
ಮುಂಬೈ, ಏಪ್ರಿಲ್ 29: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ (Pahalgam Terror Attack) ನಡೆಸಿದ ಬೆನ್ನಲ್ಲೆ ಮಹಾರಾಷ್ಟ್ರ ಸರ್ಕಾರ (Maharashtra Government) “ಮಹಾರಾಷ್ಟ್ರ ಪ್ರವಾಸೋದ್ಯಮ ಭದ್ರತಾ ಪಡೆ”ಯನ್ನು ಪ್ರಾರಂಭಿಸಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಹೊಸ ಪಡೆಯನ್ನು ಸರ್ಕಾರ ಆರಂಭಿಸಿದೆ.
ಈ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವ ಶಂಭುರಾಜ್ ದೇಸಾಯಿ ಮಾತನಾಡಿ, “ಪ್ರವಾಸಿಗರ ಸುರಕ್ಷತೆಗಾಗಿ ಈ ಪಡೆಯನ್ನು ನಿಯೋಜಿಸಲಾಗುವುದು. ಪ್ರವಾಸಿಗರಿಗೆ ಮಾರ್ಗದರ್ಶನ ಮತ್ತು ರಕ್ಷಣೆ ನೀಡಲು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದು” ಎಂದು ಹೇಳಿದರು.
“ಮೇ 1 ರಿಂದ 4 ರವರೆಗೆ ಸತಾರಾದಲ್ಲಿ ನಡೆಯಲಿರುವ ಮಹಾಬಲೇಶ್ವರ ಉತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಭದ್ರತಾ ಪಡೆಯನ್ನು ಪ್ರಾಯೋಗಿಕವಾಗಿ ನಿಯೋಜಿಸಲಾಗುವುದು. ರಾಜ್ಯಕ್ಕೆ ಬರುವ ಪ್ರವಾಸಿಗರ ಮನಸ್ಸಿನಲ್ಲಿ ಭದ್ರತಾ ಪ್ರಜ್ಞೆ ಮೂಡಿಸಲು ಮತ್ತು ರಾಜ್ಯದ ಸಂಸ್ಕೃತಿ, ಇತಿಹಾಸ, ಪ್ರವಾಸಿ ಸ್ಥಳಗಳು, ಕಾನೂನುಗಳು, ನಿಯಮಗಳು ಮತ್ತು ಪ್ರವಾಸೋದ್ಯಮದ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಲು, ಪ್ರವಾಸೋದ್ಯಮ ಭದ್ರತಾ ಪಡೆಯನ್ನು ನೇಮಿಸಲಾಗುವುದು” ಎಂದರು.
ಪ್ರವಾಸೋದ್ಯಮ ಕಾರ್ಯದರ್ಶಿ ಅತುಲ್ ಪಟ್ನೆ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. “ಈ ಪಡೆಯು ತರಬೇತಿ ಪಡೆದ ಸಿಬ್ಬಂದಿ, ಆಧುನಿಕ ತಂತ್ರಜ್ಞಾನ ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಪ್ರತಿಕ್ರಿಯಿಸುವ ಸುಸಂಘಟಿತ ವ್ಯವಸ್ಥೆಯನ್ನು ಹೊಂದಿರುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಪಹಲ್ಗಾಮ್ ದಾಳಿ: ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ, ರಾಹುಲ್
ಮಹಾರಾಷ್ಟ್ರ ಸರ್ಕಾರ ಪ್ರವಾಸೋದ್ಯಮದಿಂದ ಈ ವರ್ಷ 1 ಲಕ್ಷ ಕೋಟಿ ರೂ. ಖಾಸಗಿ ಬಂಡವಾಳವನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. 18 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ. ಸರ್ಕಾರವು ಪಡೆಗೆ ಅಗತ್ಯ ವಾಹನಗಳನ್ನು ಒದಗಿಸಲಿದೆ. ಪಡೆಯ ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳನ್ನು ನೇಮಿಸಲು ಸರ್ಕಾರ ಸೂಚಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ