ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಈ ಬಾರಿ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ (Padma Bhushan for Ghulam Nabi Azad) ಘೋಷಣೆ ಮಾಡಿದೆ. ಗುಲಾಂ ನಬಿ ಆಜಾದ್ ಅವರು ಜಮ್ಮು-ಕಾಶ್ಮೀರದ ಕಾಂಗ್ರೆಸ್ನ ಹಿರಿಯ ರಾಜಕಾರಣಿಯಾಗಿದ್ದಾರೆ. ಆದರೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ್ದಕ್ಕೆ ಕಾಂಗ್ರೆಸ್ನಲ್ಲಿಯೇ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ಗೆ ಪದ್ಮ ಭೂಷಣ ಪ್ರಶಸ್ತಿ ಕೊಟ್ಟಿದ್ದನ್ನು ಸ್ವಾಗತಿಸಿದ್ದಾರೆ. ಆದರೆ ಇನ್ನೊಬ್ಬ ನಾಯಕ, ಮಾಜಿ ಜೈ ರಾಮ್ ರಮೇಶ್ ತುಸು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಗುಲಾಂ ನಬಿ ಆಜಾದ್ರಿಗೆ ಅಭಿನಂದನೆಗಳು. ತನಗೆ ಗುಲಾಂ ನಬಿ ಆಜಾದ್ ಸೇವೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಅವರನ್ನು ನಿರ್ಲಕ್ಷಿಸಿದ ಹೊತ್ತಲ್ಲಿ, ಅವರು ಸಾರ್ವಜನಿಕ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮ ಭೂಷಣ ನೀಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಗುಲಾಂ ನಬಿ ಆಜಾದ್ರಿಗೆ ಪದ್ಮ ಭೂಷಣ ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ಜೈರಾಮ್ ರಮೇಶ್, ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ತಮಗೆ ಬಂದ ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿಯನ್ನು ಶೇರ್ ಮಾಡಿಕೊಂಡು, ಸರಿಯಾಗಿದ್ದನ್ನೇ ಮಾಡಿದ್ದಾರೆ…ಅವರು ತಮಗೆ ಆಜಾದ್ ಬೇಕು. ಗುಲಾಮ ಬೇಡ ಎನ್ನುವುದನ್ನು ಹೇಳಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಗುಲಾಂ ನಬಿ ಆಜಾದ್ಗೆ ಟಾಂಗ್ ಕೊಟ್ಟಿದ್ದರು. ಜೈರಾಮ್ ರಮೇಶ್ ಕಟುವಾಗಿ ಟ್ವೀಟ್ ಮಾಡಿದ ಬೆನ್ನಲ್ಲೇ, ಕಪಿಲ್ ಸಿಬಲ್ ಟ್ವೀಟ್ ಮಾಡಿ, ಕಾಂಗ್ರೆಸ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.
ಮಾಜಿ ಕೇಂದ್ರ ಸಚಿವರಾಗಿರುವ ಗುಲಾಂ ನಬಿ ಆಜಾದ್ ರಾಜ್ಯ ಸಭೆಯಲ್ಲಿ ಪ್ರತಿಪಕ್ಷ (ಕಾಂಗ್ರೆಸ್) ನಾಯಕರು. ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟಿದೆ ಎಂಬುದನ್ನು ಎತ್ತಿ ಹಿಡಿದ ಹಿರಿಯ ನಾಯಕರಲ್ಲಿ ಇವರೂ ಒಬ್ಬರು. ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ಸೋನಿಯಾ ಗಾಂಧಿಗೆ ಬಹಿರಂಗ ಪತ್ರ ಬರೆದು, ದೇಶದ ಅತ್ಯಂತ ಹಳೇ ಪಕ್ಷವಾದ ಕಾಂಗ್ರೆಸ್ ಈಗಿರುವ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿ 23 ಗುಂಪಿನ ನಾಯಕರಲ್ಲಿ ಇವರೂ ಸೇರಿದ್ದಾರೆ. ಕಾಂಗ್ರೆಸ್ ಸದ್ಯ ಅವರನ್ನು ಪಕ್ಷದ ಶಿಸ್ತುಕ್ರಮಾ ಸಮಿತಿಯಿಂದ ಕೈಬಿಟ್ಟಿದೆ. ಹಾಗೇ, ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕನ್ನಾಗಿ ನೇಮಕ ಮಾಡಿದೆ.
ಟ್ವಿಟರ್ ಬಯೋ ಬದಲಾವಣೆ?
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತರನ್ನು ಆಯ್ಕೆ ಮಾಡಲು ಸಾಂಸ್ಥಿಕ ಚುನಾವಣೆ ಅಗತ್ಯ ಎಂದು ಆಜಾದ್ ಹೇಳಿದ್ದರು. ಹೀಗೆ ಬಹಿರಂಗವಾಗಿ ಪಕ್ಷದ ಬಗ್ಗೆ ಬೇಸರ ತೋರಿಸಿದ್ದರಿಂದ ಅವರನ್ನು ಸ್ವಲ್ಪ ದೂರ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಮಧ್ಯೆ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಹೀಗೆ ಪದ್ಮ ಭೂಷಣ ಘೋಷಣೆಯಾದ ಬೆನ್ನಲ್ಲೇ ಗುಲಾಂ ನಬಿ ಆಜಾದ್ ತಮ್ಮ ಟ್ವಿಟರ್ ಬಯೋವನ್ನು ಬದಲಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದನ್ನು ಆಜಾದ್ ಅಲ್ಲಗಳೆದಿದ್ದಾರೆ. ಇದೆಲ್ಲ ಅನವಶ್ಯಕವಾಗಿ ಮಾಡಲಾಗುತ್ತಿರುವ ಪ್ರಚಾರ. ನನ್ನ ಟ್ವಿಟರ್ ಅಕೌಂಟ್ನಲ್ಲಿ ಏನನ್ನೂ ತೆಗೆದು ಹಾಕಿಲ್ಲ, ಯಾವುದನ್ನೂ ಹೊಸದಾಗಿ ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಧ್ವಜಾರೋಹಣ ಮುಗಿಸುತ್ತಿದ್ದಂತೆ ಕಾಣಿಸಿಕೊಂಡ ಎದೆನೋವು: ಎಎಸ್ಐ ಹೃದಯಾಘಾತಕ್ಕೆ ಬಲಿ