Jammu&Kashmir: ಗಡಿಯಲ್ಲಿ ಪಾಕ್ ಏರ್ಲೈನ್ಸ್ ಚಿಹ್ನೆ ಇರುವ ವಿಮಾನ ಆಕಾರದ ಬಲೂನ್ ಪತ್ತೆ
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ಥಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಚಿಹ್ನೆ ಇರುವ ವಿಮಾನ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir) ಗಡಿಯಲ್ಲಿ ಪಾಕಿಸ್ಥಾನ (Pakistan) ಇಂಟರ್ನ್ಯಾಷನಲ್ ಏರ್ಲೈನ್ಸ್ ಲೋಗೋ ಇರುವ ವಿಮಾನ ಆಕಾರದ ನಿಗೂಢ ಬಲೂನ್ (Balloon) ಪತ್ತೆಯಾಗಿದೆ. ಕಥುವಾ ಜಿಲ್ಲೆ ಹೀರಾನಗರದ ಬಳಿ ಬಿದ್ದಿರುವ ಕಪ್ಪು-ಬಿಳಿ ಬಣ್ಣದ ನಿಗೂಢ ಬಲೂನ್ ಅನ್ನು ಬಿಎಸ್ಎಫ್ ಯೋಧರು ವಶಪಡಿಸಿಕೊಂಡಿದ್ದಾರೆ. ಬಲೂನ್ ಮೂಲವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯಾಗಿ 2023ರ ಫೆಬ್ರವರಿಯಲ್ಲಿ ಪಾಕಿಸ್ಥಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಲೋಗೋ ವಿಮಾನ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದ ಸೇಬಿನ ತೋಟದಲ್ಲಿ ಪತ್ತೆಯಾಗಿತ್ತು. ಈ ಮೂಲಕ ಇದೀಗ ಮತ್ತೆ ಎರಡನೇ ಬಾರಿಗೆ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಮೇ 20 ರಂದು ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ಅನ್ನು ಸೇನೆ ಹೊಡೆದುರುಳಿಸಿತ್ತು. ಈ ವೇಳೆ ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ತಿಳಿಸಿದ್ದರು. ಇದರ ಹಿಂದಿನ ದಿನ, ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮೂರು ಪಾಕಿಸ್ತಾನಿ ಡ್ರೋನ್‌ಗಳನ್ನು ಬಿಎಸ್ಎಫ್ ಹೊಡೆದುರುಳಿಸಿತ್ತು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Sat, 10 June 23