Unemployment Rate: ಭಾರತದ ನಿರುದ್ಯೋಗ ದರ ಜನವರಿಯಲ್ಲಿ ತೀಕ್ಷ್ಣವಾಗಿ ಕುಸಿದು ಶೇ 6.57ಕ್ಕೆ
ಭಾರತದಲ್ಲಿ ನಿರುದ್ಯೋಗ ದರ ಜನವರಿ ತಿಂಗಳಲ್ಲಿ ಶೇ 6.57ಕ್ಕೆ ಕುಸಿತ ಕಂಡಿದೆ. ಇದಕ್ಕೂ ಮುನ್ನ ಡಿಸೆಂಬರ್ನಲ್ಲಿ ಶೇ 7.91ರಷ್ಟಿತ್ತು.
ಭಾರತದ ನಿರುದ್ಯೋಗ (Unemployment) ದರವು ಜನವರಿ ತಿಂಗಳಲ್ಲಿ ಬಹಳ ತೀಕ್ಷ್ಣವಾಗಿ ಕುಸಿತ ಕಂಡು, ಶೇ 6.57 ತಲುಪಿದೆ. 2021ರ ಮಾರ್ಚ್ ತಿಂಗಳ ನಂತರ ಇದು ಕನಿಷ್ಠ ಮಟ್ಟದ್ದಾಗಿದೆ. ಗ್ರಾಮೀಣ ನಿರುದ್ಯೋಗ ಪ್ರಮಾಣದಲ್ಲಿ ಮಹತ್ತರವಾದ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ನಿರುದ್ಯೋಗ ದರವು ಡಿಸೆಂಬರ್ನಲ್ಲಿ ತೀಕ್ಷ್ಣವಾಗಿ ಏರಿಕೆಯಾಗಿ, ಶೇ 7.91 ಇತ್ತು. ಈ ಪ್ರಮಾಣವು ನವೆಂಬರ್ನಲ್ಲಿ ಶೇ 6.97ರಲ್ಲಿತ್ತು. ಪ್ರಮುಖ ರಾಜ್ಯಗಳಲ್ಲಿ ಕೊವಿಡ್ ಪ್ರಕರಣಗಳು ಕಡಿಮೆ ಆಗುತ್ತಾ ಬಂದಂತೆ ಜನವರಿ 15ರ ನಂತರ ಕೊವಿಡ್ ನಿರ್ಬಂಧಗಳನ್ನು ಸಡಿಲಿಸುತ್ತಾ ಬಂದಿದ್ದರಿಂದ ಇಂಥದ್ದೊಂದು ಬೆಳವಣಿಗೆ ಆಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಡೇಟಾ ತೋರಿಸುವಂತೆ, ಗ್ರಾಮೀಣ ನಿರುದ್ಯೋಗವು ಜನವರಿಯಲ್ಲಿ ಶೇ 5.84ಕ್ಕೆ ಕುಸಿದಿದ್ದು, ಈ ಪ್ರಮಾಣವು 2021ರ ಡಿಸೆಂಬರ್ನಲ್ಲಿ 7.28ರಷ್ಟಿತ್ತು. ಇನ್ನು ನಗರ ನಿರುದ್ಯೋಗ ಪ್ರಮಾಣವು ಜನವರಿಯಲ್ಲಿ ಶೇ 8.16ರಷ್ಟಿದ್ದು, 2021ರ ಡಿಸೆಂಬರ್ನಲ್ಲಿ ಶೇ 9.30ರಷ್ಟಿತ್ತು.
ತೆಲಂಗಾಣದಲ್ಲಿ ಜನವರಿ ತಿಂಗಳಲ್ಲಿ ನಿರುದ್ಯೋಗ ದರವು ಅತ್ಯಂತ ಕನಿಷ್ಠ ಮಟ್ಟವಾದ ಶೇ 0.7ರಷ್ಟಿತ್ತು. ಆ ನಂತರ ಗುಜರಾತ್ ಶೇ 1.2, ಮೇಘಾಲಯ ಶೇ 1.5, ಒಡಿಶಾ ಶೇ 1.8 ಮತ್ತು ನಂತರದ ಸ್ಥಾನದಲ್ಲಿ ಶೇ 2.9ರೊಂದಿಗೆ ಕರ್ನಾಟಕ ಇದೆ. ಇದೆಲ್ಲ ಗಮನಿಸಿ ಹೇಳುವುದಾದರೆ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆಯಲ್ಲಿನ ಪ್ರಮಾಣವು ಗಣನೀಯವಾಗಿ ಇಳಿಕೆ ಆಗಿದೆ. ಸಿಎಂಐಇ ಅಂದಾಜಿಸಿರುವಂತೆ 2021ರ ಡಿಸೆಂಬರ್ನಲ್ಲಿ 5.30 ಕೋಟಿ ಇತ್ತು, ಆ ಪೈಕಿ ಹೆಚ್ಚಿನ ಸಂಖ್ಯೆ ಮಹಿಳೆಯರದಾಗಿದೆ. ಅದರಲ್ಲಿ 3.5 ಕೋಟಿ ನಿರುದ್ಯೋಗಿಗಳು ಸಕ್ರಿಯವಾಗಿ ಕೆಲಸಕ್ಕೆ ಯತ್ನಿಸುತ್ತಿದ್ದಾರೆ. 1.7 ಕೋಟಿ ಮಂದಿ ಕೆಲಸ ಮಾಡುವ ಸಾಮರ್ಥ್ಯ ಇದ್ದರೂ ಸಕ್ರಿಯವಾಗಿ ಪ್ರಯತ್ನಿಸುತ್ತಿಲ್ಲ, ಎಂದು ಸಿಎಂಐಇ ಹೇಳಿತ್ತು.
ಸಿಎಂಐಇ ಪ್ರಕಾರ, 3.5 ಕೋಟಿ ಮಂದಿ ನಿರುದ್ಯೋಗಿಗಳು 2021ರ ಡಿಸೆಂಬರ್ನಲ್ಲಿ ಸಕ್ರಿಯವಾಗಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ್ದಾರೆ. ಶೇ 23ರಷ್ಟು ಅಥವಾ 80 ಲಕ್ಷದಷ್ಟು ಮಹಿಳೆಯರು. ಅದೇ ಸಮಯದಲ್ಲಿ 1.7 ಕೋಟಿ ಮಂದಿ ಪ್ಯಾಸಿವ್ ಆಗಿ ನಿರುದ್ಯೋಗಿಗಳಾಗಿದ್ದಾರೆ. ಶೇ 53ರಷ್ಟು ಅಥವಾ 90 ಲಕ್ಷ ಮಹಿಳೆಯರು ಕೆಲಸ ಮಾಡುವುದಕ್ಕೆ ಸಾಧ್ಯವಿದ್ದರೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ನಿರುದ್ಯೋಗ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿ ಶೇ 23.4ರೊಂದಿಗೆ ಹರ್ಯಾಣ ಇದೆ. ಆ ನಂತರದಲ್ಲಿ ರಾಜಸ್ಥಾನ ಶೇ 18.9, ತ್ರಿಪುರಾ ಶೇ 17.1, ಜಮ್ಮು ಮತ್ತು ಕಾಶ್ಮೀರ್ ಶೇ 15 ಹಾಗೂ ದೆಹಲಿ ಶೇ 14.1ರಷ್ಟಿದೆ.
ಇದನ್ನೂ ಓದಿ: Unemployment: ದೇಶದ ಎಂಟು ಭಾಗಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ; ವಿವಿಧ ರಾಜ್ಯಗಳಲ್ಲಿ ಎರಡಂಕಿ ಮುಟ್ಟಿದ ದರ