ದೆಹಲಿ: ಬಿಜೆಪಿಯ(BJP) ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಹತ್ಯೆ ಮಾಡುವುದಕ್ಕಾಗಿ ಪಾಕಿಸ್ತಾನದಿಂದ (Pakistan) ಅಂತಾರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಬಂದ ವ್ಯಕ್ತಿಯನ್ನು ರಾಜಸ್ಥಾನದ ಶ್ರೀ ಗಂಗಾ ನಗರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಗುಪ್ತಚರ ಇಲಾಖೆ ಮತ್ತು ಇತರ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ಪಾಕ್ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿವೆ. ಜುಲೈ 16ರಂದು ರಾತ್ರಿ ಸರಿಸುಮಾರು 11 ಗಂಟೆ ಹೊತ್ತಿಗೆ ಹಿಂದೂಮಲ್ಕೋಟ್ ಗಡಿ ಔಟ್ ಪೋಸ್ಟ್ ಬಳಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಂಶಯಾಸ್ಪದವಾಗಿ ತೋರಿದ್ದರಿಂದ ಪಟ್ರೋಲಿಂಗ್ ಟೀಂ ಆತನನ್ನು ತಕ್ಷಣವೇ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಆತನ ಬಳಿಯಿಂದ 11 ಇಂಚು ಉದ್ದದ ಕತ್ತಿ, ಧಾರ್ಮಿಕ ಪುಸ್ತಕ, ಬಟ್ಟೆ, ಆಹಾರ ಮತ್ತು ಮರಳಿನ ಚೀಲ ಪತ್ತೆಯಾಗಿದೆ. ರಿಜ್ವಾನ್ ಅಶ್ರಫ್ ಎಂಬ ಹೆಸರಿನ ಈತ ಪಾಕಿಸ್ತಾನದ ಉತ್ತರ ಪಂಜಾಬ್ನ ಮಂಡಿ ಬಹಾವುದ್ದೀನ್ ನಗರದ ನಿವಾಸಿಯಾಗಿದ್ದಾನೆ.
ಆತನನ್ನು ವಿಚಾರಣೆಗೊಳಪಡಿಸಿದಾಗ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಹತ್ಯೆ ಮಾಡಲು ತಾನು ಗಡಿದಾಟಿ ಬಂದಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನ ಆತ ಅಜ್ಮೇರ್ ದರ್ಗಾ ಭೇಟಿ ನೀಡಿಲು ಬಯಸಿದ್ದನಂತೆ.
ಹೆಚ್ಚಿನ ವಿಚಾರಣೆಗಾಗಿ ಆತನನ್ನು ಸ್ಥಳೀಯ ಪೊಲೀಸರಿಗೊಪ್ಪಿಸಲಾಗಿದೆ. ಆತನನ್ನು ಮೆಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದು 8 ದಿನಗಳ ಪೊಲೀಸ್ ಕಸ್ಟಡಿಯಲ್ಲಿರಿಸಲಾಗುವುದು.ಈ ಬಗ್ಗೆ ಸಂಬಂಧಪಟ್ಟ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಗುಪ್ತಚರ ಇಲಾಖೆ, ರಾ ಮತ್ತು ಮಿಲಿಟರಿ ಗುಪ್ತಚರ ಸಂಸ್ಥೆಗಳು ಆತನನ್ನು ವಿಚಾರಣೆಗೊಳಪಡಿಸಿವೆ.
ಪ್ರವಾದಿ ಮೊಹಮ್ಮದ್ ವಿರುದ್ದ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದುದ್ದಲ್ಲದೆ ಗಲ್ಫ್ ರಾಷ್ಟ್ರಗಳಿಂದಲೂ ಆಕ್ರೋಶ ವ್ಯಕ್ತವಾಗಿತ್ತು.
Published On - 3:13 pm, Tue, 19 July 22