ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಯಾವುದೇ ಚುನಾವಣೆ ನಡೆಯಲಿ, ಅದು ಸುಸೂತ್ರವಾಗಿ ನಡೆಯುವುದಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಇಂದು ನಡೆದ ಕೋಲ್ಕತ್ತ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲೂ ಕೂಡ ಇದು ಸಾಬೀತಾಗಿದೆ. ಇಂದು ನಡೆದ ಚುನಾವಣೆಯಲ್ಲೂ ಕೂಡ ವಿವಿಧ ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದಿದೆ. ಮಧ್ಯಕೋಲ್ಕತ್ತದ ವೋಟಿಂಗ್ ಬೂತ್ವೊಂದರದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡ ಘಟನೆಯೂ ನಡೆದಿದೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್ ಗೂಂಡಾಗಳು, ಬಿಜೆಪಿ ಅಭ್ಯರ್ಥಿಯೊಬ್ಬರ ಪತ್ನಿಗೆ ರೇಪ್ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ ಆರೋಪಿಸಿದ್ದಾರೆ.
ಬಿಜೆಪಿ ಆರೋಪವೇನು?
ಕೋಲ್ಕತ್ತ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲೂ ಟಿಎಂಸಿ ಗೂಂಡಾಗಳು ತೊಂದರೆ ಕೊಟ್ಟಿದ್ದಾರೆ. ಬಹುತೇಕ ಬೂತ್ಗಳಲ್ಲಿ ಹಿಡಿತ ಸಾಧಿಸಲು ಪ್ರಯತ್ನ ಮಾಡಿದ್ದಾರೆ. ನಮ್ಮ ಚುನಾವಣಾ ಏಜೆಂಟ್ಗಳನ್ನು ಮತಗಟ್ಟೆಗಳಿಗೆ ಪ್ರವೇಶ ಮಾಡಲು ಬಿಟ್ಟಿಲ್ಲ. ಟಿಎಂಸಿ ಬೆಂಬಲಿತ ದುಷ್ಕರ್ಮಿಗಳು ನಮ್ಮ ಮಾಜಿ ಉಪಮೇಯರ್ ಮೀನಾ ದೇವಿ ಪುರೋಹಿತ್ರ ಮೇಲೆ ಹಲ್ಲೆ ನಡೆಸಿದ್ದಾರೆ. ನಾವು ರಾಜ್ಯಾದ್ಯಂತ ಈ ಹಿಂಸಾಚಾರಗಳ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಹೇಳಿದೆ. ಈ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ನಡೆದ ವಿಧಾನದ ಬಗ್ಗೆ ನಮಗೆ ಆಕ್ಷೇಪವಿದೆ. ನಾನು ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ನಡೆದ ವಿಷಯವನ್ನು ತಿಳಿಸುತ್ತೇನೆ. ಮಮತಾ ಬ್ಯಾನರ್ಜಿ, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ರಂತೆ ವರ್ತಿಸುತ್ತಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ಮರು ಚುನಾವಣೆಗೆ ಆಗ್ರಹ
ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಕೂಡ ಟಿಎಂಸಿ ವಿರುದ್ಧ ದೌರ್ಜನ್ಯದ ಆರೋಪ ಮಾಡಿದೆ. ಬಾಂಬ್ ಸ್ಫೋಟವಾದ ಮಧ್ಯ ಕೋಲ್ಕತ್ತದ ವಾರ್ಡ್ ನಂಬರ್ 36 ಸೇರಿ, ಇನ್ನೂ ವಿವಿಧ ಬೂತ್ಗಳಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ, ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ. ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ಒಗ್ಗಟ್ಟಾಗಿ ಟಿಎಂಸಿಯ ವಿರುದ್ಧ ಆರೋಪ ಮಾಡುತ್ತಿವೆ. ಇನ್ನು ಚೌರಿಂಗೀ ಪ್ರದೇಶದ ವಾರ್ಡ್ ನಂಬರ್ 45ರಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ನಮ್ಮ ಅಭ್ಯರ್ಥಿ ಫವಾಜ್ ಅಹ್ಮದ್ ಖಾನ್ ವಾಹನವನ್ನು ಟಿಎಂಸಿ ಗೂಂಡಾಗಳು ಧ್ವಂಸಗೊಳಿಸಿದ್ದಾರೆ ಎಂದು ಲೆಫ್ಟ್ ಫ್ರಂಟ್ ಪಕ್ಷ ಆರೋಪಿಸಿದೆ.
ಇನ್ನು ಟಿಎಂಸಿ ತನ್ನ ವಿರುದ್ಧದ ಎಲ್ಲ ಆರೋಪಗಳನ್ನೂ ಅಲ್ಲಗಳೆದಿದೆ. ಪಶ್ಚಿಮ ಬಂಗಾಳ ಪೊಲೀಸರು ಅತ್ಯಂತ ಉತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಹಾಗೇ, ನಾವು ಯಾವುದೇ ರೀತಿಯ ಹಿಂಸಾಚಾರಕ್ಕೂ ಬೆಂಬಲ ನೀಡುವುದಿಲ್ಲ. ಹಾಗೊಮ್ಮೆ ನಮ್ಮ ಟಿಎಂಸಿ ಪಕ್ಷದ ಯಾವುದೇ ಕಾರ್ಯಕರ್ತ, ಸದಸ್ಯ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಗೊತ್ತಾದರೆ 24 ಗಂಟೆಯೊಳಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಕೋಲ್ಕತ್ತ ಮುನ್ಸಿಪಲ್ ವಾರ್ಡ್ನ 144 ವಾರ್ಡ್ಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 4939 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮುಂಜಾನೆ 7ಗಂಟೆಯಿಂದ ಶುರುವಾದ ಮತದಾನ ಸಂಜೆ 5ಗಂಟೆ ತನಕ ನಡೆದಿದೆ. ದಿನದ ಕೊನೆಯಲ್ಲಿ ಒಟ್ಟು ಶೇ. 64ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ವಾರ್ಡ್ ನಂಬರ್ 36ರಲ್ಲಿ ಶಾಲೆಯೊಂದರಲ್ಲಿ ಸ್ಥಾಪಿತವಾಗಿದ್ದ ಮತಗಟ್ಟೆ ಬಳಿ ಕಚ್ಚಾಬಾಂಬ್ ಸ್ಫೋಟಗೊಂಡಿದೆ. ಅದು ಬಿಟ್ಟರೆ ಮೀನಾ ದೇವಿ ತನ್ನ ಮೇಲೆ ಟಿಎಂಸಿ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಹೀಗೆ ಎಂದಿನಂತೆ ಈ ಚುನಾವಣೆಯೂ ಕೂಡ ಹಲವು ಗೊಂದಲಗಳೊಂದಿಗೆ ಮುಕ್ತಾಯವಾಗಿದೆ.
ಇದನ್ನೂ ಓದಿ: ತೆಲುಗು ಬಿಗ್ ಬಾಸ್ ಫಿನಾಲೆ; ವೇದಿಕೆ ಮೇಲೆ ರಶ್ಮಿಕಾ, ರಾಜಮೌಳಿ, ಆಲಿಯಾ ಭಟ್, ರಣಬೀರ್ ಕಪೂರ್
Published On - 8:39 pm, Sun, 19 December 21