ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ತಯಾರಿಸಲು ಕೇಂದ್ರ ಸರ್ಕಾರ ಹೊರತಂದ ಇ-ಶ್ರಮ್ ಪೋರ್ಟಲ್ (E-Shram Portal) ಯಶಸ್ವಿಯಾಗಿದೆ. ಈ-ಶ್ರಮ್ ಪ್ರಾರಂಭವಾಗಿ ಎರಡೇ ತಿಂಗಳಲ್ಲಿ ಅಸಂಘಟಿತ ವಲಯದ 4 ಕೋಟಿಗೂ ಅಧಿಕ ಕಾರ್ಮಿಕರು ಇದರಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ಇದು ನಿಜಕ್ಕೂ ಒಂದು ಮೈಲಿಗಲ್ಲು. ಈ ಪೋರ್ಟಲ್ನಲ್ಲಿ ಹೆಸರು ನೋಂದಣಿ ಮಾಡಿಕೊಂಡ ಕಾರ್ಮಿಕರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅರ್ಹರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇ-ಶ್ರಮ್ ಯೋಜನೆ ಆಗಸ್ಟ್ 26ರಂದು ಉದ್ಘಾಟನೆಯಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣ ಯೋಜನೆ ಇದು. ಅಕ್ಟೋಬರ್ 17ರವರೆಗೆ ಒಟ್ಟು 4.15 ಕೋಟಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು eshram.gov.in ವೆಬ್ಸೈಟ್ನಲ್ಲಿ ತೋರಿಸುತ್ತಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡವರಲ್ಲಿ ಶೇ.50.02ರಷ್ಟು ಮಹಿಳೆಯರೇ ಆಗಿದ್ದಾರೆ. ಉಳಿದ 49.98 ಪರ್ಸಂಟ್ ಜನರು ಪುರುಷರು. ಹಾಗೇ, ಶೇ.43 ಕಾರ್ಮಿಕರು ಒಬಿಸಿ ಸಮುದಾಯದವು, ಶೇ.27 ಜನರು ಜನರಲ್ ಕೆಟೆಗರಿ, ಶೇ.23ರಷ್ಟು ಜನರು ಎಸ್ಸಿಯವರು ಮತ್ತು ಶೇ.7ರಷ್ಟು ಕಾರ್ಮಿಕರು ಎಸ್ಟಿ ಸಮುದಾಯಕ್ಕೆ ಸೇರಿದವರು ಎಂದು ತಿಳಿಸಿದೆ.
ಒಡಿಶಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಿಂದ ಅತಿಹೆಚ್ಚು ಸಂಖ್ಯೆಯ ಕಾರ್ಮಿಕರು ಇ-ಶ್ರಮ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲೂ ಕೃಷಿ ಮತ್ತು ನಿರ್ಮಾಣ ಕ್ಷೇತ್ರದ ಕಾರ್ಮಿಕರೇ ಜಾಸ್ತಿಯಿದ್ದಾರೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ಅದನ್ನು ಹೊರತುಪಡಿಸಿದರೆ ಆಟೋಮೊಬೈಲ್, ಸಾರಿಗೆ, ಎಲೆಕ್ಟ್ರಾನಿಕ್ಸ್, ಹಾರ್ಡ್ವೇರ್, ಶಿಕ್ಷಣ, ಆರೋಗ್ಯ, ರಿಟೇಲ್, ಪ್ರವಾಸೋದ್ಯಮ, ಆತಿಥ್ಯ, ಆಹಾರ ಉದ್ಯಮದ ಕಾರ್ಮಿಕರೂ ಕೂಡ ಇ-ಶ್ರಮ್ ವೇದಿಕೆಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ ಎಂದು ಹೇಳಿದೆ. ಇನ್ನು, ನೋಂದಾಯಿತರಲ್ಲಿ ಶೇ.65.68 ರಷ್ಟು ಮಂದಿ 16-40ವರ್ಷದವರು. ಶೇ.34.32 ರಷ್ಟು ಮಂದಿ 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದೂ ಮಾಹಿತಿ ನೀಡಿದೆ.
ಇದನ್ನೂ ಓದಿ: ಉತ್ತರಾಖಂಡ್ನಲ್ಲಿ ಭಾರಿ ಮಳೆ ಸಾಧ್ಯತೆ; 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಕ್ಷಣಾ ತಂಡಗಳು ಸಜ್ಜು
ಟಿ20 ವಿಶ್ವಕಪ್ಗೆ ಸಾಕ್ಷಿಯಾಗಲು ದುಬೈಗೆ ತೆರಳಿದ್ದಾರಾ ಅನುಷ್ಕಾ?; ಉತ್ತರ ನೀಡುತ್ತಿವೆ ಈ ಚಿತ್ರಗಳು