ಅಫ್ಘಾನಿಸ್ತಾನದಲ್ಲಿ ಸದ್ಯ ಇರುವ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಲುವಾಗಿ ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ(National security advisor )ರ ಮಟ್ಟದ ಸಭೆಯನ್ನು ನವೆಂಬರ್ನಲ್ಲಿ ನಡೆಸಲಿದೆ. ಈ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದ್ದು, ರಷ್ಯಾ, ಪಾಕಿಸ್ತಾನ, ಚೀನಾ, ಇರಾನ್, ಉಜ್ಬೇಕಿಸ್ತಾನ್, ತಜಿಕಿಸ್ತಾನ್ಗಳಿಗೆ ಆಹ್ವಾನ ನೀಡಲಿದೆ. ಈ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವುದಿಲ್ಲ. ಬದಲಿಗೆ ನಾಯಕರು ಭೌತಿಕವಾಗಿಯೇ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸದ್ಯ ತಾಲಿಬಾನ್ ಆಡಳಿತ ನಡೆಯುತ್ತಿದ್ದು, ಇನ್ನೂ ಆದೇಶದಲ್ಲಿ ಸ್ಥಿರತೆ ಮೂಡಿಲ್ಲ. ಪದೇಪದೆ ಅಫ್ಘಾನ್ನೊಳಗೇ ದಾಳಿ ನಡೆಯುತ್ತಿದೆ. ಮಸೀದಿಗಳ ಮೇಲೆ ಬಾಂಬ್ ಹಾಕಲಾಗುತ್ತಿದೆ. ನೂರಾರು ಜನರು ಸಾಯುತ್ತಿದ್ದಾರೆ. ಇದೇ ಹೊತ್ತಲ್ಲಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಭಾರತ ಈಗ ಕೆಲವು ರಾಷ್ಟ್ರಗಳಿಗೆ ಆಹ್ವಾನ ನೀಡಲಿದೆ.
ಈ ಮಧ್ಯೆ ಪಾಕಿಸ್ತಾನಕ್ಕೆ ಕಳೆದವಾರವೇ ಭಾರತದಿಂದ ಆಹ್ವಾನ ತಲುಪಿದೆ ಎಂದು ಮೂಲಗಳು ದೃಢಪಡಿಸಿವೆ. ಅಷ್ಟೇ ಅಲ್ಲ ಅಫ್ಘಾನ್ ಪರಿಸ್ಥಿತಿ, ಅಲ್ಲಿನ ಬೆಳವಣಿಗೆ ಬಗ್ಗೆ ಚರ್ಚಿಸಲು ಭಾರತ ಕರೆದಿರುವ ಎನ್ಎಸ್ಎ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಇಲ್ಲಿಗೆ ಆಗಮಿಸಲಿದ್ದಾರೆ ಎಂದೂ ಹೇಳಲಾಗಿದೆ. ಹಾಗೊಮ್ಮೆ ಯೂಸುಫ್ ಭಾರತಕ್ಕೆ ಬಂದರೆ ಅದು ಅವರ ಮೊದಲ ಭಾರತ ಭೇಟಿಯಾಗಲಿದೆ. ಹಾಗೇ ಬರೋಬ್ಬರಿ 5ವರ್ಷಗಳ ನಂತರ ಪಾಕಿಸ್ತಾನದ ಉನ್ನತ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಂತಾಗುತ್ತದೆ. ಅಂದಹಾಗೆ ಈ ಸಭೆಗೆ ಭಾರತ ತಾಲಿಬಾನಿಗಳಿಗೆ ಆಹ್ವಾನ ನೀಡುವುದಿಲ್ಲ ಎಂದು ಹೇಳಲಾಗಿದೆ.
2016ರಲ್ಲಿ ಪಾಕಿಸ್ತಾನದಲ್ಲಿ ನವಾಜ್ ಶರೀಫ್ ಪ್ರಧಾನಮಂತ್ರಿಯಾಗಿದ್ದಾಗ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾಗಿದ್ದ ಸರ್ತಾಜ್ ಆಝೀಜ್ ಭಾರತಕ್ಕೆ ಆಗಮಿಸಿದ್ದರು. ಅಮೃತ್ಸರ್ನಲ್ಲಿ ನಡೆದ ಏಷ್ಯಾ ಮಟ್ಟದ ಸಮ್ಮೇಳನವೊಂದರಲ್ಲಿ ಅವರು ಪಾಲ್ಗೊಂಡಿದ್ದರು. ಅದಾದ ಮೇಲೆ ಪಾಕ್ನಿಂದ ಉನ್ನತಮಟ್ಟದ ಅಧಿಕಾರಿಗಳಾಗಲಿ, ಸಚಿವರಾಗಲಿ ಯಾರೂ ಭಾರತಕ್ಕೆ ಬಂದಿರಲಿಲ್ಲ. ಇದೀಗ ಎನ್ಎಸ್ಎ ಯೂಸುಫ್ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದರೂ, ಅದು ದೃಢಪಡಬೇಕಿದೆ.
ಇದನ್ನೂ ಓದಿ: ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸಲು ಈ ಯೋಗ ಭಂಗಿಗಳು ಸಹಾಯಕ
ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ