ಬೆಂಗಳೂರು, (ಜುಲೈ 18): ಇಂದು (ಜುಲೈ 18) ಸಂಜೆಯವರೆಗೂ ನಡೆಯಲಿರುವ ಮಹಾಘಟಬಂಧನ್ ಬೈಠಕ್‌ನಲ್ಲಿ(Opposition Party Meeting) ಬಿಜೆಪಿಯನ್ನು ಕಟ್ಟಿ ಹಾಕುವ ತಂತ್ರೋಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಲಿರುವ ಮಿತ್ರಪಕ್ಷಗಳ ನಾಯಕರು ಮಹತ್ವದ ಘೋಷಣೆ ಹೊರಡಿಸಲಿದ್ದಾರೆ. ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಯಲ್ಲಿ 2024ರ ಲೋಕಸಭೆ ಚುನಾವಣೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ನಿರ್ಧರಿಸುವ ಹೊರತಾಗಿ ವಿವಿಧ ವಿಷಯಗಳ ಬಗ್ಗೆ ನಿರ್ಧರಿಸಲು ಸಂಚಾಲಕರನ್ನು ನೇಮಿಸಿ, ವಿವಿಧ ತಂಡಗಳನ್ನು ರಚಿಸುವ ಸಾಧ್ಯತೆಯಿದೆ. ಪ್ರತಿಪಕ್ಷಗಳಲ್ಲಿಯೇ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿರುವುದರಿಂದ, ತಾನೇ ಹೊಸ ಮೈತ್ರಿಕೂಟದ ನೇತೃತ್ವದ ವಹಿಸಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ ಪಾರಸ್ vs ಚಿರಾಗ್; ಬಣ ವಿಲೀನಕ್ಕೆ ಬಿಜೆಪಿ ಪ್ರಯತ್ನ
ಇಂದು (ಜುಲೈ 18) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುವ ವಿಪಕ್ಷಗಳ ಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬಳಿಕ ಬೆಳಗ್ಗೆ 11.10ರಿಂದ 6 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ ಮಾಡುವುದು. ಸಭೆಯಲ್ಲಿ ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಹಾ ಮೈತ್ರಿಕೂಟದ ಸಭೆ ಅಂತ್ಯವಾಗಲಿದೆ. ನಂತರ ನಾಯಕರು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮೈತ್ರಿಕೂಟ ಸಭೆಯ ನಿರ್ಣಯ ಬಗ್ಗೆ ಘೋಷಣೆ ಮಾಡಲಿದ್ದಾರೆ.
2024 ರ ಲೋಕಸಭೆ ಚುನಾವಣೆಯನ್ನು ಯಾವುದೇ ಒಬ್ಬ ‘ನಾಯಕ ವರ್ಸಸ್ ಮೋದಿ’ ನಡುವಿನ ಯುದ್ಧವನ್ನಾಗಿ ಮಾಡದೆ, ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಮತ್ತು ಅದನ್ನು ‘ಮೋದಿ ವರ್ಸಸ್ ಜನರ’ ಯುದ್ಧವನ್ನಾಗಿ ಮಾಡಲು ವಿರೋಧ ಪಕ್ಷಗಳು ಉತ್ಸುಕವಾಗಿವೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕೆಂದು ಪ್ರತಿಪಕ್ಷಗಳು ಶಪಥ ಮಾಡಿದ್ದು, ಇದಕ್ಕೆ ಕೌಂಟರ್ ಎಂಬಂತೆ ನಡೆಯುತ್ತಿರೋ ಎನ್‌ಡಿಎ ಸಭೆ ಕುತೂಹಲ ಕೆರಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ