ ಆಟದಲ್ಲಿ ನಿರತರಾಗಿರುವ ಅರ್ಚನಾ  ಕಾಮತ್

ಬಾಲ್ಯದಲ್ಲಿ ಹೇಗಿದ್ದರು ಅರ್ಚನಾ? ಇಂದು ದೊಡ್ಡ ಸಾಧಕಿಯಾಗಿ ಗುರುತಿಸಿಕೊಂಡಿರುವ ಅರ್ಚನಾ ಬಾಲ್ಯದಿಂದ..ಇಲ್ಲಿಯವರೆಗಿನ ಪಯಣ ಹೇಗಿತ್ತು ಎಂಬುದನ್ನು ಅವರ ತಾಯಿ ಅನುರಾಧಾ ಕಾಮತ್​ ಟಿವಿ9 ಕನ್ನಡ ಡಿಜಿಟಲ್ ಜತೆ ಹಂಚಿಕೊಂಡಿದ್ದಾರೆ. ಸುಮಾರು 8 ವರ್ಷದ ಬಾಲಕಿಯಾಗಿದ್ದಾಗ ಅರ್ಚನಾ ಬೆಸಿಗೆ ರಜಾ ದಿನಗಳನ್ನು ಕಳೆಯಲು ಅವಳ ದೊಡ್ಡಪ್ಪನ ಮನೆಗೆ ಹೋಗಿದ್ದಳು. ಆಗ ಅಲ್ಲಿ ಟೇಬಲ್ ಟೆನಿಸ್​ ಆಡಲು ವ್ಯವಸ್ಥೆ ಇತ್ತು.  ಅಲ್ಲಿ ತುಂಬ ಚೆನ್ನಾಗಿ ಆಟ ಆಡುತ್ತಿದ್ದಳು. ನಂತರ ಅರ್ಚನಾ ಮನೆ ಬಂದಾಗಲೂ ನಾವು ಕೂಡ ಮನೆಯಲ್ಲಿ ಟೇಬಲ್ ಹಾಕಿ ಕೊಟ್ಟೆವು. ಅವಳು ಮತ್ತು ಅವಳ ಅಣ್ಣ ಅಭಿನವ್ ಇಬ್ಬರೂ ಆಟ ಆಡುತ್ತಿದ್ದರು . ಅವಳಿಗಿಂತ ಅವಳ ಅಣ್ಣನಿಗೆ ಟೇಬಲ್ ಟೇನಿಸ್​ನಲ್ಲಿ ಬಹಳ ಆಸಕ್ತಿ ಇತ್ತು. ಅವನೇ ಇವಳಿಗೆ ಹೆಚ್ಚು ಉತ್ಸಾಹ ತುಂಬುತ್ತಿದ್ದ ಎಂದು  ಅಂದಿನ ದಿನಗಳನ್ನು ನೆನಪಿಸಿಕೊಂಡರು.

archana kamath

ಟೇಬಲ್ ಟೆನ್ನಿಸ್​  ಕ್ರೀಡೆಯಲ್ಲಿ ಪದಕ ಗೆದ್ದ ಕ್ಷಣ

ಅವಳ ಆಸಕ್ತಿಯನ್ನು ಗಮನಿಸಿ ನಾವು ಬೆಂಗಳೂರಿನ ಜಗದೀಶ್ ಎಂಬ ಕೋಚ್ ಬಳಿ ಅವಳನ್ನ ತರಬೇತಿಗೆ ಕಳುಹಿಸಿದೆವು. ಅಲ್ಲಿ ಅರ್ಚನಾ 4ರಿಂದ 5 ತಿಂಗಳು ತರಬೇತಿ ಪಡೆದುಕೊಂಡಳು. ಅರ್ಚನಾಳ ಆಸಕ್ತಿ ನೋಡಿ ಕೋಚ್ ಅವಳಿಗೆ ಈ ಕ್ಷೇತ್ರದಲ್ಲಿ ಮುಂದೆ ಒಳ್ಳೆಯ ಭವಿಷ್ಯ ಇದೆ ಎಂದು ಅವತ್ತೆ ಹೇಳಿದರು. ನಂತರದಲ್ಲಿ ರಾಜಾಜಿನಗರದ ಪ್ರವೀಣ್ ಜೋಶಿ ಅವರ ಬಳಿ 2ವರ್ಷಗಳ ಕಾಲ ತರಬೇತಿ ಪಡೆದುಕೊಂಡಳು. ಅರ್ಚನಾಳ ಗೆಲುವು 2013 ರಲ್ಲಿ ಅಜ್ಮೀರ್​ನಲ್ಲಿ ನಡೆದ ಸಬ್​ ಜೂನಿಯರ್ ನ್ಯಾಷನಲ್ಸ್ ಸಿಂಗಲ್ ಪ್ರಶಸ್ತಿಯೊಂದಿಗೆ ಆರಂಭವಾಯಿತು ಎಂದು ಅನುರಾಧಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

archana kamath

ಅರ್ಚನಾ ಪದಕವನ್ನು ಸ್ವೀಕರಿಸುತ್ತಿರುವ ದೃಶ್ಯ

ವೃತ್ತಿಯಲ್ಲಿ ಡಾಕ್ಟರ್ ಆಗಿರುವ ನಾನು ಒಮ್ಮೆ ಬೆಂಗಳೂರಿನಲ್ಲಿ ನಡೆದ ಟೂರ್ನಿಮೆಂಟ್​ಗೆ ಅರ್ಚನಾ ಕಾಮತ್​ಳನ್ನು ಕೆಲಸದ ಒತ್ತಡದ ನಡುವೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದಾದ ಮೇಲೆ ಅವಳ ಅಣ್ಣನಿಗೆ ಕೋಪ ಬಂತು. ಅರ್ಚನಾಳಲ್ಲಿ ಆಸಕ್ತಿ ಇದೆ. ಅವಳಲ್ಲಿ ಅಷ್ಟು ಸಾಮರ್ಥ್ಯ ಇರುವಾಗ ಅವಳನ್ನು ನೀವು ಕರೆದುಕೊಂಡು ಹೋಗಲಿಲ್ಲ. ಇದು ಅರ್ಚನಾಳ ತಪ್ಪು ಅಲ್ಲ.. ಅವಳ ಅಮ್ಮ ಡಾಕ್ಟರ್ ಆಗಿರುವುದರಿಂದ ಹೀಗಾಯಿತು..ನಿಮ್ಮ ಆಸ್ಪತ್ರೆಗೆ ಬೇರೆ ವೈದ್ಯ ಬರುತ್ತಾರೆ. ಆದರೆ ಅವಳಿಗೆ ಅಮ್ಮ ಇರುವುದು ಒಬ್ಬರೇ ಎಂದು  ಮಾತನಾಡಿದ್ದ . ಅಂದೇ ಮಗಳಿಗೆ ಸಮಯ ನೀಡಲು ನಾನು ನಿರ್ಧಾರ ಮಾಡಿದೆ. ಅರ್ಚನಾಳನ್ನು ತರಬೇತಿಗೆ ಮತ್ತು ಪಂದ್ಯಗಳಿಗೆ ಕರೆದುಕೊಂಡು ಹೋಗಲು ಪ್ರಾರಂಭ ಮಾಡಿದೆ. ಓದಿನಲ್ಲೂ ಕೂಡ ಅರ್ಚನಾ ಕಾಮತ್​ಗೆ ಬಹಳ ಆಸಕ್ತಿ ಇತ್ತು ಹೀಗಾಗಿ ಅವಳ ವಿದ್ಯಾಭ್ಯಾಸಕ್ಕೆ ಮತ್ತು ಕ್ರೀಡೆಗೆ ಅವಳಿಗೆ ನಾನು ಪ್ರೋತ್ಸಾಹ ನೀಡುವುದು ಆ ಕಾಲಕ್ಕೆ ಬಹಳ ಮುಖ್ಯವಾಗಿತ್ತು ಎಂದು ಅನುರಾಧಾ ಹಳೆಯ ಸನ್ನಿವೇಶವೊಂದನ್ನು ನೆನೆದು ಮಾತನಾಡಿದ್ದಾರೆ.

archana kamath

ಅರ್ಚನಾ ಕಾಮತ್ ಚಿನ್ನದ ಪದಕ ಗೆದ್ದ ಕ್ಷಣ

ಕ್ರೀಡೆ ಮತ್ತು ವಿದ್ಯಾಭ್ಯಾಸ  ಕ್ರೀಡೆ ಮತ್ತು ವಿದ್ಯಾಭ್ಯಾಸವನ್ನು ಒಟ್ಟಿಗೇ ನಿಭಾಯಿಸುವುದು ಕಷ್ಟವಾಗುತ್ತದೆ ಆದರೆ..ಅರ್ಚನಾ ಕ್ರೀಡೆ ಮತ್ತು ವಿದ್ಯಾಭ್ಯಾಸ ಎರಡನ್ನು ಚೆನ್ನಾಗಿ ನಿಭಾಯಿಸಿದ್ದಾಳೆ. 10ನೇ ತರಗತಿಯಲ್ಲಿ ಅರ್ಚನಾ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾಳೆ. ಪಿಯುಸಿ ಅಲ್ಲಿಯೂ ಕೂಡ ರ್ಯಾಂಕ್ ಪಡೆದುಕೊಂಡಿದ್ದಾಳೆ. ಇನ್ನು ಶಾಲೆ ಮತ್ತು ಕಾಲೇಜುಗಳಲ್ಲೂ ಆಕೆಗೆ ಪ್ರೋತ್ಸಾಹ ನೀಡಿದ್ದು, ಪರೀಕ್ಷೆಯ ಸಂದರ್ಭದಲ್ಲಿ ಸ್ಪೇಷಲ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಆಕೆಗೆ ಬೆಂಬಲ ನೀಡಿದರು. ಸದ್ಯ ಅರ್ಚನಾ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾಳೆ.

ದೈಹಿಕ ಸಮಸ್ಯೆಗಳ ಸರಿದೂಗಿಸಿಕೊಳ್ಳುವಿಕೆ: ಮುಟ್ಟಿನಂತಹ ಸಮಸ್ಯೆಗಳು ಸಾಮಾನ್ಯ. ಅದರಲ್ಲೂ ನಾನು ಮೂಲತಃ ಸ್ತ್ರೀ ರೋಗ ತಜ್ಞೆಯಾಗಿ ಕೆಲಸ ಮಾಡಿರುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎನ್ನುವುದು ನನಗೆ ಗೊತ್ತು. ಇಂತಹ ಸಂದರ್ಭದಲ್ಲಿ ಗಮನಕೊಟ್ಟಷ್ಟು ಜಾಸ್ತಿ ಸಮಸ್ಯೆಗಳಾಗುತ್ತದೆ ಎನ್ನುವುದು ನನಗೆ ಗೊತ್ತು. ಜಸ್ಟ್ ಟ್ರಿಟ್​ ಆ್ಯಸ್ ಅದರ್ ಡೇ ಎಂದು ನನ್ನ ಸ್ನೇಹಿತೆ ಒಬ್ಬರು ಹೇಳಿದ್ದರು. ಇನ್ನು ಶಾಲೆಗಳಲ್ಲೂ ಈ ಬಗ್ಗೆ ಅರ್ಚನಾಳಿಗೆ ಮಾಹಿತಿ ನೀಡಿದ್ದರಿಂದ ಇದನ್ನು ಸರಿದೂಗಿಸಿಕೊಂಡು ಹೋಗುತ್ತಾಳೆ ಎನ್ನುವ ನಂಬಿಕೆ ಆಕೆಗೆ ಬಂತು. ಈ ಬಗ್ಗೆ ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಅರ್ಚನಾ ತಾಯಿ ಹೇಳಿದ್ದಾರೆ.

archana kamath

ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಸಾಧನೆಗೈದ ಅರ್ಚನಾ

ಮೊದಲ ಗೆಲುವಿನ ಕ್ಷಣ ಮೊದಲ ಗೆಲುವಿನ ಬಗ್ಗೆ ತುಂಬ  ಖುಷಿ ಆಯಿತು. ಏಕೆಂದರೆ ಅವಳು ಯಾವುದೇ ಕೆಲಸವಾಗಲಿ ಅದನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುತ್ತಾಳೆ. ಅದು ಓದು ಆಗಿರಬಹುದು ಅಥವಾ ಕ್ರೀಡೆ ಆಗಿಬಹುದು ಯಾವುದೇ ಕೊಟ್ಟರು ಶೇಕಡಾ 100ರಷ್ಟು ಶ್ರಮ ವಹಿಸುತ್ತಾಳೆ. ಅವಳು ಎಲ್ಲಾ ಶಕ್ತಿಯನ್ನು ಪ್ರದರ್ಶಿಸಿ ಆಟ ಆಡುತ್ತಾಳೆ. ಕರ್ನಾಟಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಿಸಿ ಜಯ ಗಳಿಸಿದಾಗ ಅವಳ ಖುಷಿ ನೋಡಿ ನಮಗೆ ಖುಷಿ ಆಯ್ತು. ಅವಳ ಪ್ರಯತ್ನಕ್ಕೆ ಬೆಲೆ ಸಿಕ್ಕಿತಲ್ಲ ಎಂದು ಹೆಮ್ಮೆ ಆಯ್ತು ಎಂದು ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಟೇಬಲ್ ಟೇನಿಸ್ ಸ್ಪರ್ಧೆಯಲ್ಲಿ ಅರ್ಚನಾ ಭಾಗವಹಿಸಿ ಫ್ರಾನ್ಸ್ ಪದಕ ಗೆದ್ದಾಗ, ಆ ಗೆಲುವಿಗಿಂತಲೂ ಅರ್ಚನಾ ಕಾಮತ್ From ಭಾರತ ಎಂದ ಮಾತು ಆಕೆಗೆ ಹೆಚ್ಚು ಖುಷಿ ಮತ್ತು ಹೆಮ್ಮೆ ಉಂಟು ಮಾಡಿತ್ತು ಎಂದು ಅರ್ಚನಾ ಗಿರೀಶ್ ಕಾಮತ್ ಅವರ ಗೆಲುವಿನ ಕ್ಷಣವನ್ನು ಅನುರಾಧ ನೆನಪಿಸಿಕೊಂಡಿದ್ದಾರೆ.

archana kamath

ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅರ್ಚನಾ ಕಾಮತ್

ತರಬೇತುದಾರರ ಜೊತೆಗಿನ ಒಡನಾಟ ತರಬೇತುದಾರರ ವಿಷಯದಲ್ಲಿ ಅರ್ಚನಾ ಬಹಳ ಅದೃಷ್ಟವಂತೆ ಎಂದು ಹೇಳಬಹುದು. ಸದ್ಯ ಅರ್ಚನಾಳಿಗೆ ಎರಡು ತರಬೇತುದಾರರಿದ್ದಾರೆ. ಬೊನಾ ಥಾಮಸ್ ಜಾನ್ ಮತ್ತು ಸಗಯರಾಜ್ ಇಬ್ಬರೂ ಕೂಡ ಆಕೆಯ ಏಳಿಗೆಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅರ್ಚನಾ ಕೂಡ ಅವರೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾಳೆ. ಇನ್ನೂ ತರಬೇತಿಯ ಸಮಯನ್ನು ಹೇಳುವುದಾದರೆ ಅರ್ಚನಾ ಬೆಳಗ್ಗೆ 5ರಿಂದ 8ವರೆಗೆ ಅಭ್ಯಾಸ ಮಾಡುತ್ತಿದ್ದಳು. ಕೆಲವೊಮ್ಮೆ ಸಂಜೆಯೂ ಕೂಡ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾಳೆ ಅಂತಹ ಸಂದರ್ಭದಲ್ಲಿ ಪೊಷಕರಾದ ನಾವು ಆಕೆ ಜೊತೆಗೆ ಇದ್ದು ಅರ್ಚನಾಳನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದೇವೆ.

ಆಕೆಗೆ ಇರುವ ಶಿಸ್ತು ಮತ್ತು ಏಕಾಗ್ರತೆ- ಈ ಎರಡು ವಿಷಯಗಳಿಂದ ಆಕೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ ಎಂದು ಹೇಳಬಹುದು. ಅರ್ಚನಾ ಮೇಲಿನ ನಂಬಿಕೆ ಏನು ಎಂದರೆ ತನ್ನ ಗುರಿ ಏನಿದೆ ಅದನ್ನು ನಿಜವಾಗಿಸುವ ನಿಟ್ಟಿನಲ್ಲಿ ಅರ್ಚನಾ ಪ್ರಯತ್ನಪಡುತ್ತಾಳೆ. ಅರ್ಚನಾ ಸ್ವಾಮಿ ವಿವೇಕಾನಂದರ ಭಕ್ತಳಾಗಿದ್ದು, ಅವರ ಎಲ್ಲಾ ಪುಸ್ತಕಗಳನ್ನು ಆಕೆ ಓದಿದ್ದಾಳೆ. ಅವರ ಜನ್ಮದಿನದಂದು ವಿವೇಕಾನಂದರಿಗೆ ಸಂಬಂಧಪಟ್ಟ ಪುಸ್ತಕಗಳನ್ನು ತರಗತಿಯಲ್ಲಿ ಹಂಚುತ್ತಿದ್ದಳು..  ಭಾರತಕ್ಕೆ ಆಡಿ ಪದಕಗಳನ್ನು ತರಬೇಕು ಎನ್ನುವ ಗುರಿಯನ್ನು ಅರ್ಚನಾ ಹೊಂದಿದ್ದಾಳೆ. ಹೆಣ್ಣು- ಗಂಡು ಭಾವನೆ ಇಲ್ಲ, ಒಬ್ಬ ಭಾರತೀಯಳಾಗಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾಳೆ ಎಂಬ ಹೆಮ್ಮೆ ಇದೆ ಎಂದು ಅನುರಾಧಾ ಹೇಳಿದ್ದಾರೆ.

ಸರ್ಕಾರದ ನೆರವು  ಡಿವೈಎಸ್​ಎಸ್​ (ಯುವ ಸೇವೆಗಳು ಮತ್ತು ಕ್ರೀಡಾ ಇಲಾಖೆ) ತುಂಬಾನೇ  ಪ್ರೋತ್ಸಾಹ ನೀಡಿದೆ. ಕರ್ನಾಟಕ ಸರ್ಕಾರ ಪದಕ ಗೆದ್ದಾಗ ಪ್ರೋತ್ಸಾಹ ಧನ ನೀಡಿದೆ. ಇನ್ನು ಕಂಠೀರವದಲ್ಲಿ ಸ್ಪೋರ್ಟ್ಸ್ ಸೆಂಟರ್ ಪ್ರಾರಂಭಿಸಿದ್ದು, ಇಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಲಹೆ -ಸೂಚನೆಗಳನ್ನು ನೀಡುತ್ತಿದ್ದಾರೆ. ಇನ್ನು ಸೋತಾಗ ಆಕೆಗೆ ಸಹಜವಾಗಿ  ಬಹಳ ಬೇಜಾರಾಗುತ್ತದೆ. ಆದರೆ ಇತ್ತೀಚೆಗೆ ಅರ್ಚನಾ ತನ್ನ ಗೆಲುವು ಸಂಭ್ರಮಿಸುವುದನ್ನು ಆರಂಭಿಸಿದ್ದಾಳೆ. ಮುಂಚೆ ಅರ್ಧ ಅಥವಾ 1 ಅಂಕಗಳು ಪರೀಕ್ಷೆಯಲ್ಲಿ ಕಳೆದುಕೊಂಡರು ಬಹಳ ದುಃಖ ಪಡುತ್ತಿದ್ದಳು. ಆದರೆ ಈಗ ಈ ವಿಷಯದಲ್ಲಿ ಬದಲಾವಣೆಗಳು ಸ್ವಲ್ಪಮಟ್ಟಿಗೆ ಆಗಿದೆ.

ಮಗುವಿಗೆ ಪ್ರೋತ್ಸಾಹ ಅಗತ್ಯ ಎಲ್ಲಾ ತಂದೆ -ತಾಯಿಯೂ ಯಾವ ಮಗು ತನ್ನ ಆಸಕ್ತಿಯನ್ನು ಕ್ರೀಡೆಯಲ್ಲಿ ತೋರಿಸುತ್ತದೆಯೋ ಆ ಮಗುವಿಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯ. ಆಸಕ್ತಿ ಇರುವ ಮಗು ಹೋಗಿ ಆಡುವುದಷ್ಟೇ ಅಲ್ಲ ಇಡೀ ಕುಟುಂಬ ಆ ಮಗುವಿನೊಂದಿಗೆ ತೊಡಗುವುದು ಬಹಳ ಮುಖ್ಯ ಎನಿಸುತ್ತದೆ. ಸೋಲುತ್ತೇನೆ ಎನ್ನುವ ಭಯವನ್ನು ಮೊದಲು ಪೊಷಕರು ತೆಗೆದು ಹಾಕಿದರೆ ಖಂಡಿತಾ ಮಕ್ಕಳು ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಅರ್ಚನಾ ಕಾಮತ್ ತಾಯಿ ಡಾ. ಅನುರಾಧ ಕಾಮತ್ ಸಲಹೆ ನೀಡಿದ್ದಾರೆ.

ಸದ್ಯ ಕತಾರ್​ನ ಜೋಹದ್​ನಲ್ಲಿ ಟೂರ್ನಿಮೆಂಟ್ ನಡೆಯುತ್ತಿದೆ. ಮಾರ್ಚ್ 6ರಂದು ಈ ಸ್ಪರ್ಧೆ ಆರಂಭವಾಗಿದ್ದು, ಅರ್ಚನಾ ಕಾಮತ್ ಭಾರತೀಯ ವಿಭಾಗದ ಆಟಗಾರ್ತಿಯಾಗಿ ಇಲ್ಲಿ ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಅರ್ಚನಾ ಗಿರೀಶ್ ಕಾಮತ್ ಜಯಗಳಿಸಿ ಮತ್ತಷ್ಟು ಸಾಧನೆಗಳನ್ನು ಮಾಡಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ: International Women’s Day 2021: ‘ಸವಾಲಿಗೆ ಸಿದ್ಧ ನಾವು..’ – ಮಹಿಳಾ ದಿನಾಚರಣೆಯ ಈ ಘೋಷವಾಕ್ಯಕ್ಕೆ ಒಪ್ಪಿಗೆಯಿದ್ದರೆ ಕೈ ಎತ್ತಿ !

Published On - 3:12 pm, Mon, 8 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್