ನಿರುದ್ಯೋಗ, ಸಾಲ ಬಾಧೆಯಿಂದ 25,000ಕ್ಕೂ ಹೆಚ್ಚು ಯುವಕರ ಆತ್ಮಹತ್ಯೆ; ರಾಜ್ಯಸಭೆಗೆ ಸರ್ಕಾರ ಮಾಹಿತಿ

| Updated By: ಸುಷ್ಮಾ ಚಕ್ರೆ

Updated on: Feb 09, 2022 | 7:17 PM

ಸುಮಾರು 9,140 ಜನರು ಈ ಅವಧಿಯಲ್ಲಿ ನಿರುದ್ಯೋಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 16,091 ಜನರು ದಿವಾಳಿತನ ಅಥವಾ ಸಾಲದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರವು ಮೇಲ್ಮನೆಗೆ ತಿಳಿಸಿದೆ.

ನಿರುದ್ಯೋಗ, ಸಾಲ ಬಾಧೆಯಿಂದ 25,000ಕ್ಕೂ ಹೆಚ್ಚು ಯುವಕರ ಆತ್ಮಹತ್ಯೆ; ರಾಜ್ಯಸಭೆಗೆ ಸರ್ಕಾರ ಮಾಹಿತಿ
ನಿತ್ಯಾನಂದ ರಾಯ್
Follow us on

ನವದೆಹಲಿ: ಭಾರತದಲ್ಲಿ ನಿರುದ್ಯೋಗದಿಂದಾಗಿ (Unemployment) ಯುವಜನತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಅಘಾತಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರವೇ ನೀಡಿದೆ. 2018ರಿಂದ 2020ರ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 25 ಸಾವಿರ ಮಂದಿ ನಿರುದ್ಯೋಗ ಹಾಗೂ ಸಾಲಭಾದೆಯಿಂದ ನೊಂದು ಬೇಸತ್ತು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಕೇಂದ್ರ ಸರ್ಕಾರ ಬುಧವಾರ ಸಂಸತ್‌ಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದೆ. ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ನಿರುದ್ಯೋಗದ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗುತ್ತಿದೆ. 2018 ಮತ್ತು 2020ರ ನಡುವೆ 25,000ಕ್ಕೂ ಹೆಚ್ಚು ಭಾರತೀಯರು ನಿರುದ್ಯೋಗ ಹಾಗೂ ಸಾಲದ ಕಾರಣದಿಂದ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಸುಮಾರು 9,140 ಜನರು ಈ ಅವಧಿಯಲ್ಲಿ ನಿರುದ್ಯೋಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 16,091 ಜನರು ದಿವಾಳಿತನ ಅಥವಾ ಸಾಲದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರವು ಮೇಲ್ಮನೆಗೆ ತಿಳಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಮಾಹಿತಿಯನ್ನು ಒದಗಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಒದಗಿಸಿದ ದತ್ತಾಂಶವನ್ನು ಆಧರಿಸಿ ಸರ್ಕಾರದ ಅಂಕಿಅಂಶಗಳನ್ನು ನೀಡಿದೆ ಎಂದು ನಿತ್ಯಾನಂದ ರಾಯ್‌ ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ, 2020ರ ಸಾಂಕ್ರಾಮಿಕ ವರ್ಷದಲ್ಲಿ ನಿರುದ್ಯೋಗಿಗಳಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಿವೆ. 2020ರಲ್ಲಿ ಅತಿ ಹೆಚ್ಚು ಅಂದರೆ 3,548 ಮಂದಿ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 2,741 ಮಂದಿ ನಿರುದ್ಯೋಗದಿಂದಾಗಿ ಜೀವನವನ್ನು ಕೊನೆಗೊಳಿಸಿದರೆ, 2019ರಲ್ಲಿ 2,851 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಬಾಧೆಯ ಕಾರಣದಿಂದ ಮಾತ್ರವೇ ಜನರು ಆತ್ಮಹತ್ಯೆ ಮಾಡಿಕೊಂಡಿಲ್ಲ. 2018ರಲ್ಲಿ 4,970 ಮಂದಿ ದಿವಾಳಿತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ 2019ರಲ್ಲಿ ಈ ಸಂಖ್ಯೆ 5,908ಕ್ಕೆ ಏರಿಕೆಯಾಗಿದೆ. 2020ರಲ್ಲಿ 5,213ಕ್ಕೆ ಇಳಿದಿದೆ. ಈಗ ನಡೆಯುತ್ತಿರುವ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ, ಕೋವಿಡ್ -19ರ ಹಿನ್ನೆಲೆಯಲ್ಲಿ ದೇಶ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಬಜೆಟ್ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿ ವಿವಿಧ ವಿರೋಧ ಪಕ್ಷದ ಸಂಸದರು ನಿರುದ್ಯೋಗದ ಸಮಸ್ಯೆಯನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ.

ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ನೋಡುತ್ತಿದೆ ಎಂದು ನಿತ್ಯಾನಂದ ರಾಯ್ ಬುಧವಾರ ಹೇಳಿದ್ದಾರೆ. ಮಾನಸಿಕ ಅಸ್ವಸ್ಥತೆಗಳ ಹೊರೆಯನ್ನು ಪರಿಹರಿಸಲು, ಸರ್ಕಾರವು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು (ಎನ್‌ಎಂಎಚ್‌ಪಿ) ಜಾರಿಗೊಳಿಸುತ್ತಿದೆ. ದೇಶದ 692 ಜಿಲ್ಲೆಗಳಲ್ಲಿ ಎನ್‌ಎಂಎಚ್‌ಪಿ ಅಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಡಿಎಂಎಚ್‌ಪಿ) ಅನುಷ್ಠಾನಕ್ಕೆ ಬೆಂಬಲ ನೀಡುತ್ತಿದೆ ಎಂದು ನಿತ್ಯಾನಂದ ರಾಯ್ ಹೇಳಿದ್ದಾರೆ.

ಕಾರ್ಯಕ್ರಮವು ಆತ್ಮಹತ್ಯೆ ತಡೆಗಟ್ಟುವ ಸೇವೆಗಳು, ಕೆಲಸದ ಒತ್ತಡ ನಿರ್ವಹಣೆ, ಜೀವನ ಕೌಶಲ್ಯ ತರಬೇತಿ ಮತ್ತು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಮಾಲೋಚನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜಿಲ್ಲಾ ಆರೋಗ್ಯ ವಿತರಣಾ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ತಡೆಗಟ್ಟುವಿಕೆ, ಪ್ರಚಾರ ಮತ್ತು ದೀರ್ಘಾವಧಿಯ ನಿರಂತರ ಆರೈಕೆ ಸೇರಿದಂತೆ ಮಾನಸಿಕ ಆರೋಗ್ಯ ಸೇವೆಗಳು ಮತ್ತು ಮಾನಸಿಕ ಆರೋಗ್ಯ ಸೇವೆಗಳ ವಿತರಣೆಯಲ್ಲಿ ಸಮುದಾಯ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತಿ ಹೆಚ್ಚು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರ 10 ವರ್ಷಗಳಲ್ಲಿ 27 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದರೆ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 23 ಕೋಟಿ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ ಎಂದು ಅವರು ಹೇಳಿದ್ದರು.

ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ (ಎಬಿಆರ್‌ವೈ), ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಿಗೆ ಉದ್ಯೋಗ ಹೊಂದಾಣಿಕೆಗಾಗಿ ರಾಷ್ಟ್ರೀಯ ವೃತ್ತಿ ಸೇವೆ (ಎನ್‌ಸಿಎಸ್) ಯೋಜನೆ, ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಮೂಲಕ ಉದ್ಯೋಗ ಮತ್ತು ಆದಾಯ ಉತ್ಪಾದನೆಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದು ರಾಯ್ ಬುಧವಾರ ಹೇಳಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGS), ಪಂ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಮತ್ತು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಗಳು ಗಣನೀಯ ವೆಚ್ಚಗಳೊಂದಿಗೆ ಆರಂಭಿಸಲಾಗಿದೆ.

ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್ ಮಿಷನ್, ಸ್ಮಾರ್ಟ್ ಸಿಟಿ ಮಿಷನ್, ಪುನರುಜ್ಜೀವನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್, ಎಲ್ಲರಿಗೂ ವಸತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉತ್ಪಾದಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುವ ಕಾರಿಡಾರ್ ಸೇರಿದಂತೆ ಅನೇಕ ಕಾರ್ಯಕ್ರಮ, ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.

ಭಾರತದ ಉತ್ಪಾದನಾ ಸಾಮರ್ಥ್ಯಗಳು ಮತ್ತು ರಫ್ತುಗಳನ್ನು ಹೆಚ್ಚಿಸುವ ಪ್ರಮುಖ ವಲಯಗಳಲ್ಲಿ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (PLI) ಯೋಜನೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ ಫೆಬ್ರವರಿ 7 ರಂದು 2022-23ರ ಬಜೆಟ್ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಬಜೆಟ್ ಜನರ ಭರವಸೆ ಮತ್ತು ಆಕಾಂಕ್ಷೆಗಳಿಗೆ ದ್ರೋಹ ಬಗೆದಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Unemployment Rate: ಭಾರತದ ನಿರುದ್ಯೋಗ ದರ ಜನವರಿಯಲ್ಲಿ ತೀಕ್ಷ್ಣವಾಗಿ ಕುಸಿದು ಶೇ 6.57ಕ್ಕೆ

Unemployment In India: 2021ರ ಡಿಸೆಂಬರ್​ನಲ್ಲಿ ಭಾರತದಲ್ಲಿ 5.3 ಕೋಟಿ ನಿರುದ್ಯೋಗಿಗಳು; ಮಹಿಳೆಯರ ಪ್ರಮಾಣ ಹೆಚ್ಚು

Published On - 7:17 pm, Wed, 9 February 22